ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾತುಕತೆಗೆ ಆಹ್ವಾನ: ಕೊನೆಗೂ ಪಾಕ್ ಒತ್ತಡಕ್ಕೆ ಮಣಿದ ಭಾರತ? (India | Pakistan | 2008 Mumbai attacks | Kashmir dispute)
Bookmark and Share Feedback Print
 
ಪಾಕಿಸ್ತಾನ ಮೂಲದ ಪಾಖಂಡಿಗಳು ಮುಂಬೈ ಮೇಲೆ ದಾಳಿ ನಡೆಸಿ ನೂರಾರು ಜನರನ್ನು ಹತ್ಯೆಗೈದು ಒಂದು ವರ್ಷ ಕಳೆಯುತ್ತಿದ್ದಂತೆ ಕಹಿನೆನಪುಗಳನ್ನು ಮರೆತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಬನ್ನಿ, ಈ ಬಗ್ಗೆ ಮಾತಾಡೋಣ ಎಂದು ಪಾಕಿಸ್ತಾನಕ್ಕೆ ಅಧಿಕೃತ ಆಹ್ವಾನ ನೀಡಿದೆ!

ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಮತ್ತು ತನ್ನ ನೆಲದಿಂದ ಭಾರತ ವಿರೋಧಿ ಕಾರ್ಯಾಚರಣೆಯನ್ನು ನಿಲ್ಲಿಸದ ಹೊರತು ಆ ದೇಶದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದು ಆಗಾಗ 'ಕಠಿಣ ಎಚ್ಚರಿಕೆ'ಗಳನ್ನು ರವಾನಿಸುತ್ತಿದ್ದ ಭಾರತವು ಇದ್ದಕ್ಕಿದ್ದಂತೆ ತನ್ನ ನಿಲುವನ್ನು ಬದಲಾಯಿಸಿದ್ದು, ಕೇವಲ ಒಂದು ಭಯೋತ್ಪಾದನಾ ದಾಳಿಗಾಗಿ ದಕ್ಷಿಣ ಏಷಿಯಾದ ಶಾಂತಿ ಮತ್ತು ಸ್ಥಿರತೆಯನ್ನು ಒತ್ತೆಯಾಗಿಡುವುದು ಸರಿಯಲ್ಲ ಎಂಬ ಪಾಕಿಸ್ತಾನದ ಒತ್ತಡಕ್ಕೆ ಮಣಿದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ...
** ಬಲೂಚಿಸ್ತಾನ ಬ್ಲಂಡರ್, ಶೇಮ್ ಮತ್ತು ಶರಮ್ ಎಲ್ ಶೇಖ್...
** ಭಯೋತ್ಪಾದನೆಯೇ ಇಲ್ಲದಿದ್ದರೆ ಮಾತುಕತೆ "ಸಮಗ್ರ" ಹೇಗೆ?

2008 ನವೆಂಬರ್ ತಿಂಗಳಿನಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದು ಪಾಕಿಸ್ತಾನ ಮೂಲದ ಉಗ್ರರು ಎಂದು ಆರೋಪಿಸಿದ್ದ ಭಾರತ ಆ ದೇಶದ ಜತೆಗಿನ ದ್ವಿಪಕ್ಷೀಯ ಮಾತುಕತೆಗಳನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿತ್ತು.

ಆದರೆ ಇದೀಗ ಪಾಕಿಸ್ತಾನವನ್ನು ದೆಹಲಿಗೆ ಆಹ್ವಾನಿಸಲಾಗಿದೆ. 'ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಯವರನ್ನು ಭಾರತದ ವಿದೇಶಾಂಗ ಕಾರ್ಯದರ್ಶಿಯವರು ನವದೆಹಲಿಗೆ ಆಹ್ವಾನಿಸಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ ಮಾತುಕತೆ ನಡೆಯಬಹುದು. ಆದರೆ ಇಲ್ಲಿ ಭಯೋತ್ಪಾದನೆಯ ಕುರಿತ ಚರ್ಚೆಯೇ ಪ್ರಮುಖವಾಗಿರುತ್ತದೆ' ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಹಲವು ಸಮಯಗಳಿಂದ ಮಾತುಕತೆಗೆ ಒತ್ತಾಯಿಸುತ್ತಾ ಬಂದಿದ್ದ ಪಾಕಿಸ್ತಾನವು, ಭಾರತದ ನಡೆಯನ್ನು ಸ್ವಾಗತಿಸಿದೆ. 'ತಾವು ದ್ವಿಪಕ್ಷೀಯ ಮಾತುಕತೆಗೆ ಸಿದ್ಧರಿದ್ದೇವೆ ಎಂಬ ಸಂಕೇತಗಳು ಭಾರತದಿಂದ ಬಂದಿವೆ. ಇದರಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಪುನರಾರಂಭವಾಗುವುದಾದರೆ ನಾವಿದನ್ನು ಸ್ವಾಗತಿಸುತ್ತೇವೆ' ಎಂದು ಅಲ್ಲಿನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ತಿಳಿಸಿದ್ದಾರೆ.

ಫೆಬ್ರವರಿ 26-27ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಗಾಗಿ ತೆರಳುತ್ತಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಈಗಾಗಲೇ ಅಧಿಕಾರಿಗಳು ತಿಳಿಸಿದ್ದಾರೆ.

ಚಿದಂಬರಂ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ರೆಹಮಾನ್ ಮಲಿಕ್ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿ, ಮುಂಬೈ ದಾಳಿ ಸಂಬಂಧ ಆ ದೇಶ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಣೆ ಪಡೆಯಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಶ್ಮೀರ ಮೂಲಕ ಭಾರತಕ್ಕೆ ಭಯೋತ್ಪಾದಕರ ನುಸುಳುವಿಕೆಯನ್ನು ಪ್ರಚೋದಿಸುತ್ತಾ, ತನ್ನ ನೆಲದಿಂದ ಭಾರತ ವಿರೋಧಿ ಚಟುವಟಿಕೆಗಳನ್ನು ಇನ್ನೂ ನಿಯಂತ್ರಿಸದೆ, ಭಯೋತ್ಪಾದಕರಿಗೆ ಪರೋಕ್ಷ ಬೆಂಬಲ ನೀಡುತ್ತಾ ಬಂದಿದ್ದರೂ ಆ ದೇಶದ ಜತೆಗೆ ಮಾತುಕತೆಗೆ ಮುಂದಾಗಿರುವುದು ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ನಿಷೇಧಿತ ಭಯೋತ್ಪಾದಕ ಸಂಘಟನೆ 'ಲಷ್ಕರ್ ಇ ತೋಯ್ಬಾ'ದ ಅಂಗಸಂಸ್ಥೆಯಾಗಿರುವ 'ಜಮಾತ್ ಉದ್ ದಾವಾ' ನೇತೃತ್ವದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಗುರುವಾರ ಕಾಶ್ಮೀರದ ಕುರಿತ ಏಕತೆಯನ್ನು ಪ್ರದರ್ಶಿಸುವ ಭಾರತ ವಿರೋಧಿ ಬೃಹತ್ ಜಿಹಾದಿ ರ‌್ಯಾಲಿ ಆರಂಭವಾಗಿದ್ದು, ಇದನ್ನು ಪಾಕಿಸ್ತಾನ ಸರಕಾರ ತನ್ನ ಗುಪ್ತ ಅಜೆಂಡಾದಲ್ಲಿ ಸ್ವಾಗತಿಸಿದೆ ಎಂಬ ವರದಿಗಳು ಬಂದಿರುವುದನ್ನು ಇದೇ ಸಂದರ್ಭದಲ್ಲಿ ಗಮನಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ