ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಸರ್ವಜ್ಞ » ಚೆನ್ನೈಯಲ್ಲಿ ಅನಾವರಣಗೊಂಡಿತು ಸರ್ವಜ್ಞ ಪ್ರತಿಮೆ (Sarvajna | Chennai | Ayanavaram | Ydyrurappa)
 
WD

ಚೆನ್ನೈ: ಸುಮಾರು ಒಂಬತ್ತು ವರ್ಷಗಳಿಂದ ತೆರೆಮರೆಯಲ್ಲೇ ಇದ್ದ ಕನ್ನಡದ ಶ್ರೇಷ್ಠೋತ್ತಮ ಕವಿ, ದಾರ್ಶನಿಕ ಸರ್ವಜ್ಞನ ಪ್ರತಿಮೆ ಅನಾವರಣವು ಚೆನ್ನೈಯಲ್ಲಿ ನಡೆಯುತ್ತಿರುವ ಅದ್ಧೂರಿಯ ಸಮಾರಂಭದಲ್ಲಿ ಗುರುವಾರ ಸಂಜೆ ಅನಾವರಣಗೊಂಡಿತು.

ಇಲ್ಲಿನ ಅಯನಾವರಂನಲ್ಲಿ ಹೊಸಜೀವ ಪಡೆದುಕೊಂಡಿರುವ ಜೀವಾ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ಸರ್ವಜ್ಞನ ಪ್ರತಿಮೆಯನ್ನು, ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ವಿಶಾಲವಾದ ಐಸಿಎಫ್ ಮೈದಾನ (ಆರ್‌ಪಿಎಫ್ ಪೆರೇಡ್ ಮೈದಾನ)ದಲ್ಲಿ ಹಮ್ಮಿಕೊಳ್ಳಲಾಗಿರುವ ಸಭಾ ಕಾರ್ಯಕ್ರಮದ ಬೃಹತ್ ವೇದಿಕೆಯಿಂದ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೂರಸಂವೇದಿ ಗುಂಡಿ ಅದುಮುವ ಮೂಲಕ ಅನಾವರಣಗೊಳಿಸಿದರು.

ತಮಿಳು ಹಾಗೂ ಕನ್ನಡ ನಾಡಗೀತೆಗಳೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ವಹಿಸಿದ್ದರು.

ಕರ್ನಾಟಕ ಹಾಗೂ ತಮಿಳ್ನಾಡಿನ ಶಾಸಕರು ಹಾಗೂ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಇದಲ್ಲದೆ ಉಭಯ ರಾಜ್ಯಗಳ ಸಾಹಿತಿಗಳು ಕಲಾವಿದರು ಸಮಾರಂಭದಲ್ಲಿ ಹಾಜರಿದ್ದರು.

ಬ್ಯಾನರ್‌ಗಳ ಸಾಲುಸಾಲು
ಪ್ರತಿಮೆ ಅನಾವರಣಗೊಂಡ ಜೀವಾ ಪಾರ್ಕಿನ ಸುತ್ತುಮುತ್ತೆಲ್ಲ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಶುಭ ಕೋರುವ ಬ್ಯಾನರ್‌ಗಳು ಹಾರಾಡುತ್ತಿವೆ. ಸಂಪೂರ್ಣ ಪುಷ್ಪಲಂಕಾರದ ವೇದಿಕೆಯ ಇಕ್ಕೆಲಗಳಲ್ಲಿ ಬೃಹದಾಕಾರದ ಎಲ್ಇಡಿ ಟಿವಿಗಳನ್ನು ಅಳವಡಿಸಲಾಗಿದ್ದು, ಸಭಿಕರಿಗೆ ಒಂದುವರೆ ಕಿಲೋಮೀಟರ್ ದೂರದಲ್ಲಿ ನಡೆದ ಪ್ರತಿಮೆ ಅನವಾರಣದ ದೃಶ್ಯಗಳು ಕಾಣುವಂತೆ ವ್ಯವಸ್ಥೆ ಮಾಡಲಾಗಿದೆ.

ಕರುಣಾನಿಧಿ ಹಾಗೂ ಯಡಿಯೂರಪ್ಪ ಅವರ ಬೃದಾಕಾರದ ಚಿತ್ರಪಟಗಳು ವೇದಿಕೆಯ ಬಳಿಯಲ್ಲಿ ಹಾಕಲಾಗಿದೆ. ಇದಲ್ಲದೆ ಕಳೆದ ಭಾನುವಾರ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣದ ವೇಳೆ ಯಡಿಯೂರಪ್ಪ ಅವರನ್ನು ಕರುಣಾನಿಧಿಯವರು 'ತಂಬಿ' ಎಂದು ಸಂಬೋಧಿಸಿದ ಭಾವಪೂರ್ಣ ಕ್ಷಣದಲ್ಲಿ ಕೈಕುಲುಕಿಕೊಂಡಾಗ ತೆಗೆದಿರುವ ದೊಡ್ಡ ಚಿತ್ರವೊಂದು ಸಮಾರಂಭದ ವೇದಿಕೆಯ ಮುಂಭಾಗದಲ್ಲಿ ಕಾಣುತ್ತಿದೆ.

ಬಿಜೆಪಿ ಡಿಎಂಕೆ ಬಾಂಧವ್ಯಕ್ಕೆ ಸೇತುವೆ?
ಕಾರ್ಯಕ್ರಮ ಸ್ಥಳದ ಎಲ್ಲೆಡೆ ಯುಡಿಯೂರಪ್ಪರಿಗೆ ಸ್ವಾಗತಕೋರುವ, ಕಾರ್ಯಕ್ರಮಕ್ಕೆ ಶುಭ ಕೋರುವ ಬ್ಯಾನರ್‌ಗಳು, ಭಿತ್ತಿಚಿತ್ರಗಳ ನಡುವೆ ಎರಡು ಬ್ಯಾನರ್‌ಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ.

ಉಳಿದೆಲ್ಲ ಬ್ಯಾನರ್‌ಗಳಲ್ಲಿ ಯಡಿಯೂರಪ್ಪ ಕರುಣಾನಿಧಿ ಚಿತ್ರಗಳು ಬ್ಯಾನರ್‌ಗಳಲ್ಲಿದ್ದರೆ, ಈ ಎರಡು ಬ್ಯಾನರ್‌ಗಳಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಚಿತ್ರಗಳ ನಡುವೆ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿ, ವಾಜಪೇಯಿ ಹಾಗೂ ರಾಜ್‌ನಾಥ್ ಸಿಂಗ್ ಅವರ ಫೋಟೋಗಳು ಕಾಣತ್ತಿವೆ. ಇದು ಬಿಜೆಪಿ ಮತ್ತು ಡಿಎಂಕೆ ನಡುವಿನ ಹೊಸ ಮೈತ್ರಿಯ ಸೂಚನೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಇದಲ್ಲದೆ ಬೆಂಗಳೂರಿನಲ್ಲಿ ನಡೆದ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯದ ವೇಳೆ ರಾಜ್ಯದ ಬಿಜೆಪಿ ಶಾಸಕರು, ಸಂಸದರು ಅಲ್ಲದೆ ಕೇಂದ್ರದ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಭಾಗವಹಿಸಿದ್ದು ಎದ್ದುಕಾಣುತ್ತಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಸಂಬಂಧಿತ ಮಾಹಿತಿ ಹುಡುಕಿ