ಸುದೀಪ್ ರಾಜನ ಗೆಟಪ್, ಗೊಂದಲದಲ್ಲೇ ಸೆಟ್ಟೇರಿದ ದ್ವಾರಕೀಶ್ ಚಿತ್ರ!
PR
ವಿಷ್ಣುವರ್ಧನ್ ಹೆಸರು ಇನ್ನೂ ತಿಕ್ಕಾಟದ ಹಾದಿಯಲ್ಲಿದೆ. ದ್ವಾರಕೀಶ್ ತಮ್ಮ ಚಿತ್ರಕ್ಕೆ ವಿಷ್ಣುವರ್ಧನ ಎಂದು ಹೆಸರಿಟ್ಟಿದ್ದು, ಇನ್ನೂ ಚಿತ್ರದ ಸಮಸ್ಯೆ ಬಗೆಹರಿಯುವ ಮೊದಲೇ ಚಿತ್ರ ಸೆಟ್ಟೇರಿದೆ. ಭಾರತಿ ವಿಷ್ಣುವರ್ಧನ್ ವಿರೋಧದ ನಡುವೆಯೇ ಬೆಂಗಳೂರಿನ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಚಿತ್ರ ಇಂದು ಮುಹೂರ್ತ ಆಚರಿಸಿಕೊಂಡಿದೆ.
ಕೋರ್ಟು ಮೆಟ್ಟಿಲು ಹತ್ತಿಯಾದರೂ ಸರಿ, ಚಿತ್ರಕ್ಕೆ ನನ್ನ ಸ್ನೇಹಿತ ವಿಷ್ಣುವರ್ಧನ ಎಂದೇ ಹೆಸರಿಡುತ್ತೇನೆ ಎಂದು ಖಂಡತುಂಡವಾಗಿ ಹೇಳಿದ್ದ ದ್ವಾರಕೀಶ್ ಇಂದು ಸ್ವಲ್ಪ ಮೆತ್ತಗಾಗಿದ್ದಾರೆ. ಚಿತ್ರವನ್ನು ತಾತ್ಕಾಲಿಕವಾಗಿ ಪ್ರೊಡಕ್ಷನ್ ನಂ.47 ಎಂದು ಅನಾಮಧೇಯವಾಗಿಯೇ ಆರಂಭಿಸಲಾಗಿದೆ.
ಸ್ಟುಡಿಯೋದಲ್ಲಿ ಬೆಂಕಿ: ಚಿತ್ರ ಸೆಟ್ಟೇರುವ ಕೊಂಚ ಮೊದಲು ಸ್ಟುಡಿಯೋದಲ್ಲಿ ಬೆಂಕಿ ಕಾಣಿಸಿಕೊಂಡಿತು. ಸ್ಟುಡಿಯೋದ ಹೊರ ಆವರಣದಲ್ಲಿ ಕಾಣಿಸಿಕೊಂಡ ಈ ಬೆಂಕಿಯನ್ನು ಆರಿಸಲಾಯಿತು. ಕೆಲ ಕಿಡಿಗೇಡಿಗಳು ಬೇಕಂತಲೇ ಈ ಬೆಂಕಿ ಹಾಕಿದ್ದಾರೆ ಎಂದು ಕೆಲವರು ಆರೋಪಿಸಿದರು. ಭಾರೀ ಭದ್ರತೆಯಲ್ಲೇ ಚಿತ್ರ ಸೆಟ್ಟೇರಿತು.
PR
ರಾಜನ ವೇಷದಲ್ಲಿ ಸುದೀಪ್: ಅದ್ದೂರಿ ಚಿತ್ರ ಇದಾಗಿದ್ದು, ಮುಹೂರ್ತದ ವೇಳೆ ಸುದೀಪ್ ರಾಜನ ಗೆಟಪ್‌ನಲ್ಲಿ ಪೋಸ್ ನೀಡಿದರು. ಸಿಂಹಾಸನಾಧೀಶನಾಗುವ ರಾಜನ ವೇಷದಲ್ಲಿ ಸುದೀಪ್ ಕ್ಯಾಮರಾ ಮುಂದೆ ಅಭಿನಯಿಸಿದರು. ರಾಜನ ಆಸ್ಥಾನದ ಅದ್ದೂರಿ ಸೆಟ್‌ನಲ್ಲಿ ಈ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆ ಬಗ್ಗೆ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಆದರೆ ಗೊಂದಲಗಳನ್ನು ಶೀಘ್ರವೇ ಪರಿಹರಿಸುವ ಭರವಸೆಯನ್ನು ಸುದೀಪ್ ನೀಡಿದ್ದಾರೆ. ಚಿತ್ರದ ಮುಹೂರ್ತಕ್ಕೆ ದ್ವಾರಕೀಶ್ ಬಳಗದ ಆಫ್ತರು ಹಾಜರಾಗಿದ್ದಾರೆ. ಆದರೆ, ಗೊಂದಲಗಳು ಇರುವುದರಿಂದ ಬಹುತೇಕ ನಟರು, ನಿರ್ದೇಶಕರು, ನಿರ್ಮಾಪಕರ ಬಳಗ ಗೈರುಹಾಜರಾಗಿದ್ದಾರೆ.