ಭಾರತದಲ್ಲಿ ಒಂದೆಡೆ ವಿವಾಹ ವಿಚ್ಛೇದನ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಾ ಹೋಗುತ್ತಿದ್ದರೆ, ಇನ್ನೊಂದೆಡೆ ಮಕ್ಕಳು ತಮ್ಮ ಅಪ್ಪಂದಿರ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ವಿಚ್ಛೇದನದಿಂದಾಗಿ ಮಕ್ಕಳನ್ನು ಕಳೆದುಕೊಂಡ ಅಪ್ಪಂದಿರು ತಂದೆಯರ ದಿನದಂದು ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ ಶನಿವಾರ ರ‌್ಯಾಲಿ ನಡೆಸುತ್ತಿದ್ದಾರೆ.ವಿಚ್ಛೇದನದಿಂದಾಗಿ ಮಕ್ಕಳನ್ನು ಕಳೆದುಕೊಂಡ ಇವರು, ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಅಪ್ಪ- ಹಾಗೂ ಅಮ್ಮನ ಪ್ರೀತಿ ಎರಡೂ ದಕ್ಕಬೇಕು ಎಂಬ ಸಂದೇಶ ಸಾರಲು ಈ ರ‌್ಯಾಲಿ ನಡೆಸುತ್ತಿದ್ದಾರೆ. ವಿಚ್ಛೇದಿತರಾಗಿ ಮಕ್ಕಳನ್ನು ಕಳೆದುಕೊಂಡಿದ್ದೇವೆ. ನಮಗೂ ನಮ್ಮ ಮಕ್ಕಳ ಮೇಲೆ ಪ್ರೀತಿಯಿದೆ. ಮಗುವಿಗೂ ನಮ್ಮ ಪ್ರೀತಿ ಅಗತ್ಯ. ಹಾಗಾಗಿ ವಿಚ್ಛೇದನವಾದಾಕ್ಷಣ ಮಗುವನ್ನು ಅಮ್ಮನ ಮಡಿಲಿಗೆ ಮಾತ್ರ ಹಾಕಬೇಡಿ. ಬೇರೆಬೇರೆಯಾದರೂ ಮಗು ಇಬ್ಬರ ಮಡಿಲಲ್ಲೇ ಇರಲಿ ಎಂಬುದು ಇವರ ಹಕ್ಕೊತ್ತಾಯ.ಬೆಂಗಳೂರಿನ ಸುಮಾರು 500ಕ್ಕೂ ವಿಚ್ಛೇದಿತರು ಹಾಗೂ ತಂದೆಯರು ಭಾನುವಾರದ ತಂದೆಯರ ದಿನದ ಅಂಗವಾಗಿ ಶನಿವಾರವೇ ತಮ್ಮ ಪ್ರೀತಿಯ ಜಾಗೃತಿ ಮೂಡಿಸಲಿದ್ದಾರೆ. ಎನ್‌ಜಿಒ ಚಿಲ್ಡ್ರನ್ಸ್ ರೈಟ್ಸ್ ಇನ್ಶಿಯೇಟಿವ್ ಫಾರ್ ಶೇರ್ಡ್ ಪೇರೆಂಟಿಂಗ್ (ಸಿಆರ್ಐಎಸ್‌ಪಿ) ಹಾಗೂ ಸೇವ್ ದಿ ಇಂಡಿಯನ್ ಫ್ಯಾಮಿಲಿ ಫೌಂಡೇಶ್ (ಎಸ್ಐಎಫ್ಎಫ್) ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿವೆ.ಸಿಆರ್ಐಎಸ್‌ಪಿಯ ಅಧ್ಯಕ್ಷ ಕುಮಾರ್ ಜಾಗೀರ್‌ದಾರ್ ಹೇಳುವಂತೆ, ಪ್ರತಿಯೊಬ್ಬ ಮಗುವಿಗೂ ತಮ್ಮ ಹೆತ್ತವರಿಬ್ಬರ ಪ್ರೀತಿಯೂ ದಕ್ಕಿಸಿಕೊಳ್ಳುವ ಅದೃಷ್ಟ ಇರುವುದಿಲ್ಲ. ಮಗು ಬೆಳವಣಿಗೆಯ ಹಂತದಲ್ಲಿರುವಾಗ ಅಪ್ಪ- ಅಮ್ಮ ಬದುಕಿದ್ದರೂ ಇಬ್ಬರ ಪ್ರೀತಿಯೂ ಲಭ್ಯವಾಗದ ಅದೆಷ್ಟೋ ಮಕ್ಕಳಿದ್ದಾರೆ. ವಿಚ್ಛೇದನ ಪ್ರಕರಣಗಳು ಭಾರತದಲ್ಲಿ ದಿನೇ ದಿನೇ ಏರುತ್ತಿದ್ದು, ಹಲವು ಮಕ್ಕಳು ತಮ್ಮ ಹೆತ್ತವರ ಪ್ರೀತಿಗಾಗಿ ಹಂಬಲಿಸುವ, ಹಪಹಪಿಸುವ ಪರಿಸ್ಥಿತಿ ಈಗಿದೆ. ಹೀಗಾಗಿ ತಂದೆಯರ ದಿನದ ಅಂಗವಾಗಿ, ನಮ್ಮ ಸಂಸ್ಥೆಯ ಸದಸ್ಯರು ಮಹಾತ್ಮಾ ಗಾಂಧಿ ರಸ್ತೆಯಲ್ಲಿ ರ್ಯಾಲಿ ನಡೆಸಲಿದ್ದು, ಪ್ರತಿ ಮಗುವಿಗೂ ಅಪ್ಪನ ಪ್ರೀತಿಯೂ ಅಗತ್ಯ ಎಂಬ ಸಂದೇಶ ಸಾರಲಿದ್ದಾರೆ ಎಂದರು ಕುಮಾರ್.ಸ್ವತಃ ಕುಮಾರ್ ಅವರೇ ತನ್ನ ಮಗಳ ಪ್ರೀತಿಗಾಗಿ ಕಳೆದ ಹತ್ತು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ. 2008ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಸಿಆರ್ಐಎಸ್‌ಪಿ ಸಂಸ್ಥೆ ಸುಮಾರು 1,000 ಸದಸ್ಯರನ್ನು ರಾಷ್ಟ್ರಾದ್ಯಂತ ಹೊಂದಿದೆ. ಶನಿವಾರ ಸುಮಾರು 500ಕ್ಕೂ ಹೆಚ್ಚು ಸದಸ್ಯರು ಈ ರ‌್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ಸಿಆರ್ಐಎಸ್‌ಪಿ ಕೇವಲ ತಂದೆಯರನ್ನೇ ತನ್ನ ಸದಸ್ಯರನ್ನಾಗಿ ಹೊಂದಿಲ್ಲ. ನೂರಾರು ತಂದೆಯರು, ತಾಯಿಯರು, ಅಜ್ಜಅಜ್ಜಿಯಂದಿಯರು ಈ ಸಂಸ್ಥೆಯ ಸದಸ್ಯರಾಗಿದ್ದಾರೆ. ವಿಚ್ಛೇದನ ಪಡೆದ ಅಥವಾ ಬೇರೆಬೇರೆಯಾದ ನಂತರವೂ ತಂದೆ ಹಾಗೂ ತಾಯಿ ಇಬ್ಬರ ಪ್ರೀತಿಯೂ ಮಕ್ಕಳಿಗೆ ಸಿಕ್ಕಬಹುದಾದಂತಹ ಕಾನೂನು ರೂಪಿಸಬೇಕೆಂದು ನ್ಯಾಯಕ್ಕಾಗಿ ಹೋರಾಡುವ ಹಲವಾರು ತಂದೆ, ತಾಯಿಯರು, ಮುದುಕರು ಇದರ ಸದಸ್ಯರಾಗಿದ್ದಾರೆ ಎಂದು ಕುಮಾರ್ ತಿಳಿಸಿದರು.ಪ್ರತಿ ಮಗುವೂ ತನ್ನ ಅಪ್ಪ ಹಾಗೂ ಅಮ್ಮ ಇಬ್ಬರ ಪ್ರೀತಿಯನ್ನೂ ಪಡೆಯಲು ಹಕ್ಕು ಹೊಂದಬೇಕು. ಇಬ್ಬರಿಂದಲೂ ಸಮನಾದ ಪ್ರೀತಿ ಪಡೆಯಲು ಮಗುವಿಗೆ ಸಾಧ್ಯವಾಗಬೇಕು ಎಂಬುದೇ ನಮ್ಮ ಸಂಸ್ಥೆಯ ಉದ್ದೇಶ ಎಂದರು ಕುಮಾರ್.ಬೆಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ಸುಮಾರು 13,000 ವಿಚ್ಛೇದನ ಪ್ರಕರಣಗಳು ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿವೆ. ವಿಚ್ಛೇದನ ಪಡೆಯುವಾಗ ನಿಜವಾಗಿಯೂ ತೊಂದರೆಗೊಳಗಾಗುವುದು ಮಗು. ಹಾಗಾಗಿ ಇಬ್ಬರ ಪ್ರೀತಿಯನ್ನೂ ಮಗು ಪಡೆಯುವಂತಾಗಬೇಕು ಎಂದು ಅಭಿಪ್ರಾಯಪಡುತ್ತಾರೆ ಕುಮಾರ್.ನಾವು ಭಾರತದ ಕೌಟುಂಬಿಕ ಕಾನೂನಿನಲ್ಲಿ ತಿದ್ದುಪಡಿ ತರಲೇಬೇಕೆಂದು ಮನವಿ ಮಾಡುತ್ತಿದ್ದೇವೆ. ವಿಚ್ಛೇದನ ಪ್ರಕರಣಗಳಲ್ಲಿ ಇಬ್ಬರ ಪ್ರೀತಿಯೂ ಮಗುವಿಗೆ ದಕ್ಕುವ ಅವಕಾಶವನ್ನು ಕಡ್ಡಾಯಗೊಳಿಸಬೇಕು. ಹೀಗಾದರೆ ಮಾತ್ರ ಹಲವು ಅಪ್ಪಂದಿರ ಕಾನೂನು ಸಮರಕ್ಕೆ ನ್ಯಾಯ ಸಿಗುತ್ತದೆ. ಮಗುವಿಗೂ ಮಾನಸಿಕವಾಗಿ ಅಪ್ಪಂದಿರ ಪ್ರೀತಿ ಸಿಕ್ಕುತ್ತದೆ. ಆದರೆ, ಬಹುತೇಕ ವಿಚ್ಛೇದನ ಪ್ರಕರಣಗಳಲ್ಲಿ ಮಗು ಅಮ್ಮನ ಮಡಿಲಿಗೇ ಸೇರುತ್ತದೆ. ಅಪ್ಪ ದಕ್ಕುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬೆಂಗಳೂರಿನ ಶಿಕ್ಷಕಿ ಶಾರದಾ ಪಾಟೀಲ್ ಹೇಳುವಂತೆ, ಮಗುವಿಗೆ ಅಪ್ಪ ಹಾಗೂ ಅಮ್ಮ ಇಬ್ಬರ ಪ್ರೀತಿಯೂ ಬೆಳೆಯುವ ವಯಸ್ಸಿನಲ್ಲಿ ಸಿಗಬೇಕು. ವಿಚ್ಛೇದನದಂತಹ ಪ್ರಕರಣಗಳಲ್ಲಿ ಮಗುವಿಗೆ ಅದು ತೊಂದರೆಯಾಗಬಾರದು. ಅದಕ್ಕಾಗಿ ಇಂತಹ ಕಾನೂನಿನ ಅಗತ್ಯ ಇದೆ ಎನ್ನುತ್ತಾರೆ. |