ಭಾರತಿ ವಿಷ್ಣುವರ್ಧನ್ ಸುದೀಪ್ ವಿರುದ್ಧ ಅಸಮಾಧಾನದ ಮಾತಾಡಿರುವ ಬೆನ್ನಲ್ಲೇ ಸುದೀಪ್ ಮಾತಾಡಿದ್ದಾರೆ. ನಾನು ಬೆಂಗಳೂರಲ್ಲೇ ಇಲ್ಲ. ಹೈದರಾಬಾದ್‌ನಲ್ಲಿರೋದ್ರಿಂದ ಈ ವಿಚಾರವೇ ನನಗೆ ಈಗಷ್ಟೇ ಗೊತ್ತಾಗಿದ್ದು. ಖಂಡಿತ ನಾನು ಗುರುವಾರ (ಜು.1) ಬೆಂಗಳೂರಿಗೆ ಬಂದು ವಿಷ್ಣು ಮನೆಗೆ ಹೋಗಿ ಭಾರತಿ ಅವರಲ್ಲಿ ಮಾತಾಡುತ್ತೇನೆ. ದ್ವಾರಕೀಶ್ ಅವರಲ್ಲೂ ಮಾತಾಡುತ್ತೇನೆ ಎಂದಿದ್ದಾರೆ.
ಅಂದಹಾಗೆ ಈ ಚಿತ್ರಕ್ಕೆ ವಿಷ್ಣುವರ್ಧನ ಎಂಬ ಹೆಸರು ಸೂಚಿಸಿದ್ದು ಸುದೀಪ್. ನಿರ್ಮಾಪಕ ದ್ವಾರಕೀಶ್ ಅವರಲ್ಲಿ ಈ ಚಿತ್ರದ ಟೈಟಲ್ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ವಿಷ್ಣುವರ್ಧನ ಎಂದೇ ಹೆಸರಿಟ್ಟರೆ ಹೇಗೆ ಅಂತ ಸುದೀಪ್ ಹೇಳಿದರು. ಒಂದು ಕ್ಷಣ ಯೋಚಿಸಿದಾಗ ಹೌದೆನಿಸಿತು. ಒಕೆ ಆಯಿತು. ಜೊತೆಗೆ ಇಡುವ ಮೊದಲು ಭಾರತಿ ಅವರಲ್ಲಿ ಈ ವಿಚಾರ ಹೇಳಿಯೇ ಅವರ ಒಪ್ಪಿಗೆ ಪಡೆದು ಹೆಸರಿಡುವ ತೀರ್ಮಾನಕ್ಕೂ ಬರಲಾಯಿತು. ಆದರೆ ಚಿತ್ರ ಹೀಗೆ ವಿವಾದಕ್ಕೊಳಗಾಗುತ್ತದೆ ಎಂಬ ಯೋಚನೆಯೇ ಯಾರಿಗೂ ಇರಲಿಲ್ಲ ಎಂಬುದು ಸುದೀಪ್ ಅವರೇ ಒಪ್ಪುವ ಮಾತು.
ನಾನು ಚಿತ್ರರಂಗದಲ್ಲಿ ಸಾಕಷ್ಟು ಕಷ್ಟಪಟ್ಟು ಬೆಳೆದವನು. ಹಾಗೆಯೇ ನನ್ನಂತೆ ಕಷ್ಟಪಟ್ಟು ಮೇಲೆ ಬಂದವರನ್ನು ನಾನು ತುಂಬ ಗೌರವಿಸುತ್ತೇನೆ. ನಾನು ಸ್ವತಃ ವಿಷ್ಣು ಅವರ ಅಭಿಮಾನಿ. ನಾನು ಚಿತ್ರರಂಗದಲ್ಲಿ ಯಾರ ಮನೆಗೂ ಹೋಗೋದಿಲ್ಲ. ಕೆಲವೇ ಕೆಲವು ಆತ್ಮೀಯರ ಮನೆಗೆ ಮಾತ್ರ ಹೋಗುತ್ತೇನೆ. ಹೀಗೆ ಮನಃಪೂರ್ವಕವಾಗಿ ಹೋಗೋ ಮನೆಗಳ ಪೈಕಿ ವಿಷ್ಣು ಮನೆಯೂ ಒಂದು. ಅಲ್ಲಿಯೂ ನನ್ನನ್ನು ಮನೆ ಮಗನಂತೆ ನೋಡುತ್ತಾರೆ. ಭಾರತಿ ಅವರನ್ನು ಅಮ್ಮನಂತೆ ಕಾಣುತ್ತೇನೆ, ಗೌರವಿಸುತ್ತೇನೆ. ನಾನು ಹೈದರಾಬಾದ್‌ನಲ್ಲಿರೋದ್ರಿಂದ ನನಗೆ ಈ ಬೆಳವಣಿಗೆಯೇ ಗೊತ್ತಾಗಲಿಲ್ಲ. ಖಂಡಿತ ನಾಳೆ ಬಂದು ಮೊದಲು ಭಾರತಿ ಅವರಲ್ಲಿ ಮಾತಾಡುತ್ತೇನೆ ಎಂದರು ಸುದೀಪ್.
ಈಗಲೇ ಫೋನ್ ಮಾಡಿ ಮಾತಾಡೋದು ಹಿರಿಯರಿಗೆ ನೀಡುವ ಗೌರವವಲ್ಲ. ನಾನು ಯಾವತ್ತೂ ಭಾರತಿ ಅವರಿಗೆ ಫೋನ್ ಮಾಡಿ ಮಾತಾಡಿಲ್ಲ. ಎಷ್ಟೇ ಸಣ್ಣ ವಿಚಾರವಿದ್ದರೂ ಮನೆಗೇ ಹೋಗಿ ಮಾತಾಡುತ್ತೇನೆ. ಈಗಲೂ ನಾನು ಹಾಗೆಯೇ ಮಾಡುತ್ತೇನೆ ಎಂದರು ಸುದೀಪ್.
ಭಾರತಿ ಅಮ್ಮನನ್ನು ನೋಯಿಸಿ ಚಿತ್ರ ಮಾಡುವ ಉದ್ದೇಶ ನಮಗಿಲ್ಲ. ನಮಗೆ ಚಿತ್ರಕ್ಕೆ ಹೀಗೆ ಹೆಸರಿಡುವ ಮುನ್ನ ಇಂಥ ವಿವಾದ ಸೃಷ್ಟಿಯಾಗುತ್ತದೆಂಬ ಕಲ್ಪನೆ ಇರಲಿಲ್ಲ. ಇದ್ದಿದ್ದರೆ ಇದರ ಸುದ್ದಿಗೇ ಹೋಗುತ್ತಿರಲಿಲ್ಲ. ಈ ಪ್ರಕರಣದಿಂದ ಎಸ್ಕೇಪ್ ಆಗೋ ಉದ್ದೇಶ ನನ್ನಲ್ಲಿಲ್ಲ. ಮಾತಾಡಿ ಸಮಸ್ಯೆ ಪರಿಹರಿಸುತ್ತೇವೆ ಎಂದಿದ್ದಾರೆ ಸುದೀಪ್.