ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಕೃಷ್ಣಗೆ ಮಣೆ: ಕುಮಾರ ಮಂತ್ರಿಗಿರಿ ಕನಸು ಭಗ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷ್ಣಗೆ ಮಣೆ: ಕುಮಾರ ಮಂತ್ರಿಗಿರಿ ಕನಸು ಭಗ್ನ
ಸ್ವೀಕಾರಾರ್ಹ, ಕಾರ್ಯದಕ್ಷತೆಯ ಆಶಾಭಾವ ಹುಟ್ಟಿಸಿರುವ ಮೊದಲ ಕಂತಿನ ಸಚಿವರ ಬಳಗವು ಕೇಂದ್ರದ ಯುಪಿಎ ಸರಕಾರಕ್ಕಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದೆ. ಕರ್ನಾಟಕದ ಸಂಸದರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ಸ್ಥೂಲವಾಗಿ ವಿಶ್ಲೇಷಿಸಿದರೆ ಇದರಲ್ಲಿ ಪ್ರಾದೇಶಿಕ ಜಾತಿ ಪ್ರಾತಿನಿಧ್ಯ ವಿಷಯವೇ ಪ್ರಮುಖ ಪಾತ್ರ ವಹಿಸಿದೆ ಎಂದು ಕಂಡುಬರುತ್ತದೆ. ಹೀಗಾಗಿ ಜೆಡಿಎಸ್‌ನಿಂದ ಹೊಸದಾಗಿ ಸಂಸತ್ತಿಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಪಟ್ಟ ಸಿಗುವುದು ಬಹುತೇಕ ಅಸಾಧ್ಯ.

ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ, ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಹಾಗೂ ಚಿಕ್ಕಬಳ್ಳಾಪುರದ ಹೊಸ ಸಂಸದ ಎಂ.ವೀರಪ್ಪ ಮೊಯಿಲಿ ಅವರ ಸೇರ್ಪಡೆಯಲ್ಲಿ ಕರ್ನಾಟಕದಲ್ಲಿ ಲಾಗಾಯ್ತಿನಿಂದಲೂ ಇರುವ ಜಾತಿ ರಾಜಕೀಯದ ಹಿನ್ನೆಲೆ ಪ್ರಧಾನ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯ ಕಾಂಗ್ರೆಸಿನಲ್ಲಿ ಹಿರಿತನ ಮಾತ್ರವಲ್ಲದೆ, ಜಾತೀಯ ಪ್ರಾಬಲ್ಯಕ್ಕೂ ಪೂರಕವಾಗುವಂತೆ ಬುದ್ಧಿವಂತಿಕೆಯಿಂದ ಈ ಆಯ್ಕೆ ನಡೆದಿದೆ.

ನಗುಮುಖದ, ಆಧುನಿಕತೆಯ ಪ್ರತೀಕವಾಗಿರುವ, ಅಮೆರಿಕದಲ್ಲಿ ಶಿಕ್ಷಣ ಪಡೆದ 77ರ ಹರೆಯದ ಎಸ್.ಎಂ.ಕೃಷ್ಣ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕರ್ನಾಟಕದಲ್ಲಿ ಈ ಸಮುದಾಯವು ರಾಜಕೀಯದಲ್ಲಿ ಪ್ರಾಬಲ್ಯ ಮೆರೆಯುತ್ತಿದೆ. ರಾಜ್ಯದ ಜನಸಂಖ್ಯೆಯ ಶೇ.12ರಷ್ಟು ಈ ಸಮುದಾಯದವರಿದ್ದಾರೆ. ವಿಶೇಷವೆಂದರೆ, ಹಿರಿಯ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೂಡ ಒಕ್ಕಲಿಗ ಸಮುದಾಯದ ಹಿರಿಯ ಮುಖಂಡರಾಗಿದ್ದು, ತಮ್ಮ ಮಗನಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ದೊರಕಿಸುವ ಪ್ರಯತ್ನಕ್ಕೆ ಕೃಷ್ಣ ಆಯ್ಕೆಯು ಹಿನ್ನಡೆ ಉಂಟುಮಾಡಿದೆ.

ಚುನಾವಣೆಗಳಲ್ಲಿ ರಾಜ್ಯದ 28ರಲ್ಲಿ ಕಾಂಗ್ರೆಸ್ ಗೆದ್ದುಕೊಂಡದ್ದು 6 ಸ್ಥಾನಗಳನ್ನು. ಅದರಲ್ಲಿ ಮೂವರು ಹಿಂದುಳಿದ ಸಮುದಾಯಕ್ಕೆ ಸೇರಿದವರು. ಇಬ್ಬರು ಪರಿಶಿಷ್ಟ ಜಾತಿ ಮತ್ತು ಒಬ್ಬರು ರಾಜಪೂತ. 2004ರಲ್ಲಿ ಕಾಂಗ್ರೆಸಿನಿಂದ ಗೆದ್ದುಕೊಂಡಿದ್ದ ಏಕೈಕ ಒಕ್ಕಲಿಗ ಮುಖಂಡ ಎಂದರೆ ಮಂಡ್ಯದಿಂದ ಆಯ್ಕೆಯಾಗಿದ್ದ ನಟ ಅಂಬರೀಶ್. ಈ ಬಾರಿ ಅವರು ಜೆಡಿಎಸ್ ಎದುರು ಸೋತು ಹೋಗಿದ್ದಾರೆ.

ಹಿಂದಿನ ಸಂಪುಟದಲ್ಲಿ ಅಂಬರೀಶ್‌ಗೆ ಸಚಿವ ಸ್ಥಾನ ನೀಡಿದ್ದೂ ಬಹುಶಃ ಇದೇ ಕಾರಣಕ್ಕೆ. ಅವರು ಮಾಹಿತಿ ಖಾತೆ ರಾಜ್ಯ ಸಚಿವರಾಗಿದ್ದರೂ, ಅವರು ಹೇಳಿಕೊಳ್ಳುವಂತಹ ಯಾವುದೇ ಸಾಧನೆ ಮಾಡಿ ತೋರಿಸಿರಲಿಲ್ಲ. ಸಂಸತ್ತಿಗೆ ಹಾಜರಾಗಿದ್ದೇ ಅಪರೂಪ, ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಪದತ್ಯಾಗ ಮಾಡಿದ ಬಳಿಕವಂತೂ ಅಂಬರೀಶ್ ಜನರಿಂದ ದೂರವೇ ಆದಂತಿದ್ದರು.

2004ರಲ್ಲಿ ಮುಖ್ಯಮಂತ್ರಿ ಪದವಿ ಕಳೆದುಕೊಂಡ ನಂತರ ಎಸ್.ಎಂ.ಕೃಷ್ಣ ಅವರು ದಕ್ಷಿಣ ಕರ್ನಾಟಕದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಷ್ಟೇನೂ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ. ಆ ಬಳಿಕ ಮಹಾರಾಷ್ಟ್ರ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ ಅವರನ್ನು ಬಳಿಕ ಕಾಂಗ್ರೆಸ್ ಪಕ್ಷವು ರಾಜ್ಯಸಭಾ ಸದಸ್ಯನನ್ನಾಗಿಸಿ ಸಂಸತ್ತಿಗೆ ಕಳುಹಿಸಿತು.

ಕರ್ನಾಟಕದ ಮತ್ತೊಂದು ಬಲಾಢ್ಯ 'ಮತ ಸಮುದಾಯ'ವಾಗಿರುವ ಲಿಂಗಾಯತ ಸಮುದಾಯವು (ರಾಜ್ಯ ಜನಸಂಖ್ಯೆಯ ಶೇ.15) ಬಿಜೆಪಿ ಸುತ್ತಮುತ್ತ ಒಗ್ಗೂಡಿರುವುದರಿಂದ, ರಾಜ್ಯದಲ್ಲಿ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಒಕ್ಕಲಿಗರತ್ತಲೇ ಕಾಂಗ್ರೆಸ್ ತನ್ನ ದೃಷ್ಟಿಯನ್ನು ಬಲವಾಗಿ ನೆಟ್ಟಿದೆ.

ಒಕ್ಕಲಿಗ ಮುಖಂಡನಾಗಿರುವುದರಿಂದ ಕೇಂದ್ರದಲ್ಲಿ ಸಚಿವ ಪದವಿ ಸಿಗುವ ಆಶಾವಾದದಲ್ಲಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಆಶಾವಾದವೆಲ್ಲವೂ ರಾಜ್ಯಸಭಾ ಸದಸ್ಯ ಕೃಷ್ಣರಿಗೆ ಅವಕಾಶ ದೊರೆತ ಕಾರಣದಿಂದ ನೀರುಪಾಲಾಗಿದೆ.

69ರ ಹರೆಯದ ವೀರಪ್ಪ ಮೊಯಿಲಿ ಅವರ ಆಯ್ಕೆಯ ಹಿಂದೆ ಜಾತಿ ರಾಜಕೀಯಕ್ಕಿಂತಲೂ, ಕಾಂಗ್ರೆಸ್ ಹೈಕಮಾಂಡ್ ಜೊತೆ ಅವರಿಗಿರುವ ಸಂಪರ್ಕದ ಪ್ರಭಾವವೇ ಕಾರಣ ಎಂದು ಅಂದಾಜಿಸಲಾಗುತ್ತಿದೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಹಲವಾರು ವರ್ಷದಿಂದ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಅವರು ಐದು ಕೋಟಿಯಲ್ಲಿ ಅಂದಾಜು 33 ಸಾವಿರ ಜನಸಂಖ್ಯೆಯಿರುವ ಹಿಂದುಳಿದ 'ದೇವಾಡಿಗ' ಸಮುದಾಯಕ್ಕೆ ಸೇರಿದವರು. ಇದುವರೆಗೆ ಚುನಾವಣೆಯಲ್ಲಿ ಅವರು ಸಂಸತ್ತಿಗೆ ಆಯ್ಕೆಯಾಗಿರಲೇ ಇಲ್ಲ. ಈ ಬಾರಿ ತಮ್ಮ ತಾಯ್ನಾಡಿನಿಂದ ದೂರ, ಚಿಕ್ಕಬಳ್ಳಾಪುರದಿಂದ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.

ಯುಪಿಎ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಬಹುದು ಎಂದು ದೂರದ ಆಕಾಂಕ್ಷೆ ಇಟ್ಟುಕೊಂಡಿರುವ ಇತರ ಕಾಂಗ್ರೆಸ್ ಸಂಸದರೆಂದರೆ ಪರಿಶಿಷ್ಟ ಜಾತಿಯ ಮುಖಂಡ, ಕೆಪಿಸಿಸಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಇವರು ಕೂಡ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದಾರೆ. ಇನ್ನೊಬ್ಬರೆಂದರೆ ಹಿಂದಿನ ಸರಕಾರದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಪರಿಶಿಷ್ಟ ಜಾತಿ ಮುಖಂಡ ಕೆ.ಎಚ್.ಮುನಿಯಪ್ಪ. ಹಿಂದುಳಿದ ರಾಜಪೂತ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ, ಚೊಚ್ಚಲ ಬಾರಿ ಸಂಸತ್ ಪ್ರವೇಶಿಸಿರುವ ಧರ್ಮ ಸಿಂಗ್ ಅವರು ಕೂಡ ಸಚಿವ ಪಟ್ಟ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಆದರೆ, 6 ಮಂದಿ ಕಾಂಗ್ರೆಸ್ ಸಂಸದರನ್ನು ಮಾತ್ರವೇ ಕಳುಹಿಸಿಕೊಟ್ಟ ಕರ್ನಾಟಕಕ್ಕೆ ಮತ್ತಷ್ಟು ಸಚಿವ ಪಟ್ಟ ದೊರೆಯುವುದು ದೂರದ ಮಾತು. ಗರಿಷ್ಠವೆಂದರೆ ಇನ್ನೊಂದು ಸಚಿವಗಿರಿ ದೊರೆಯಬಹುದು ಎಂಬುದು ವಿಶ್ಲೇಷಕರ ಲೆಕ್ಕಾಚಾರ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಹುಲಿ' ಹತ್ಯೆ: ರಕ್ತ ಸಿಕ್ತ ತಮಿಳು ಹೋರಾಟ ಅಂತ್ಯ
ವೆಬ್‌ದುನಿಯಾದಲ್ಲಿ ಚುನಾವಣಾ ಫಲಿತಾಂಶ ಲೈವ್
ವೆಬ್‌ದುನಿಯಾದಲ್ಲಿ ಅಮರ ಚಿತ್ರ ಕಥಾ ಮಾಲಿಕೆ
ಹಣದುಬ್ಬರ ಶೂನ್ಯವಾದರೂ ಆಹಾರ ಕೈಗೆಟಕುತ್ತಿಲ್ಲವೇಕೆ?
ಕಾನೂನಿಗೆ ಅಂಜದ ಕಾನೂನು ಭಂಜಕರೇ ಇವರು?
ಭಸ್ಮಾಸುರನ ಸ್ಥಿತಿಯತ್ತ ಪಾಕಿಸ್ತಾನ !