ದೇಶದೆಲ್ಲೆಡೆ ಮಳೆಗಾಗಿ ಹಾಹಾಕಾರವೆದ್ದಿದೆ ಮತ್ತು ಈ ಬಾರಿ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಫಲ ನೀಡದು ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಗಳ ನಡುವೆಯೇ, ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕಾವೇರಿ ವಿವಾದ ಮತ್ತೆ ಚಿಗಿತುಕೊಳ್ಳುವ ಲಕ್ಷಣಗಳು ಕಾಣಿಸುತ್ತಿದೆ.
ಪ್ರತಿ ವರ್ಷವೂ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾಡುವುದೊಂದೇ... ವರುಣದೇವನೇ, ಉತ್ತಮ ಮಳೆ ಕರುಣಿಸು ಎಂಬುದೇ ಅವರ ಏಕೈಕ ಹರಕೆ. ಯಾಕೆಂದರೆ ಎರಡೂ ರಾಜ್ಯಗಳ ರೈತರ ಆಕ್ರೋಶ ಎದುರಿಸಲೇಬೇಕಾಗುತ್ತದೆ. ಸಾಕಷ್ಟು ಮಳೆಯಾದರೆ ಮಾತ್ರವೇ ತಮಿಳುನಾಡಿಗೆ ಕಾವೇರಿ ನೀರು ಹರಿಯುತ್ತದೆ. ಇಲ್ಲವಾದಲ್ಲಿ ಮತ್ತೆ ಉಭಯ ರಾಜ್ಯಗಳ ನಡುವೆ ಪರಿಸ್ಥಿತಿಯೇ ಕಾವೇರುತ್ತದೆ.
ಸಮರ್ಪಕ ಮಳೆಯಾದರೆ ಕಾವೇರಿ ಕೊಳ್ಳದ ರೈತಾಪಿ ವರ್ಗ ಸಂತುಷ್ಟರು. ಯಾವುದೇ ತಕರಾರು ಕೂಡ ಉದ್ಭವಿಸುವುದಿಲ್ಲ. ಕರ್ನಾಟಕದಲ್ಲಿಯೂ ಸಾಕಷ್ಟು ನೀರು ಬಳಸಬಹುದು, ತಮಿಳುನಾಡಿಗೂ ಬೇಕಾಗುವಷ್ಟು ನೀರು ಹರಿಸಬಹುದು. ಆದರೆ ಈ ಬಾರಿ ಕರ್ನಾಟಕದಲ್ಲಿಯೂ ಮಳೆಯ ಕೊರತೆಯ ಕಾರ್ಮೋಡ ಕಾಣಿಸಿರುವುದರಿಂದ, ಉಭಯ ರಾಜ್ಯಗಳ ನಡುವೆ ಕಾವು ಏರುವ ಲಕ್ಷಣಗಳೂ ಗೋಚರಿಸುತ್ತಿವೆ.
ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಇದುವರೆಗೆ ರಾಜ್ಯದಲ್ಲಿ ಬಿದ್ದ ಮಳೆಯ ಪ್ರಮಾಣ, ಸರಾಸರಿ ಬೀಳಬೇಕಾಗಿದ್ದ ಮಳೆಗಿಂತ ಶೇ.5ರಷ್ಟು ಕಡಿಮೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಕೊರತೆ ಇದೆ. ಅಂತೆಯೇ, ಕೃಷ್ಣರಾಜ ಸಾಗರ ಜಲಾಶಯವೂ ಬತ್ತಿ ಹೋದ ಸ್ಥಿತಿಯಲ್ಲಿರುವುದರಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿಬಿಟ್ಟಿದ್ದಾರೆ.
ನೀರಾವರಿ ಬಿಡಿ, ಇಲ್ಲಿ ಕುಡಿಯಲೂ ನಮಗೆ ನೀರಿಲ್ಲ, ತಮಿಳುನಾಡಿಗೆ ಬಿಡುವುದಾದರೂ ಹೇಗೆ ಎಂಬುದು ಯಡಿಯೂರಪ್ಪ ಕಳವಳ. ಜಲಾಶಯಗಳ ಕ್ರೆಸ್ಟ್ ಗೇಟ್ ತೆರೆದರೂ ಕೂಡ ನೀರು ಹರಿದು ಹೋಗದು ಎಂಬುದು ಅವರ ನುಡಿ.
ಈ ವರ್ಷ ಕಾವೇರಿ ನೀರಿಗಾಗಿ ತಮಿಳುನಾಡು ತಕರಾರು ಇನ್ನೂ ಎತ್ತಿಲ್ಲ. ಅದುವರೆಗೆ ಕರ್ನಾಟಕ ಸರಕಾರಕ್ಕೆ ತಲೆಬಿಸಿ ಇಲ್ಲ. ಎರಡೂ ರಾಜ್ಯ ಸರಕಾರಗಳ ಮೇಲೆ ಕಾವೇರಿ ಜಲ ನ್ಯಾಯ ಮಂಡಳಿ ಇದೆ. ಈ ಮಂಡಳಿಯ ಮಧ್ಯಂತರ ಮತ್ತು ಅಂತಿಮ ತೀರ್ಪುಗಳೆರಡೂ ಹೇಳಿದಂತೆ ಕರ್ನಾಟಕವು ತಮಿಳುನಾಡಿಗೆ ತಿಂಗಳಿಗೆ ಇಂತಿಷ್ಟು, ಕೆಲವೊಮ್ಮೆ ವಾರಕ್ಕೆ ಇಂತಿಷ್ಟು ನೀರು ಬಿಡಬೇಕಾಗುತ್ತದೆ. ಅದರ ಪ್ರಕಾರ, ಜೂನ್ ತಿಂಗಳಿಗೆ ಕರ್ನಾಟಕವು ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣ 10 ಟಿಎಂಸಿ. ಈ ಬಾರಿ ಇದು ಅಸಾಧ್ಯ ಎಂದು ಕರ್ನಾಟಕ ಹೇಳಿಬಿಟ್ಟಿದೆ.
ಹೀಗಾಗಿ ತಮಿಳುನಾಡು-ಕರ್ನಾಟಕ ನಡುವಣ ಬಾಂಧವ್ಯದ ಕಾವೇರುವುದು, ಬಿಡುವುದು ಮಳೆರಾಯನ ಕೈಯಲ್ಲಿದೆ. |