ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಭಯೋತ್ಪಾದನೆಯೇ ಇಲ್ಲದಿದ್ದರೆ ಮಾತುಕತೆ "ಸಮಗ್ರ" ಹೇಗೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನೆಯೇ ಇಲ್ಲದಿದ್ದರೆ ಮಾತುಕತೆ "ಸಮಗ್ರ" ಹೇಗೆ?
ಅವಿನಾಶ್ ಬಿ.
ಇದು ನಿಜಕ್ಕೂ ಅಚ್ಚರಿ ಮತ್ತು ಮುಂಬೈ ದಾಳಿಯಲ್ಲಿ ಹುತಾತ್ಮರಾದವರಿಗೆ ಮಾಡಿದ ಅವಮಾನ. ಭಾರತದ ಮೇಲೆ ಅದೆಷ್ಟೋ ವರ್ಷಗಳಿಂದ ಭಯೋತ್ಪಾದಕರ ಮೂಲಕ ಛಾಯಾ ಸಮರ ಸಾರುತ್ತಲೇ ಬಂದಿದ್ದ ಪಾಕಿಸ್ತಾನ ಯಾವಾಗ ವಾಣಿಜ್ಯ ನಗರಿ ಮುಂಬೈ ಮೇಲೆಯೇ ತನ್ನ ವಕ್ರದೃಷ್ಟಿ ಬೀರಿತೋ, ಅಂದು ಎಚ್ಚರಗೊಂಡಂತೆ ಕಂಡುಬಂದಿದ್ದ ಭಾರತ ಸರಕಾರ, "ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಮತ್ತು
PTI
ನಿರ್ದಿಷ್ಟ ಕ್ರಮ ಕೈಗೊಂಡಿದ್ದು ಸಾಬೀತಾಗುವವರೆಗೂ" ಪಾಕಿಸ್ತಾನ ಜೊತೆ ಯಾವುದೇ ಶಾಂತಿ-ಸಂಧಾನ ಮಾತುಕತೆ ಇಲ್ಲ ಎಂದು ಘೋಷಿಸಿತ್ತು. ಅದನ್ನೇ ಯುಪಿಎ-
II ಸರಕಾರದ ಹೊಸ ವಿದೇಶಾಂಗ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾಗ ಎಸ್.ಎಂ.ಕೃಷ್ಣ ಅವರೂ ಪುನರುಚ್ಚರಿಸಿದ್ದರು.

ಆದರೆ ಗುರುವಾರ ಈಜಿಪ್ಟ್‌ನ ಶರಮ್ ಎಲ್‌ಶೇಖ್‌ನಲ್ಲಿ ಸಿಂಗ್-ಯೂಸುಫ್ ರಜಾ ಗಿಲಾನಿ ಪರಸ್ಪರ ಕೈಕುಲುಕಿದ ಬಳಿಕ ಹೊರಡಿಸಲಾದ ಜಂಟಿ ಹೇಳಿಕೆಯು ಜಗಜ್ಜಾಹೀರಾದಾಗ ಅತ್ತ ಪಾಕಿಸ್ತಾನವು "ಭಾರತವನ್ನು ತಗ್ಗಿಬಗ್ಗುವಂತೆ" ಮಾಡಿದೆನೆಂಬ ಧೋರಣೆಯಲ್ಲಿ ಹಿರಿಹಿರಿ ಹಿಗ್ಗುತ್ತಿದ್ದರೆ, ಭಾರತವು ಆಂತರಿಕವಾಗಿ ತಲೆ ತಗ್ಗಿಸಬೇಕಾದ ಸ್ಥಿತಿ.

ಹಾಗಿದ್ದರೆ ಸಮಗ್ರ ಮಾತುಕತೆಗೂ ಭಯೋತ್ಪಾದನೆ ಮೇಲಿನ ಕ್ರಮಕ್ಕೂ ಥಳುಕು ಹಾಕಲಾಗದು ಎಂಬ ಜಂಟಿ ಹೇಳಿಕೆಯ ಹಿಂದಿರುವ ಗೂಢಾರ್ಥವೇನು? ಮಾತ್ರವಲ್ಲ, ಪ್ರಸಕ್ತ ಪಾಕಿಸ್ತಾನಿ ಸರಕಾರವು ಭಯೋತ್ಪಾದನೆಯಲ್ಲಿ ಸಕ್ರಿಯವಾಗಿ ತೊಡಗಿದೆ ಎಂದು ಭಾರತ ಆರೋಪಿಸುವುದಿಲ್ಲ ಎನ್ನುವ ಮೂಲಕ ಪ್ರಧಾನಿ ಸಿಂಗ್ ಅವರು ಪಾಕಿಸ್ತಾನವನ್ನು ಬಹುತೇಕ 'ನಿರ್ದೋಷಿ' ಎಂದು ಘೋಷಿಸಿದ್ದು ಹೇಗೆ? ಭಾರತ-ಪಾಕ್ ನಡುವೆ ಮಾತುಕತೆ ಏರ್ಪಡಿಸುವ ಅಮೆರಿಕದ ಒತ್ತಡ ಇಲ್ಲಿ ಕೆಲಸ ಮಾಡಿದೆಯೇ? ಕೈರೋ ಭೇಟಿಯಲ್ಲಿ ಗೆದ್ದವರು ಯಾರು? ಅಥವಾ ಗೆದ್ದು ಸೋತವರು ಯಾರು? ಈ ಪ್ರಶ್ನೆಗಳು ಹುಟ್ಟುತ್ತವೆ.

ಅತ್ತ ಗಿಲಾನಿ "ನಾವು ಜಯ ಸಾಧಿಸಿದೆವು, ಮೇಲುಗೈ ಸಾಧಿಸಿದೆವು" ಎಂಬ ಭಾವದಲ್ಲಿ ಮಾಧ್ಯಮಗಳೆದುರು ಎದೆಯುಬ್ಬಿಸಿ ಮಾತನಾಡುತ್ತಿದ್ದರೆ, ಇತ್ತ ಪ್ರಧಾನಿ ಮನಮೋಹನ್ ಸಿಂಗ್ ಅವರು ಪತ್ರಕರ್ತರ ಪ್ರಶ್ನಾವಳಿಗೆ ಶಬ್ದ ಹುಡುಕಲು ತಡಕಾಡುತ್ತಿದ್ದರು. ನೀವೇ ಹೇಳಿ, ಭಾರತ-ಪಾಕ್ ನಡುವಣ ಸಂಧಾನ ಮಾತುಕತೆಗಳಲ್ಲಿ "ಭಯೋತ್ಪಾದನೆ" ಎಂಬ ವಿಷಯವನ್ನೇ ಕಿತ್ತು ಹಾಕಿದರೆ, ಮಾತನಾಡಲು ಉಳಿದಿರುವುದಾದರೂ ಏನು? ಇಡೀ ದೇಶವನ್ನು ಮತ್ತು ಈ ಉಪಖಂಡವನ್ನು ಇಂದು ಸುಡುತ್ತಿರುವುದು ಉಗ್ರವಾದವೆಂಬ ಪಿಡುಗು. ಈ ಬರ್ನಿಂಗ್ ಇಶ್ಯೂವನ್ನು ಮಾತುಕತೆಯಲ್ಲಿ ಅಳವಡಿಸದೇ ಹೋದರೆ, ಸಂಧಾನ ಎಂಬುದು ಪರಿಪೂರ್ಣವಾಗುತ್ತದೆಯೇ? ಖಂಡಿತಾ ಇಲ್ಲ.

ಮುಂಬೈ ಮೇಲೆ ದಾಳಿ ನಡೆದು ಏಳು ತಿಂಗಳೇ ಕಳೆದರೂ, ಭಾರತಕ್ಕೆ ಪಾಕಿಸ್ತಾನವನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವುದು ಸಾಧ್ಯವಾಗಿಲ್ಲ. ಪಾಕಿಸ್ತಾನದ ನೆಲದಲ್ಲಿ ಉತ್ಪತ್ತಿಯಾಗುತ್ತಿರುವ ಭಯೋತ್ಪಾದನೆ ನಿಲ್ಲದ ಹೊರತು ಮಾತುಕತೆ ಅಸಾಧ್ಯ ಎಂಬ ಕಠಿಣವಾದ ನಿಲುವನ್ನು ಭಾರತ ಸಡಿಲಗೊಳಿಸಿದೆ. ಇದು ಭಯೋತ್ಪಾದಕರ ವಿರುದ್ಧ ಧೈರ್ಯ ಸಾಹಸದಿಂದ ಹೋರಾಡಿ ವೀರಮರಣವನ್ನಪ್ಪಿದ ಹುತಾತ್ಮರಿಗೆ ಮಾಡಿದ ಅವಮಾನ ಎಂದು ಹೇಳದೇ ವಿಧಿಯಿಲ್ಲ. ಮುಂಬೈ ದಾಳಿಯಲ್ಲಿ ಬಲಿಯಾದವರ ಆತ್ಮಗಳು ಚಿರನಿದ್ರೆಯಲ್ಲೇ ಕನಲುತ್ತಿದ್ದಿರಬಹುದು.

ಇದುವರೆಗೆ ಈ ದೇಶದ ಪ್ರಧಾನಮಂತ್ರಿ ಡಾಕ್ಟರ್ ಮನಮೋಹನ್ ಸಿಂಗ್ ಸಾಹೇಬರು ಭಯೋತ್ಪಾದನೆ ವಿಷಯಕ್ಕೆ ಸಂಬಂಧಿಸಿದಂತೆ, ಅದರಲ್ಲೂ ಉಗ್ರವಾದವೆಂದರೆ ಪಾಕಿಸ್ತಾನ ಎಂಬಷ್ಟರ ಮಟ್ಟಿಗೆ ಕುಖ್ಯಾತಿ ಪಡೆದಿರುವ ಆ ರಾಷ್ಟ್ರಕ್ಕೆ ಸಂಬಂಧಿಸಿದಂತೆ ಒಂದಾದರೂ ಎದೆಗಾರಿಕೆಯ, ಕಟುವಾದ ನಿಲುವನ್ನಾಗಲೀ, ಎಚ್ಚರಿಕೆಯ ಸಂದೇಶವನ್ನಾಗಲೀ ನೀಡಿದ್ದಾರೆಯೇ? ಚುನಾವಣೆಗೆ ಮುನ್ನ, 26/11 ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ವಿರುದ್ಧ ಕಟುವಾದ ನಿರ್ಣಯ ಕೈಗೊಳ್ಳದಿದ್ದಲ್ಲಿ, ಖಂಡಿತವಾಗಿಯೂ ಈ ಬಾರಿ ಮತದಾರರು ತಮಗೆ ಪಾಠ ಕಲಿಸುತ್ತಾರೆ ಎಂಬ ಏಕೈಕ ಕಾರಣದಿಂದಲೋ ಎಂಬಂತೆ ಮನಮೋಹನ್ ಸಿಂಗ್ ಅವರು ಮಾತುಕತೆ ಸ್ಥಗಿತ ಬಗ್ಗೆ ಅನಿವಾರ್ಯವಾಗಿ ಘೋಷಣೆ ಹೊರಡಿಸಿದ್ದು ಬಿಟ್ಟರೆ, ಆ ಬಳಿಕದ ವಿದ್ಯಮಾನಗಳನ್ನೆಲ್ಲಾ ಅವಲೋಕಿಸಿ ನೋಡಿ.

ಮಾತುಕತೆ ಇಲ್ಲ ಎಂದು ಹೇಳಿದ್ದ ಇದೇ ಪ್ರಧಾನಮಂತ್ರಿಯವರು ಕಳೆದ ತಿಂಗಳು ರಷ್ಯಾದಲ್ಲಿ ಹೋಗಿ ಪಾಕಿಸ್ತಾನಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯ ಕೈ ಕುಲುಕಿ ಬಂದರು. ಆಗ ಕೆಲಸ ಮಾಡಿದ್ದು ಅದೇ ವಿಶ್ವದ ಹಿರಿಯಣ್ಣ ಅನ್ನಿಸಿಕೊಂಡು ಈಗ ಆರ್ಥಿಕ ಬಿಕ್ಕಟ್ಟಿನಿಂದ ತಲೆಯೆತ್ತಲು ಹೆಣಗಾಡುತ್ತಿರುವ ಅಮೆರಿಕ. ಈ ಭೇಟಿಗೆ ಕೆಲವೇ ಕ್ಷಣಗಳ ಮೊದಲು ಅಮೆರಿಕ ವಿದೇಶಾಂಗ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಅವರು ಒಬಾಮಾ ಸಂದೇಶದೊಂದಿಗೆ ಭಾರತದ ಪ್ರಧಾನಿಗೊಂದು ಪತ್ರ ಕೊಟ್ಟಿದ್ದರು. ಅದರೊಳಗೇನಿತ್ತು ಎಂಬುದು ಇನ್ನೂ ನಿಖರ ಮಾಹಿತಿ ಹೊರಬಿದ್ದಿಲ್ಲ. ಬಹುಶಃ ಅದರಲ್ಲಿ ಮಾತುಕತೆ ಮುಂದುವರಿಸಬೇಕು ಎಂಬ ಸಂದೇಶವಿತ್ತೇ ಎಂಬ ಶಂಕೆ ಇನ್ನೂ ನಿವಾರಣೆಯಾಗಿಲ್ಲ.

ಸಿಂಗ್-ಜರ್ದಾರಿ ಭೇಟಿ: ಅಮೆರಿಕ ಒತ್ತಡ ತಂತ್ರದ ಫಲವೇ? ಇಲ್ಲಿ ಕ್ಲಿಕ್ ಮಾಡಿ.

ಆ ನಂತರ ಈಗ ಗುರುವಾರ ಈಜಿಪ್ಟ್‌ನಲ್ಲಿ ಅಲಿಪ್ತ ರಾಷ್ಟ್ರಗಳ ಶೃಂಗ ಸಭೆಯ ಪಾರ್ಶ್ವದಲ್ಲಿ ತಮ್ಮ ಇಡೀ ಭಾರತೀಯ ನಿಯೋಗವನ್ನು ಸೇರಿಸಿ ಪಾಕಿಸ್ತಾನ ನಿಯೋಗದೊಂದಿಗೆ ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿಯೊಂದಿಗೆ ಚರ್ಚೆ ನಡೆಸಿದರು! ಇದೇನು ಮಾತುಕತೆಯಾಗಿರಲಿಲ್ಲವೇ? ಇದರ ಹಿಂದೆಯೂ ಒಂದು ಶಂಕೆ ಕಾಡತೊಡಗಿದೆ. ಅಮೆರಿಕದ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಅವರು ಶುಕ್ರವಾರ ಭಾರತಕ್ಕೆ ಬರುವ ಕಾರ್ಯಕ್ರಮ. ಈ ಸಂದರ್ಭದಲ್ಲಿ ಅಮೆರಿಕವನ್ನು ಓಲೈಸುವ ತಂತ್ರವೇ ಇದು ಎಂಬ ಸಂದೇಹ ಹುಟ್ಟಿಕೊಂಡಿದೆ.

ಮುಂಬೈ ದಾಳಿಕೋರರನ್ನು ದಂಡನೆಗೆ ಗುರಿಪಡಿಸುವ ತನಕ ಯಾವುದೇ ಮಾತಿಲ್ಲ ಅಂತ ಘೋಷಿಸಿದ್ದರೆ ಗಂಟೇನು ಹೋಗುತ್ತಿತ್ತು? ಅತ್ತ ಮುಂಬೈ ದಾಳಿಯ ರೂವಾರಿ ಎಂದು ಭಾರತ ಸರಕಾರವು ಪುಟಗಟ್ಟಲೇ ಸಾಕ್ಷ್ಯಾಧಾರಗಳನ್ನು ಒದಗಿಸಿ ಹೆಸರಿಸಿದ ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಬಿಡುಗಡೆಗೊಳಿಸಲು ಪಾಕಿಸ್ತಾನದೊಳಗೆ ಇನ್ನಿಲ್ಲದ ಪ್ರಯತ್ನಗಳು (ಕ್ಲಿಕ್ ಮಾಡಿ) ನಡೆಯುತ್ತಿದ್ದರೂ ಭಾರತ ಮೌನವಾಗಿಯೇ ಕುತೂಹಲದಿಂದ ಈ ವಿದ್ಯಮಾನಗಳನ್ನು ವೀಕ್ಷಿಸುತ್ತಿರುವುದೇಕೆ?

ಬಲೂಚಿಸ್ತಾನ: ಅದು ಒತ್ತಟ್ಟಿಗಿರಲಿ, ಭಯೋತ್ಪಾದನೆ ಕುರಿತ ಕ್ರಮಗಳನ್ನು ಮಾತುಕತೆಯಿಂದ ಹೊರಗಿರಿಸಬೇಕು ಎಂಬಲ್ಲಿ ಮಾತ್ರವೇ ಭಾರತ ಎಡವಿದ್ದಲ್ಲ. ಕೇವಲ ಒಂದು ಆಂತರಿಕ ವಿಷಯವಾಗಿದ್ದ ಬಲೂಚಿಸ್ತಾನದ ಬಿಕ್ಕಟ್ಟನ್ನು ಇದೀಗ ಭಾರತ-ಪಾಕ್ ಬಿಕ್ಕಟ್ಟು ಎಂದು ಅಲ್ಪಮಟ್ಟಿಗೆ ಒಪ್ಪಿಕೊಂಡದ್ದು ಕೂಡ ಮತ್ತೊಂದು ದುರಂತ. ಜಂಟಿ ಹೇಳಿಕೆಯಲ್ಲಿ ಇದಕ್ಕೆ ಅವಕಾಶ ಕೊಟ್ಟದ್ದು ಖಂಡಿತಾ ತಪ್ಪು. ಯಾಕೆಂದರೆ ಇದರಿಂದ ಪಾಕಿಸ್ತಾನಕ್ಕೆ ಭಾರಿ ಲಾಭವೇ ಆಗಿದೆ. ಬಲೂಚಿಸ್ತಾನದ ಅಶಾಂತಿಯಲ್ಲಿ ಭಾರತದ ಕೈವಾಡವಿದೆ ಎಂಬ ಹೇಳಿಕೆಗೆ ಪುಷ್ಟಿಯೂ ದೊರೆತ ಹುಮ್ಮಸ್ಸಿನಲ್ಲಿದೆ ಪಾಕ್. ಈ ಬಳಿಕ, ಸೆಪ್ಟೆಂಬರ್ ತಿಂಗಳಲ್ಲಿ ಪುನಃ ಸಿಂಗ್-ಗಿಲಾನಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಅದುವರೆಗೆ ವಿದೇಶಾಂಗ ಕಾರ್ಯದರ್ಶಿಗಳು ಮಾತುಕತೆ ಮುಂದುವರಿಸಲಿದ್ದಾರೆ.

ಕೈರೋದಲ್ಲಿ ಭಾರತ-ಪಾಕ್ ಜಂಟಿ ಹೇಳಿಕೆಯಲ್ಲಿ "ಬಲೂಚಿಸ್ತಾನದ ಗಂಡಾಂತರಕಾರಿ ವಿದ್ಯಮಾನದಲ್ಲಿ ಭಾರತವೂ ಸಕ್ರಿಯ" ಎಂಬ ಬಗ್ಗೆ ಧ್ವನಿಯೆತ್ತಲಾಯಿತು ಎಂಬ ಅಂಶವನ್ನು ಸೇರಿಸಲು ಒಪ್ಪಿಬಿಟ್ಟರಲ್ಲ ಪ್ರಧಾನಿ! ಭಯೋತ್ಪಾದನೆಯೇ ಈಗ ವಿಶ್ವವನ್ನು, ವಿಶೇಷವಾಗಿ ಭಾರತವನ್ನು ಕಾಡುತ್ತಿರುವ ಅತಿದೊಡ್ಡ ಪೀಡೆ. ಅದರ ಮೂಲ ಬೇರು ಪಾಕಿಸ್ತಾನದಲ್ಲಿದೆ ಎಂಬುದನ್ನು ಭಾರತ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವಾರು ರಾಷ್ಟ್ರಗಳು ತಮ್ಮ ಗುಪ್ತಚರ ವಿಭಾಗಗಳಿಂದ ಸ್ವತಃ ತನಿಖೆ ನಡೆಸಿ ಕಂಡುಕೊಂಡಿವೆ. ಹೀಗಿರುವಾಗ ಭಯೋತ್ಪಾದನೆಯ ವಿಷಯವಿಲ್ಲದೆ ಅದು "ಸಮಗ್ರ" ಮಾತುಕತೆ ಹೇಗಾದೀತು? "ಅನಾದಿಕಾಲದಿಂದಲೂ ಬಾಕಿಯುಳಿದಿದ್ದ ವಿವಾದಗಳೂ ಸೇರಿದಂತೆ ಭಾರತವು ಪಾಕಿಸ್ತಾನದೊಂದಿಗಿನ ಸಮಗ್ರ ವಿಷಯಗಳ ಕುರಿತು ಮಾತುಕತೆಗೆ ಸಿದ್ಧವಾಗಿದೆ" ಎಂಬ ಪ್ರಧಾನಿ ಹೇಳಿಕೆಯ ಹಿಂದಿರುವ ಪ್ರೇರಣಾ ಶಕ್ತಿಯ ಬಗ್ಗೆ ಸಂದೇಹ ಮೂಡುವುದಂತೂ ಸಹಜ.

ಇಲ್ಲ, ಇಲ್ಲ, ಭಯೋತ್ಪಾದನೆ ಬಗ್ಗೆ ನಿಖರ ಕ್ರಮ ಕೈಗೊಳ್ಳುವ ಹೊರತು ಮಾತುಕತೆ ಇಲ್ಲ ಎಂದು ಪ್ರಧಾನಿ ಸಿಂಗ್ ಅವರು, ಈ ಜಂಟಿ ಹೇಳಿಕೆ ಬಿಡುಗಡೆಯ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ತಡವರಿಸುವಂತಾಗಿದ್ದೇಕೆ? ಭಯೋತ್ಪಾದನೆ ಬಗ್ಗೆ ಕೇಂದ್ರದ ಯುಪಿಎ ಸರಕಾರ ಮೃದು ಧೋರಣೆ ತಳೆಯುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಪುಷ್ಟಿ ಕೊಡುವ ಈ ಕ್ರಮ, ಚುನಾವಣಾ ಪ್ರಚಾರ ಸಂದರ್ಭ "ದುರ್ಬಲ ಪ್ರಧಾನಿ" ಎಂದೆಲ್ಲಾ ಕರೆಸಿಕೊಂಡ ಮಾದರಿಯಲ್ಲಿ ತಾವಾಗಿಯೇ ಸೃಷ್ಟಿಸಿಕೊಂಡ ವಿದ್ಯಮಾನವಲ್ಲವೇ? ಅಥವಾ ಪರಮಾಣು ಒಪ್ಪಂದಾನಂತರದ ಕಾಲದಲ್ಲಿ ಭಾರತವು ಅಮೆರಿಕದ ಕೈಗೊಂಬೆಯಾಗಿರಬೇಕಾಗುತ್ತದೆ ಎಂಬ ಎಡಪಕ್ಷಗಳ ಟೀಕೆಗೂ, ಅಮೆರಿಕ ಹಾಕುವ ತಾಳದ ಲಯದಲ್ಲೇ ಭಾರತ ಮುನ್ನಡೆಯುತ್ತಿರುವುದಕ್ಕೂ ಸಂಬಂಧವಿದೆಯೇ?

ಒಟ್ಟಿನಲ್ಲಿ, ಅತ್ಯಂತ ಗಂಭೀರವಾದ ವಿಷಯದ ಗಂಭೀರತೆಯನ್ನೇ ಅಳಿಸಿಹಾಕಲಾಗಿದೆ. ಮಾತುಕತೆಯೇ ಇಲ್ಲ ಎಂದು ವಿಶ್ವಸಮುದಾಯದೆದುರು ಢಾಣಾಡಂಗುರ ಸಾರಿದ್ದ ಭಾರತವು ಕೂಡ, ಪದೇ ಪದೇ ಹೇಳಿಕೆಗಳನ್ನು ಬದಲಿಸುತ್ತಲೇ ವಿಶ್ವದೆದುರು ಕುಬ್ಜತೆ ಪ್ರದರ್ಶಿಸಿದ ಪಾಕಿಸ್ತಾನದ ಸಾಲಿಗೇ ಸೇರುತ್ತದೆಯೇ? ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಬಲಿಯಾದವರಿಗೆ, ಅವರ ಕುಟುಂಬವರ್ಗಕ್ಕೆ ಮತ್ತು ಭಯೋತ್ಪಾದನೆಯ ಕರಿನೆರಳಲ್ಲೇ ಜೀವನ ತೇಯುತ್ತಿರುವ ಪ್ರಜೆಗಳಿಗೆ ಉತ್ತರಿಸುವ ಜವಾಬ್ದಾರಿ ಕೇಂದ್ರ ಸರಕಾರಕ್ಕಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಗೀತ 'ಭೈರವಿ' ಡಿ.ಕೆ. ಪಾಟ್ಟ್ ಅಮ್ಮಾಳ್
ಉತ್ತರ ಪ್ರದೇಶ 'ಮಾಯಾ' ಜಾಲ: ತತ್ತರಿಸುತ್ತಿದೆ ಪ್ರಜಾಪ್ರಭುತ್ವ
ಕನ್ನಡಿಗ 'ಮುನಿಯ'ಲಿಲ್ಲ, ಆದರೂ ಅನ್ಯಾಯ ನಿಲ್ಲಲಿಲ್ಲ
ನಿಮ್ಮ ಅಭಿಪ್ರಾಯ ಬೇಕಾಗಿದೆ, ದಯವಿಟ್ಟು ಕ್ಲಿಕ್ ಮಾಡಿ
ಮಳೆ ಕ್ಷೀಣ: 'ಕಾವೇರ'ಲಿದೆಯೇ ತ.ನಾಡು-ಕರ್ನಾಟಕ !
ತಂದೆಯರ ದಿನ: ಮಗುವನ್ನು ಪ್ರೀತಿಸುವ ಹಕ್ಕು ನಮಗೂ ಇರಲಿ!