ತಂದೆ ಅಹಿಂಸೆಯ ಪ್ರತಿಪಾದಕ ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರ ಅನುಯಾಯಿ. ಆದರೆ ಇವನಿಗೆ ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರೇ ಮಾದರಿ ನಾಯಕರು. ತಮಿಳು ಈಳಂ ಹೋರಾಟಗಾರರಿಗೆ, ಶ್ರೀಲಂಕಾದಲ್ಲಿ ಸೇನೆಯ ದೌರ್ಜನ್ಯಕ್ಕೆ ತುತ್ತಾದ ತಮಿಳರಿಗೆ ಈತ ದೇವರು ಮತ್ತು ಇವನೆಂದಿಗೂ ತಪ್ಪು ಮಾಡುವುದಿಲ್ಲ ಎಂಬ ದೃಢ ವಿಶ್ವಾಸ. ಅಧಿಕಾರಕ್ಕೆ ಹಂಬಲಿಸಿದವನಲ್ಲ, ದ್ರೋಹ ಎಸಗಿದವರನ್ನು ಬಿಟ್ಟವನೂ ಅಲ್ಲ. ವೈರಿ ಯಾರೇ ಆಗಿರಲಿ ಒಂದಿಷ್ಟು ಲವಲೇಶದ ಕರುಣೆಯನ್ನೂ ತೋರಿದವನಲ್ಲ. ಬಂಡಾಯವನ್ನು ಎಂದಿಗೂ ಸಹಿಸದ ಈ ಬಂಡುಕೋರನೇ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್.ಹಲವು ದಶಕಗಳಿಂದ ಶ್ರೀಲಂಕಾಗೆ ತಲೆನೋವಾಗಿದ್ದ ಪ್ರಭಾಕರನ್‌ನ ಶವ ಆತನ ಪುತ್ರ ಚಾರ್ಲ್ಸ್ ಆಂತೋನಿ ಮತ್ತು ಆತ್ಮೀಯ ಸಹಚರ ಪೊಟ್ಟು ಅಮ್ಮನ್ ಶವಗಳ ಜೊತೆ ಪತ್ತೆಯಾಗಿದೆ. ಶ್ರೀಲಂಕಾ ಸರಕಾರ ಇದನ್ನು ದೃಢಪಡಿಸಿದೆ. ಎಲ್ಟಿಟಿಇಯ ಕೊನೆಯ ಅಡಗುದಾಣಕ್ಕೆ ಶ್ರೀಲಂಕಾ ಸೇನೆ ದಾಳಿ ಮಾಡಿದ ಬಳಿಕ, ಬೇರೆ ದಾರಿ ಕಾಣದೆ ಆಂಬುಲೆನ್ಸ್ ಒಂದರಲ್ಲಿ ಕುಳಿತು ಪರಾರಿಯಾಗುತ್ತಿದ್ದ ಪ್ರಭಾಕರನ್ ಮೇಲೆ ಗುಂಡಿನ ದಾಳಿ ನಡೆಸಲಾಯಿತು ಎಂಬುದು ಶ್ರೀಲಂಕಾ ಸೇನೆಯು ಪ್ರಭಾಕರನ್ ಸಾವಿಗೆ ನೀಡಿದ ಕಾರಣ.ಮೂರು ದಶಕಗಳಿಂದ ನಡೆಯುತ್ತಿದ್ದ ತಮಿಳು ಈಳಂ ಆಂದೋಲನವೊಂದು ಸೋಮವಾರ ವೇಲುಪಿಳ್ಳೈ ಪ್ರಭಾಕರನ್‌ನನ್ನು ಕೊಲ್ಲಲಾಗಿದೆ ಎಂದು ಶ್ರೀಲಂಕಾ ಸರಕಾರ ಹೇಳಿಕೆ ನೀಡುವ ಮೂಲಕ ಕೊನೆಗೊಂಡಿದೆ. ಪ್ರಭಾಕರನ್ ನೇತೃತ್ವದ ಸಂಘಟನೆ ಹುಟ್ಟಿಕೊಂಡ ಬಳಿಕ 37 ವರ್ಷಗಳ ಹೋರಾಟದಲ್ಲಿ 70 ಸಾವಿರಕ್ಕೂ ಮಂದಿ ಸಿಂಹಳೀಯರು, ತಮಿಳರು ಹತರಾಗಿದ್ದಾರೆ.ಕ್ರಾಂತಿಕಾರಿ ಮನೋಭಾವ, ತಮಿಳು ಈಳಂ ಸ್ಥಾಪನೆ ಮತ್ತು ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತ ತಮಿಳರಿಗೆ ನ್ಯಾಯ ದೊರೆಯಬೇಕೆಂಬ ಉದ್ದೇಶ ಮತ್ತು ಶತ್ರುಗಳನ್ನು ನಿರ್ದಯವಾಗಿ ಮುಗಿಸಿಬಿಡುವುದಕ್ಕೆ ಹೆಸರಾಗಿದ್ದ ಪ್ರಭಾಕರನ್ ಉಗ್ರಗಾಮಿ ಎಂದೇ ಜಾಗತಿಕ ವಲಯದಲ್ಲಿ ಗುರುತಿಸಲ್ಪಟ್ಟವ. ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಕೊಲ್ಲಿಸಿದ ಬಳಿಕ ಅತ್ತ ಪ್ರಭಾಕರನ್ ಮೇಲೆ ಒತ್ತಡವೂ ಹೆಚ್ಚಾಯಿತು, ಹೋರಾಟಕ್ಕೂ ಹಿನ್ನಡೆಯಾಯಿತು. ಬಹುಶಃ ಆತನ ಅವಸಾನದ ಆರಂಭ ಅಂದೇ ಶುರುವಾಗಿತ್ತು.ತಮಿಳು ನ್ಯೂ ಟೈಗರ್ಸ್ (ಟಿಎನ್‌ಟಿ) ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆ ಬಳಿಕ ಎಲ್ಟಿಟಿಇ ಆಗಿ ರೂಪಾಂತರಗೊಂಡು ಕಳೆದ 33 ವರ್ಷಗಳಿಂದ ಹೆಸರು ಮಾಡಿದೆ. ಪ್ರತ್ಯೇಕತಾವಾದಿ ನಾಯಕರಾದ ಕುಟ್ಟಿಮಣಿ ಮತ್ತು ಜಗನ್ ಅವರನ್ನು ಶ್ರೀಲಂಕಾ ಪಡೆಗಳು ಹತ್ಯೆಗೈದ ಕುಖ್ಯಾತ 'ವೆಲ್ಲಿಕಡೆ ಜೈಲು ಹತ್ಯಾಕಾಂಡ'ದ ಬಳಿಕ ಎಲ್ಟಿಟಿಇ ಮತ್ತಷ್ಟು ಉಗ್ರವಾಯಿತು. ನೂರಾರು ಪ್ರಮುಖ ನಾಯಕರ ಹತ್ಯೆಗಳು, ನಾಲ್ಕು ಯುದ್ಧಗಳು, ಮೂರು ಕದನವಿರಾಮ, ಹಲವಾರು ಶಾಂತಿ ಸಂಧಾನಗಳು, ಮತ್ತಷ್ಟು ಕದನ ವಿರಾಮ ಉಲ್ಲಂಘನೆಗಳು - ಇವ್ಯಾವುವೂ ಪ್ರಭಾಕರನ್‌ಗೆ ಗಣ್ಯವೇ ಆಗಲಿಲ್ಲ. ಅಂತಾರಾಷ್ಟ್ರೀಯ ಬೆಂಬಲವಿಲ್ಲದೆ ತಂಡ ಕಟ್ಟಿಕೊಂಡಿದ್ದ ಪ್ರಭಾಕರನ್ ವಿಶ್ವದ ಅತ್ಯಂತ ಅಪಾಯಕಾರಿ, ಭಯಾನಕ 'ಉಗ್ರಗಾಮಿ' ಎಂಬ ಹೆಸರು ಗಳಿಸಿದ್ದು ವಿಶೇಷ.ಎಲ್ಟಿಟಿಇ ಸಾಂದರ್ಭಿಕವಾಗಿ ರಾಜತಾಂತ್ರಿಕ ಸಂಧಾನಕ್ಕೆ ಕಟ್ಟುಬಿತ್ತಾದರೂ, ಅದಕ್ಕೆ ತಾನು ಆಯ್ದುಕೊಂಡ ಹಿಂಸಾ ಮಾರ್ಗವನ್ನು ತೊರೆಯುವುದು ಸಾಧ್ಯವೇ ಆಗಲಿಲ್ಲ. 1985ರಲ್ಲಿ ಭಾರತವು ಥಿಂಪುವಿನಲ್ಲಿ ಆರಂಭಿಸಿದ ಮತ್ತು ಬಳಿಕ 2002ರಲ್ಲಿ ನಾರ್ವೇ ಆರಂಭಿಸಿದ ಸಂಧಾನ ಮಾತುಕತೆಯಲ್ಲಿ ಅದು ಹಿಂಸೆ ತೊರೆಯಲು ಒಪ್ಪಿತ್ತು. ಆದರೆ ಹುಟ್ಟುಗುಣ ಬಿಡಲಿಲ್ಲ.ಉತ್ತರ ಶ್ರೀಲಂಕಾದ ವಾನ್ನಿ ಅರಣ್ಯಕ್ಕೆ ತನ್ನೆಲ್ಲ ಗುಂಪನ್ನು ಕರೆದೊಯ್ದ ಪ್ರಭಾಕರನ್ ಅಲ್ಲಿ ಅವರನ್ನು ಎಲ್ಲದರಲ್ಲೂ ಪಳಗಿಸಿದ. ಹಲವಾರು ಯುದ್ಧಗಳಲ್ಲಿ ಬದುಕುಳಿದ, ಆದರೆ ಈ ಬಾರಿ ಶ್ರೀಲಂಕಾದ ದಾಳಿಗೆ ತಲೆಬಾಗಲೇಬೇಕಾಯಿತು. ಇಲ್ಲಿ ಆತನ ಪ್ರತ್ಯೇಕ ತಮಿಳು ರಾಷ್ಟ್ರ ಸ್ಥಾಪನೆಯ ಕನಸಿನೊಂದಿಗೆ ಆತನ ಜೀವವೂ ನುಚ್ಚುನೂರಾಯಿತು.ಶಾಲೆ ತಪ್ಪಿಸಿಕೊಳ್ಳುತ್ತಿದ್ದ ಬಾಲಕ:ಜಾಫ್ನಾ ದ್ವೀಪ ಸಮೂಹದ ವಲ್ವೇಟ್ಟಿತುರೈ ಎಂಬಲ್ಲಿ 1954ರ ನವೆಂಬರ್ 26ರಂದು ನಾಲ್ಕು ಮಕ್ಕಳಲ್ಲಿ ಕಿರಿಯವನಾಗಿ ಜನಿಸಿದ್ದ ಪ್ರಭಾಕರನ್‌ನ ತಂದೆ ಒಬ್ಬ ಕಂದಾಯ ಅಧಿಕಾರಿ. 1958ರಲ್ಲಿ ಶ್ರೀಲಂಕಾದಲ್ಲಿ ತಮಿಳು ವಿರೋಧಿ ದಂಗೆ ಸ್ಫೋಟಿಸಿದಾಗ ಇವನಿಗೆ ಕೇವಲ 4 ವರ್ಷ ವಯಸ್ಸು. ಆ ಬಳಿಕ ಹಿಂದೂ ಅರ್ಚಕರೊಬ್ಬರನ್ನು ಜೀವಂತ ದಹನವಾಗಿದ್ದನ್ನು ಕೇಳಿದ್ದ ಆತನ ಮನಸ್ಸಿನೊಳಗೆ ಅದಾಗಲೇ ಸೇಡಿನ ಕಿಡಿಯೊಂದು ಹೊತ್ತಿಕೊಂಡಿತ್ತು. ಚಿಕ್ಕಪ್ಪನ ಹತ್ಯೆ, ಚಿಕ್ಕಮ್ಮನಿಗೆ ಬೆಂಕಿ ಹಚ್ಚಿದ ಘಟನೆಗಳೆಲ್ಲಾ ಆತನನ್ನು ಮತ್ತಷ್ಟು ಕೆರಳಿಸಿತ್ತು. ತತ್ಪರಿಣಾಮವಾಗಿ 17ನೇ ವಯಸ್ಸಿನಲ್ಲೇ ತನ್ನ ಸಶಸ್ತ್ರ ಕ್ರಾಂತಿಯ ಮೊದಲ ಹೆಜ್ಜೆ ಇರಿಸಿದ ಆತ, ತಮಿಳ್ ನ್ಯೂ ಟೈಗರ್ಸ್ ಹೆಸರಿನ ಪುಟ್ಟ ಸಂಘಟನೆಯೊಂದು 1972ರ ಸೆಪ್ಟೆಂಬರ್ ತಿಂಗಳಲ್ಲಿ ಬಾಂಬ್ ದಾಳಿ ನಡೆಸಿದ್ದಕ್ಕೆ ನೇತೃತ್ವ ವಹಿಸಿದ. ಮಧ್ಯೆ ಮಧ್ಯೆ ಶಾಲೆಗೆ ಚಕ್ಕರ್ ಹೊಡೆಯುತ್ತಾ, ಆಗಾಗ್ಗೆ ಹಲವಾರು ದಿನಗಳ ಕಾಲ ನಾಪತ್ತೆಯಾಗುತ್ತಾ, ಸಂಘಟನೆಯೊಂದನ್ನು ಕಟ್ಟಿದ, ಶಸ್ತ್ರಾಸ್ತ್ರ ಸಂಗ್ರಹಿಸತೊಡಗಿದ.ವಾನ್ನಿ ಅರಣ್ಯ ಪ್ರದೇಶದ ಸಮೀಪ ಶಸ್ತ್ರಾಸ್ತ್ರ ತರಬೇತಿ ನೀಡಲಾರಂಭಿಸಿದ ಪ್ರಭಾಕರನ್, ಸಂಘಟನೆಗಾಗಿ ತಂಡದೊಂದಿಗೆ ಬ್ಯಾಂಕು ದರೋಡೆ ಮೂಲಕ ಹಣ ಒಟ್ಟುಗೂಡಿಸಲಾರಂಭಿಸಿದ. 1975ರ ಮೇ 5ರಂದು ಆಗಿನ ಟಿಎನ್‌ಟಿಯು ಎಲ್ಟಿಟಿಇಯಾಗಿ ಪರಿವರ್ತನೆಗೊಂಡು, ತಮಿಳು ಈಳಂ (ಪ್ರತ್ಯೇಕ ರಾಷ್ಟ್ರ) ಸ್ಥಾಪನೆ ಗುರಿಯೊಂದಿಗೆ ಕಾರ್ಯಾಚರಣೆ ಆರಂಭಿಸಿತು. ಶ್ರೀಲಂಕಾ ದ್ವೀಪದ ಉತ್ತರ ಮತ್ತು ಪೂರ್ವ ಭಾಗವನ್ನೊಳಗೊಂಡ ತಮಿಳು ಈಳಂ ಸ್ಥಾಪನೆ ಅದರ ಉದ್ದೇಶ. ಟೈಗರ್ಸ್ (ಹುಲಿ) ಹೆಸರು ಸೇರಿಸಿಕೊಂಡದ್ದು ಯಾಕೆಂದರೆ, ಸಿಂಹಳೀಯರ ವಿರುದ್ಧ ಹೋರಾಡಿದ್ದ ಚೋಳ ದೊರೆಗಳ ಲಾಂಛನ ಹುಲಿ.ಶ್ರೀಲಂಕಾದಲ್ಲಿ ಬಹುಸಂಖ್ಯಾತ ಸಿಂಹಳೀಯರ ಮಧ್ಯೆ ಅಲ್ಪಸಂಖ್ಯಾತ ತಮಿಳರಿಗೆ ಸಮಾನತೆ, ಹಕ್ಕು ದೊರೆಯುವುದು ಗಾಂಧಿ ತತ್ವಗಳಿಂದ, ರಾಜತಾಂತ್ರಿಕ ಮಾತುಕತೆಯಿಂದ ಅಸಾಧ್ಯ ಎಂದು ಬಲವಾಗಿ ನಂಬಿದ್ದ ಪೀಳಿಗೆಯ ಕುಡಿ ಈ ಪ್ರಭಾಕರನ್. ಬೆಂಬಲಿಗರಿಗೆ 'ತಂಬಿ' ಹಾಗೂ ಸ್ವಾತಂತ್ರ್ಯ ಯೋಧ, ವಿರೋಧಿಗಳಿಗೆ 'ಭಯೋತ್ಪಾದಕ' ಆಗಿದ್ದ ಪ್ರಭಾಕರನ್, 1990ರಿಂದೀಚೆಗೆ ಇಂಟರ್‌ಪೋಲ್ ಮತ್ತು ಇತರ ತನಿಖಾ ಏಜೆನ್ಸಿಗಳಿಗೆ ಬೇಕಾದವನಾಗಿದ್ದ. ಸಿಂಹಳೀಯ ಮುಖಂಡರಾದ ಅಂದಿನ ಲಂಕಾ ಅಧ್ಯಕ್ಷ ಪ್ರೇಮದಾಸ, ಗಮನಿ ದಿಸ್ಸನಾಯಕೆ (ಯುಎನ್‌ಪಿ ಅಧ್ಯಕ್ಷೀಯ ಅಭ್ಯರ್ಥಿ) ಮತ್ತು ರಂಜನ್ ವಿಜೆರತ್ನೆ ಹಾಗೂ ಉದಾರವಾದಿ ತಮಿಳು ಮುಖಂಡರಾದ ಅಪ್ಪಪಿಳ್ಳೈ ಅಮೃತಲಿಂಗಮ್, ಯೋಗೇಶ್ವರನ್ ಮತ್ತಾತನ ಪತ್ನಿ ಮತ್ತು ವಿದೇಶಾಂಗ ಸಚಿವರಾಗಿದ್ದ ಲಕ್ಷ್ಮಣ್ ಕದೀರಗಮರ್ ಕೂಡ ಪ್ರಭಾಕರನ್ ತಂಡಕ್ಕೆ ಬಲಿಯಾದವರೇ.ಮುಂದಿನ ಪುಟಕ್ಕೆ |