ದ್ವಾರ್ಕಿ-ವಿಷ್ಣು ಕುಟುಂಬ ಬೆಸೆಯೋದು ನನ್ನ ಜವಾಬ್ದಾರಿ: ಸುದೀಪ್
MOKSHA
ಕೋರ್ಟು ಗೀರ್ಟು ತುಳಿಯದೆ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಯಾವುದೂ ಕೂಡಾ ಅಸಾಧ್ಯವಿಲ್ಲ. ವಿಷ್ಣು ಹಾಗೂ ದ್ವಾರ್ಕಿ ಕುಟುಂಬವನ್ನು ಬೆಸೆದೇ ಚಿತ್ರ ಮಾಡುತ್ತೇನೆ. ಯಾರ ಮನಸ್ಸಿಗೆ ನೋವುಂಟು ಮಾಡಿಯೂ ಚಿತ್ರ ಮಾಡುವ ಉದ್ದೇಶ ನನಗಿಲ್ಲ ಎಂದು ಸುದೀಪ್ ಹೇಳಿದ್ದಾರೆ.
ವಿಷ್ಣುವರ್ಧನ ಎಂದು ಇನ್ನೂ ಅಧಿಕೃತವಾಗಿ ಹೆಸರಿಡದ ದ್ವಾರಕೀಶ್ ನಿರ್ಮಾಣದ ಚಿತ್ರದ ಮುಹೂರ್ತದಲ್ಲಿ ಪಾಲ್ಗೊಂಡು ಸುದ್ದಿಗಾರರ ಜೊತೆ ಮಾತನಾಡಿದ ಸುದೀಪ್ ಎರಡೂ ಕುಟುಂಬಗಳ್ನನು ಬೆಸೆಯುವ ಆತ್ಮವಿಶ್ವಾಸದಲ್ಲಿ ಮಾತನಾಡಿದರು.
ನಾನು ದೂರದ ಹೈದರಾಬಾದ್‌ನಲ್ಲಿದ್ದೆ. ನಿನ್ನೆವರೆಗೂ ಈ ವಿಚಾರವೇ ನಂಗೆ ಗೊತ್ತಿರಲಿಲ್ಲ. ಇದ್ದಕ್ಕಿಂದಂತೆ ಹಲವಾರು ಮಿಸ್ ಕಾಲ್‌ಗಳು ಬರ ತೊಡಗಿದವು. ಮೆಸೇಜುಗಳು ಬಂದವು. ಓದಿದಾಗ ವಿಚಾರ ಗೊತ್ತಾಯಿತು. ನಂತರ ಕನ್ನಡ ಟಿವಿ ಹಾಕಿ ನೋಡಿದೆ. ಚಿತ್ರದ ಟೈಟಲ್ ವಿವಾದ ಇ,್ಟು ತಾರಕಕ್ಕೇರಿರುವುದು ತಿಳಿಯಿತು. ಅದಕ್ಕಾಗಿಯೇ ಕೂಡಲೇ ಎಲ್ಲ ಮಾಧ್ಯಮ ಮಿತ್ರರಿಗೂ ದೂರವಾಣಿ ಕರೆ ಮಾಡಿ ಈ ವಿವಾದವನ್ನು ಬಗೆಹರಿಸುತ್ತೇನೆ ಎಂದು ಹೇಳಿದೆ ಎಂದರು ಸುದೀಪ್.
ನಾನು ಬೆಳಗ್ಗೆ ಹೈದರಾಬಾದ್‌ನಿಂದ ಬಂದ ತಕ್ಷಣ ಮಾಡಿದ ಮೊದಲ ಕೆಲಸ ವಿಷ್ಣು ಮನೆಗೆ ಹೋಗಿದ್ದು. ಭಾರತಿ ಅವರಿಗೆ ಫೋನ್ ಮಾಡಿ ನಾನು ಮಾತನಾಡಲು ನಿಮ್ಮ ಮನೆಗೆ ಬರುತ್ತೇನೆ ಎಂದೆ. ಹೋದ ತಕ್ಷಣ ಅವರ ಕಾಲಿಗೆ ನಮಸ್ಕರಿಸಿದೆ. ನಾನು ಯಾವಾಗಲೂ ಅವರ ಮನೆಗೆ ಹೋದರೆ ಮಾಡುವ ಮೊದಲ ಕೆಲಸ ಇದೇ. ನಾನು ಅವರ ಮನೆಯಲ್ಲಿ ಮನೆ ಮಗನಂತೆ ಇದ್ದೇನೆ. ನನ್ನ ತುಂಬ ಆತ್ಮೀಯರು ಅವರು. ವಿಷಯ ಮಾತಾಡಿದೆ. ಹಾಗಾಗಿಯೇ ನಾನು ಈ ಮುಹೂರ್ತಕ್ಕೆ ಬರಲು ತಡವಾಯಿತು. ಖಂಡಿತ ಈ ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಇಬ್ಬರ ನಡುವೆ ಕೊಂಚ ಮಿಸ್ ಅಂಡರ್‌ಸ್ಟಾಂಡ್ ಆಗಿದೆ. ಇದೇನು ಸರಿಪಡಿಸಲಾಗದ ಸಮಸ್ಯೆಯೇನಲ್ಲ. ಖಂಡಿತ ಈ ಎರಡು ಕುಟುಂಬಗಳನ್ನು ಜೊತೆ ಸೇರಿಸಿ ಕೂತು ಮಾತಾಡಿಸಿ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದರು.
PR
ದ್ವಾರಕೀಶ್ ಅವರು ಟೈಟಲ್‌ಗಾಗಿ ಕೋರ್ಟು ಮೆಟ್ಟಿಲು ಹತ್ತಲೂ ಸಿದ್ಧ ಅಂದಿದ್ದಾರಲ್ಲ, ಈ ಬಗ್ಗೆ ಏನು ಹೇಳುತ್ತೀರಿ ಎಂದಿದ್ದಕ್ಕೆ, ಖಂಡಿತ ಇದು ಕೋರ್ಟುವರೆಗೆ ಹೋಗಲ್ಲ. ನಾನು ಬಗೆಹರಿಸ್ತೇನೆ. ಸುದೀಪ್ ಇರೋವರೆಗೆ ಇಂಥದ್ದೆಲ್ಲ ಕೋರ್ಟು ಮೆಟ್ಟಿಲು ಹತ್ತೋಕೆ ಸಾಧ್ಯ ಇಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಎಲ್ಲವನ್ನೂ ಪರಿಹರಿಸಬೇಕು. ಉತ್ತಮ ಚಿತ್ರಗಳು ಹೊರಬರಬೇಕು. ನಮ್ಮ ನಮ್ಮಲ್ಲೇ ಕಚ್ಚಾಟ ಬೇಡ ಎಂದರು.
ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಹೆಸರಿಗೆ ಎಲ್ಲೂ ಮಸಿ ಬಳಿವ ಕಾರ್ಯ ಮಾಡುವುದಿಲ್ಲ. ಈ ಚಿತ್ರದಿಂದಾಗಿ ವಿಷ್ಣು ಹೆಸರು ಇನ್ನೂ ಮೇಲೆ ಹೋಗುತ್ತೇ ವಿನಃ ಕೆಳಗಿಳಿಯಲ್ಲ. ನಾನು ಹಾಗಾಗೋದಕ್ಕೆ ಬಿಡಲ್ಲ. ನಾನವರ ದೊಡ್ಡ ಅಭಿಮಾನಿ ಎಂದರು ಸುದೀಪ್.
ವಿಷ್ಣುವರ್ಧನ್ ಅವರ ನಟನೆಗಿಂತಲೂ ನಾನು ಅವರನ್ನು ಹೆಚ್ಚು ಇಷ್ಟಪಡುತ್ತಿದ್ದುದು ಅವರ ಬದುಕುವ ರೀತಿಗೆ. ಶಾಂತರೀತಿಯಾಗಿ ಅವರು ತಮ್ಮ ನಟನಾ ಬದುಕಿನಲ್ಲಿ ಒಂದೊಂದೇ ಹೆಜ್ಜೆಯಿಟ್ಟು ಬೆಳೆದ ರೀತಿಯಿದೆಯಲ್ಲಾ ಅದು ಅದ್ಭುತ. ಯಾವುದೇ ಇಮೇಜಿಗೆ ಕಟ್ಟುಬೀಳದೆ ಎಲ್ಲಾ ರೀತಿಯ ಪಾತ್ರಗಳಲ್ಲೂ ಮೇಳೈಸಿದ ನಟ ಅವರು. ಅವರ ಬದುಕುವ ರೀತಿಯೇ ನನಗೆ ಅತ್ಯಂತ ಪ್ರಿಯ ಎಂದರು ಸುದೀಪ್.
ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ದ್ವಾರಕೀಶ್ ಬಹಳ ಹಿಂದಿಂದಲೂ ನನ್ನ ಜೊತೆ ಚಿತ್ರ ಮಾಡಬೇಕೆಂದಿದ್ದರು. ನಾಲ್ಕೈದು ಕಥೆ ಹೇಳಿದ್ದರು. ಆದರೆ ನನಗೆ ಅಷ್ಟು ಇಷ್ಟವಾಗಿರಲಿಲ್ಲ. ಈ ಕಥೆ ಅದ್ಭುತವಾಗಿದೆ. ಜೊತೆಗೆ ಹಿಂದಿಯ ಸೋನು ಸೂದ್ ಅವರಿಗೆ ಮಹತ್ತರವಾದ ನೆಗೆಟಿವ್ ರೋಲ್ ಇದೆ. ನಾಯಕಿಯರಲ್ಲಿ ಪ್ರಿಯಾಮಣಿ ಅವರಿಗೆ ಪವರ್ ಫುಲ್ ಪಾತ್ರವಿದೆ. ಭಾವನಾ ಮೆನನ್‌ಗೂ ಅದ್ಭುತ ಪಾತ್ರ ಇದೆ. ಒಟ್ಟಾರೆ ಚಿತ್ರದ ಕಥೆ ತುಂಬ ಚೆನ್ನಾಗಿದೆ ಎಂದರು ಸುದೀಪ್.
ಆದರೆ ಭಾರತಿ ಅವರ ಜೊತೆಗೆ ಸುದೀಪ್ ಮನೆಗೆ ಭೇಟಿ ನೀಡಿದಾಗ ಮಾತಾಡಿದ್ದಾದರೂ ಏನು ಎಂಬ ರಹಸ್ಯ ಮಾತ್ರ ಬಿಟ್ಟುಕೊಡಲಿಲ್ಲ ಸುದೀಪ್. ಖಂಡಿತ ಈ ಸಮಸ್ಯೆ ಪರಿಹರಿಸುತ್ತೇನೆ ಎಂದಷ್ಟೇ ಹೇಳಿದರು. ಅತ್ತ ದ್ವಾರಕೀಶ್ ಕೂಡಾ, ಈ ಸಮಸ್ಯೆ ಪರಿಹರಿಸುವ ಉಸ್ತುವಾರ ಸುದೀಪ್‌ಗೆ ಬಿಟ್ಟದ್ದು ಎಂದರು.