ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಕೇಸರಿ ಪಡೆಯ ರಾಜಕೀಯ ಅಂತ್ಯಗೊಂಡಿತಾ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇಸರಿ ಪಡೆಯ ರಾಜಕೀಯ ಅಂತ್ಯಗೊಂಡಿತಾ?
ಪ್ರಫುಲ್ ಬಿದ್ವಾಯಿ
PTI
ಇದೀಗ ಮುಕ್ತಾಯಗೊಂಡ ಚುನಾವಣೆಯಲ್ಲಿ ಬಿಜೆಪಿಯು ಅತ್ಯಂತ ಗಮನೀಯ ಮತ್ತು ಹೀನಾಯ ಸೋಲು ಕಂಡಿದೆ. ಸೋಲಿನ ಬಳಿಕ ಅದು ಚುನಾವಣೆಯನ್ನು ತನ್ನಿಂದ ಕಿತ್ತುಕೊಂಡಿದೆ ಎಂಬಂತೆ ವರ್ತಿಸಿದೆ. 2004ರಲ್ಲಿ ಅದರ ಭಾರತ ಪ್ರಕಾಶಿಸುತ್ತಿದೆ ಘೋಷಣೆಯೇ ತನಗೆ ಮುಳುವಾಯಿತು ಎಂಬುದಾಗಿ ಕೆಲವು ನಾಯಕರು ನಂಬಿದ್ದಾರೆ. ಬಿಜೆಪಿಯು ತಾನು ರಾಷ್ಟ್ರೀಯವಾಗಿ ಕಾಂಗ್ರೆಸ್‌ಗೆ ಸಮವಾದ ಪಕ್ಷ ಮತ್ತು ಪರ್ಯಾಯ ಪಕ್ಷವೆಂದು ಹೇಳುತ್ತಿದೆ.

ಗೆದ್ದೇಗೆಲ್ಲುತ್ತೇವೆ ಎಂಬ ನಂಬುಗೆಯಲ್ಲಿದ್ದ ಬಿಜೆಪಿಗೆ ಸೋಲು ಅನಿರೀಕ್ಷಿತವಾಗಿತ್ತು. ಅದು ಕಾಂಗ್ರೆಸ್‌ಗಿಂತ 90 ಸೀಟುಗಳಷ್ಟು ಹಿಂದೆ ಬಿದ್ದಿದೆ. ಕಾಂಗ್ರೆಸ್ 18 ವರ್ಷದ ಬಳಿಕ 200ರ ಗಡಿ ದಾಟಿದೆ. ಅಖಿಲ ಭಾರತ ಮಟ್ಟದಲ್ಲಿ ಈ ಎರಡು ಪಕ್ಷಗಳ ನಡುವೆ ಮತ ಹಂಚಿಕೆಯ ನಡುವಿನ ಅಂತರವು ಶೇ.10ರಷ್ಟು ಅಂಶಗಳಷ್ಟು ಹಿಗ್ಗಿದೆ. ಇದು ಬಿಜೆಪಿಯನ್ನು ಅಧೋಮುಖಿಯಾಗಿಸಿದೆ. ಕಾಂಗ್ರೆಸ್ ಏರುಮುಖವಾಗಿದ್ದರೂ ಅದು ಉತ್ತುಂಗಕ್ಕೆ ತಲುಪಿಲ್ಲ. ಆದರೆ ಅದಕ್ಕೆ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಬಿಜೆಪಿಯು ಉತ್ತುಂಗಕ್ಕೇರಿ ಹತ್ತು ವರ್ಷವಾಗಿದ್ದು, ಅದೀಗ ಕೆಳಮುಖವಾಗಿ ತುಯ್ದಾಡುತ್ತಿದೆ.

ಬಿಜೆಪಿಯು 138 ಸ್ಥಾನದಿಂದ 116ನೆ ಸ್ಥಾನಕ್ಕೆ ಇಳಿದಿದೆ. ಇದು 1999ರ ಚುನಾವಣೆಯ ಕಾಂಗ್ರೆಸ್‌ನ ಪ್ರತಿಫಲನವಾಗಿದೆ. ಆ ವೇಳೆ ಕಾಂಗ್ರೆಸ್ 114 ಸ್ಥಾನಗಳನ್ನು ಗಳಿಸಿತ್ತು. ಆದರೆ ಮತಗಳಿಕೆಯಲ್ಲಿ ಬಿಜೆಪಿಯು ಮತ್ತಷ್ಟು ಕುಸಿದು 1991 ಮತ್ತು 1989ರತ್ತ ಸಾಗಿದೆ. ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಅದಕ್ಕೆ ಇನ್ನಷ್ಟು ಕಷ್ಟವಾಗಲಿದೆ. ಅದರ ಹೇಳಿಕೆಗಳಿಗೆ ವಿರುದ್ಧ ಎಂಬಂತೆ ಮತ್ತಷ್ಟು ಬುಹು ಧ್ರವೀಕರಣವಾಗುತ್ತಿದೆ. ರಾಷ್ಟ್ರದಲ್ಲಿ ಅರ್ಧಕ್ಕಿಂತ ಹೆಚ್ಚಿನ ಮತವು ಪ್ರಾದೇಶಿಕ, ಉಪಪ್ರಾದೇಶಿಕ ಮತ್ತು ಜಾತ್ಯಾಧರಿತ ಹಾಗೂ ಎಡ ಪಕ್ಷಗಳು ನಿಯಂತ್ರಿಸುತ್ತವೆ

ಬಿಜೆಪಿಯು ಮುಂದಿನ ದಿನಗಳಲ್ಲಿ ತನ್ನ ಗಾತ್ರ ಹಾಗೂ ಪ್ರಭಾವದಲ್ಲಿ ಇನ್ನಷ್ಟು ಕುಗ್ಗಲಿದೆ. ಇದರಲ್ಲಿ ಅಡಗಿರುವ ಸತ್ಯವೆಂದರೆ, ಬಿಜೆಪಿಯು ರಾಷ್ಟ್ರೀಯ ಕಾರ್ಯಸೂಚಿಯನ್ನು ಮುಂದುವರಿಸುತ್ತಿಲ್ಲ. ರಾಷ್ಟ್ರದ ಚುಕ್ಕಾಣಿಯು ಅದರ ಕೈ ತಪ್ಪಿ ಐದು ವರ್ಷ ಕಳೆದಿದೆ. ಇದೀಗ ಅದು ತನ್ನೆಲ್ಲ ಉಪಕ್ರಮವನ್ನೂ ಕಳೆದುಕೊಳ್ಳಲೂ ಬಹುದು. ಕಳೆದ ಐದು ವರ್ಷಗಳಲ್ಲಿ ರಾಷ್ಟ್ರೀಯವಾಗಿ ಅದರ ಮತಗಳಿಕೆಯಲ್ಲಿ ಶೇ.3.4ರಷ್ಟು ಕುಸಿತವಾಗಿದೆ. ಮತ್ತು ಅದು ಉತ್ತುಂಗದಲ್ಲಿದ್ದ ಶೇ. 25.6 ಶೇಕಾಡಾದಿಂದ ಎಂಟು ಆಂಶಗಳಷ್ಟು ಹಿನ್ನಡೆಯಾಗಿದೆ. ಸಾಮಾನ್ಯವಾಗಿ ಈ ದರದಲ್ಲಿ ಹಿನ್ನಡೆ ಕಾಣುವ ಪಕ್ಷಗಳು ತಮ್ಮ ನಷ್ಟವನ್ನು ಕ್ಷಿಪ್ರವಾಗಿ ಭರಿಸಿಕೊಳ್ಳವುದಿಲ್ಲ.

ಹಿಮಾಚಲ ಮತ್ತು ಪುಟ್ಟ ರಾಜ್ಯವಾಗಿರುವ ಹಿಮಾಚಲ ಪ್ರದೇಶ ಬಿಟ್ಟರೆ ಬಿಜೆಪಿಯು ಉಳಿದ ಎಲ್ಲಾ ರಾಜ್ಯಗಳಲ್ಲಿ ತನ್ನ ಬೆಂಬಲ ಕಳೆದುಕೊಂಡಿದೆ ಎಂಬುದನ್ನು ಚುನಾವಣಾ ಆಯೋಗದ ಅಂಕೆಸಂಖ್ಯೆಗಳು ತಿಳಿಸುತ್ತವೆ. ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಪಕ್ಷವು ಶೇ 4ರಿಂದ 5 ರಷ್ಟು ಮತಗಳ ನಷ್ಟ ಅನುಭವಿಸಿದೆ. ಪಶ್ಚಿಮ ಬಂಗಾಳ ಮತ್ತು ತಮಿಳ್ನಾಡುಗಳಲ್ಲಿ ನಷ್ಟದ ಪ್ರಮಾಣ ಶೇ.2ರಿಂದ 3. ಬಿಹಾರದಲ್ಲಿ ಬಿಜೆಪಿಯಲ್ಲಿ ಜೆಡಿಯುವಿನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ಇಲ್ಲಿ ನಷ್ಟದ ಪ್ರಮಾಣ ಶೇ.ಒಂದಕ್ಕಿಂತಲೂ ಕಡಿಮೆಯಾಗಿದೆ. ಕೇರಳ, ಅಸ್ಸಾಂ, ಒರಿಸ್ಸಾ, ಚತ್ತೀಸ್‌ಗಢ ಮತ್ತು ಹರ್ಯಾಣಗಳಲ್ಲೂ ಪಕ್ಷವು ಇಳಿಮುಖದ ಹಾದಿ ಹಿಡಿದಿದೆ. ನಿರ್ಣಾಯಕ ಅಂಶವೆಂದರೆ, ಬಿಜೆಪಿ ಆಳ್ವಿಕೆ ಇರುವ ಮಧ್ಯಪ್ರದೇಶ, ಗುಜರಾತ್, ಚತ್ತೀಸ್‌ಗಢ ಮತ್ತು ಉತ್ತರಖಂಡ‌ಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಬೆಂಬಲ ಕಡಿಮೆಯಾಗಿದೆ.

ಇದಲ್ಲದೆ ಬಿಜೆಪಿಯ ಇತರ ಎರಡು ಬೆಂಬಲದ ಮೂಲವೆಂದರೆ ನಗರಗಳು ಮತ್ತು ಯುವಕರು. ಪಕ್ಷವು ಉತ್ತುಂಗದಲ್ಲಿದ್ದಾಗ ಅದು ಮೇಲ್ವರ್ಗದ ಹಿಂದೂಗಳ ಪಕ್ಷವಾಗಿತ್ತು. ಮತ್ತು ನಗರದ ಮಂದಿ ಬಿಜೆಪಿಯತ್ತ ಒಲವು ಸೂಚಿಸಿದ್ದರು. ಆದರೆ ಮುಂಬೈ ಮತ್ತು ದೆಹಲಿಗಳಲ್ಲಿ ಅದು ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ. ಹೈದರಾಬಾದ್, ಪುಣೆ, ಲಕ್ನೋ, ಜೈಪುರ, ಇಂಧೋರ್, ಬೋಪಾಲ್, ಚಂಡೀಗಢ, ರಾಯ್‌ಪುರ, ಪಶ್ಚಿಮ ಅಹಮದಾಬಾದಿಗಳಲ್ಲೂ ಬಿಜೆಪಿಯ ಗಣನೀಯ ಇಳಿಕೆ ಕಂಡಿದೆ.

ಬಿಜೆಪಿಯು ಯುವಕರ ಆಕರ್ಷಣೆ ಕಳೆದುಕೊಳ್ಳುತ್ತಿದೆ ಎಂಬುದಾಗಿ ಹಲವಾರು ಸಮೀಕ್ಷೆಗಳು ಹೇಳುತ್ತಿವೆ. ಸಂಕುಚಿತ ಮನೋಭಾವಕ್ಕಿಂತ ಆಧುನಿಕ ಜಾತ್ಯತೀತೆಯತ್ತ ಯುವಕರು ವಾಲುತ್ತಿದ್ದಾರೆ ಎನ್ನಲಾಗುತ್ತಿದೆ. ವಿಶೇಷವಾಗಿ ಮೊದಲ ಬಾರಿಗೆ ಮತಚಲಾಯಿಸುವವರಲ್ಲಂತೂ ಇದು ನಿಜ. ಭಾರತದ ಜನಸಂಖ್ಯಾ ನಕಾಶೆಯ ಪ್ರಕಾರ ಜನಸಂಖ್ಯೆಯ ಶೇ 70ರಷ್ಟು ಮಂದಿ 40ಕ್ಕಿಂತ ಒಳಗಿನ ಹರೆಯದವರು. ಮತ್ತು 25ರೊಳಗಿನವರ ಸಂಖ್ಯೆಯು ಹೆಚ್ಚುತ್ತಿದೆ. ಇದೂ ಸಹ ಬಿಜೆಪಿಗೆ ಮುಳುವಾಗುತ್ತಿದೆ. ಬಿಜೆಪಿಯ ಎರಡನೆ ಹಂತದ ನಾಯಕರು 50ರ ಅಂತ್ಯದಲ್ಲಿ ಅಥವಾ 60ರ ಆದಿಯ ವಯೋಮಾನದವರಾಗಿರುವ ಕಾರಣ ಅವರು ಸುಲಭದಲ್ಲಿ ಯುವ ಮತದಾರರನ್ನು ತಲುಪುತ್ತಿಲ್ಲ. ಮುಂಬರುವ ವರ್ಷಗಳಲ್ಲಿ ಕ್ಷಿಪ್ರವಾಗಿ ನಗರೀಕರಣವಾಗುತ್ತಿರುವ ಭಾರತದಲ್ಲಿ ಯುವಕರನ್ನು ಸೆಳೆಯುವುದು ಬಿಜೆಪಿಗೆ ಸುಲಭವಾಗಿ ಕಾಣುತ್ತಿಲ್ಲ.

ಬಿಜೆಪಿಯು ಯುವಜನತೆಯನ್ನು ಸೆಳೆಯಲು ಅತ್ಯಾಧುನಿಕ ತಂತ್ರವನ್ನು ಬಳಸಿಕೊಂಡಿದೆ. ಕಂಪ್ಯೂಟರ್‌ಗಳು, ವೆಬ್‌ಸೈಟುಗಳು ಎಸ್ಸೆಮ್ಮೆಸ್‌ಗಳು ಹಾಗೂ ಅತ್ಯಾಕರ್ಷಕ ಜಾಹೀರಾತನ್ನು ಬಳಸಿಕೊಂಡಿದೆ. ಆದರೆ ಅದರಲ್ಲಿನ ಕೊರತೆ ಎಂದರೆ, ಗೊಡ್ಡು ಸಂಪ್ರಾಯ, ಜಾತಿ, ಪುರುಷ ಹಿಡಿತ, ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಗೌರವದ ಕೊರತೆ, ನಂಬುಗೆಯ ಭ್ರಾಂತಿ ಇವೆಲ್ಲವುಗಳು ಹಿನ್ನಡೆಗೆ ಕಾರಣ.

ಬಿಜೆಪಿಯು ಆಧುನಿಕತೆ ಪರೀಕ್ಷೆಯಲ್ಲಿ ವಿಫಲವಾಗಿದೆ. ಅದು 80 ಶೇಕಡಾದಷ್ಟು ಬಹುಸಂಖ್ಯಾತವಿರುವ ಹಿಂದೂಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಶಿವಸೇನಾ ಹೊರತು ಪಡಿಸಿದರೆ, ಬಿಜೆಪಿ ಮಾತ್ರ ಭಾರತದ ಮೂಲಭೂತ ಅಂಶಗಳಾಗಿರುವ ವೈವಿಧ್ಯತೆ, ಬಹುಭಾಷೆ, ಬಹುಸಂಸ್ಕೃತಿ ಹಾಗೂ ಬಹು ಧಾರ್ಮಿಕ ಸಮಾಜ ನೀತಿಯನ್ನು ತಳ್ಳಿಹಾಕುತ್ತದೆ.

ಇದಲ್ಲದೆ, ಬಿಜೆಪಿಯು ಆಡ್ವಾಣಿ ಅವರ ಸಬಲ ನಾಯಕತ್ವದೊಂದಿಗೆ ರಾಷ್ಟ್ರೀಯ ಆಶೋತ್ತರಗಳನ್ನು ಪೂರೈಸಲಾಗುವುದು ಎಂದು ಹೇಳಿತ್ತು. ವರುಣ್ ಗಾಂಧಿ ಮೂಲಕ ಹಿಂದುತ್ವದ ಹೆಸರಿನಲ್ಲಿ ದ್ವೇಷಭಾಷಣವನ್ನು ಮಾಡಿಸಿತು. ಮತ್ತು ನರೇಂದ್ರ ಮೋದಿ ಅವರನ್ನು ತನ್ನ ತಾರಾ ಪ್ರಚಾರಕರನ್ನಾಗಿ ಬಿಟ್ಟಿತು. ವರುಣ್ ಭಾಷಣದಿಂದಾಗಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಆರರಿಂದ ಹತ್ತು ಸೀಟು ಕಳಕೊಂಡಿತು. ಮೋದಿಯವರ ಅಭಿವೃದ್ಧಿ ಮಂತ್ರ ಲಾಭ ನೀಡಲಿಲ್ಲ.

ಬಿಜೆಪಿಯು ತನ್ನ ಎದುರಾಳಿಯ ದೌರ್ಬಲ್ಯವನ್ನು ಪರಿಣಾಮಕಾರಿಯಾಗಿ ಬಯಲಿಗೆಳೆಯಲಿಲ್ಲ. ಯಾಕೆಂದರೆ ಅದು ತನ್ನ ನೀತಿಗಳನ್ನು ಅಥವಾ ಆಡಳಿತ ಕಾರ್ಯಸೂಚಿಗಳನ್ನು ನೀಡಲಿಲ್ಲ. ಉಕ್ಕಿನ ಮನುಷ್ಯ ಆಡ್ವಾಣಿ ಅವರ ವಿಶೇಷ ಸಾಮರ್ಥ್ಯದ ಮೂಲಕ ಭಯೋತ್ಪಾದನೆಯನ್ನು ಮಟ್ಟಹಾಕುವುದಾಗಿ ಹೇಳಿತು. ಅಲ್ಲದೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೇಶ ಹಿಂದೆಂದೂ ಕಾಣದಂತಹ ದುರ್ಬಲ ಪ್ರಧಾನಿ ಎಂದು ಹೇಳಿತು. ಸಾಚಾರ್ ಸಮಿತಿಯನ್ನು ಪ್ರಸ್ತಾಪಿಸುವ ಮೂಲಕ ಮುಸ್ಲಿಮರನ್ನು ಓಲೈಸಲು ಪ್ರಯತ್ನಿಸಿತು. ಆದರೆ ಜನತೆ ಕಾಂಧಾರ್ ವಿಮಾನ ಅಪಹರಣ ಪ್ರಕರಣವನ್ನು ಮರೆಯಲಿಲ್ಲ. ಎನ್‌ಡಿಎ ಸರ್ಕಾರ ಭಯೋತ್ಪಾದನೆಯನ್ನು ನಿರ್ವಹಿಸಿದ ರೀತಿಯನ್ನು ಕಾಂಗ್ರೆಸ್ ನೆನಪಿಸುವಲ್ಲಿ ಯಶಸ್ವಿಯಾಯಿತು. ಅಲ್ಲದೆ, ಅರುಣ್ ಜೇಟ್ಲಿ ಹಾಗೂ ರಾಜ್‌ನಾಥ್ ಸಿಂಗ್ ನಡುವಿನ ವೈಮನಸ್ಸು ಆಡ್ವಾಣಿಯವರ ನಿರ್ಣಾಯಕ ವ್ಯಕ್ತಿತ್ವಕ್ಕೆ ಹಾನಿ ಮಾಡಿತು. ಆಡ್ವಾಣಿಯವರ 'ದುರ್ಬಲ' ಹೇಳಿಕೆಗೆ ಮನಮೋಹನ್ ಸಿಂಗ್ ಅವರು ಘನತೆಯಿಂದ ನೀಡಿದ ತಿರುಗೇಟು ಮತ್ತಷ್ಟು ಹಾನಿಮಾಡಿತು.

ಇವೆಲ್ಲವುಗಳ ಪರಿಣಾಮ ಬಿಜೆಪಿಯು ರಚನಾತ್ಮಕ ಕಾರ್ಯಸೂಚಿಗಳಿಲ್ಲದೆ ಋಣಾತ್ಮಕ, ಜಗಳಗಂಟ ಪಕ್ಷವಾಗಿ ಮೂಡಿಬಂತು. ಅಲ್ಲದೆ ಅದು ಕಾಂಗ್ರೆಸ್‌ನ ಬೆಳವಣಿಗೆಯನ್ನು ಕೀಳಂದಾಜಿಸಿತ್ತು. ಕಾಂಗ್ರೆಸ್‌ನ ಯುವನಾಯಕರು ಮತ್ತು ಯುವನಾಯಕತ್ವ, ಯುಪಿಎ ಸರ್ಕಾರದಲ್ಲಿ ಟೆಲಿಕಾಂ ಮತ್ತು ಹೈವೇ ಬಿಟ್ಟರೆ ಅಂತಹ ಹಗರಣಗಳು ಇಲ್ಲದಿರುವುದು ಹಾಗೂ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರ ಘನತೆಯ ನಡತೆಗಳು- ಇವೆಲ್ಲವುಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಬಿಜೆಪಿಯ ಈ ಸೋಲಿನ ಹಿಂದೆ ಇನ್ನಷ್ಟು ಸಮಸ್ಯೆಗಳಿವೆ. ಬಿಜೆಪಿಯು ಕೋಮು ಧ್ರುವೀಕರಣದಿಂದ ಹಿಂದೂ ಮತಗಳನ್ನು ಪಡೆಯುವುದು ಹಿಂದಿನಂತೆ ಇನ್ನು ಸುಲಭವಲ್ಲ. ರಾಮಜನ್ಮಭೂಮಿಯ ಟ್ರಂಪ್ ಕಾರ್ಡ್ ಸಹ ಅಂತಹ ಇಳುವರಿ ನೀಡುವಂತೆ ಕಾಣುತ್ತಿಲ್ಲ. ಈಗಿನ ಸಮಾಜಿಕ ಸ್ಥಿತಿಗಳು ಸಾಕಷ್ಟು ಬದಲಾವಣೆ ಕಂಡಿವೆ. ಮಧ್ಯಮವರ್ಗಗಳು ಅವುಗಳ ಕೀಳರಿಮೆ ಕಳೆದುಕೊಂಡಿದೆ. ಅವುಗಳು ಸ್ವಾಭಿಮಾನಕ್ಕಾಗಿ ಮಸೀದಿ ಉರುಳಿಸುವ ಸಿದ್ಧಾಂತದಿಂದ ವಿಮುಖವಾಗುತ್ತಿವೆ.

ಬಿಜೆಪಿಯ ಸೈದ್ಧಾಂತಿಕ, ವ್ಯೂಹಾತ್ಮಕ ಬಿಕ್ಕಟ್ಟು, ಸಾಂಸ್ಥಿಕ ಬಿಕ್ಕಟ್ಟು, ನಾಯಕತ್ವದ ಬಿಕ್ಕಟ್ಟಿನಿಂದ ಬಳಲುತ್ತಿದೆ. ಹಿಂದುತ್ವ ಎಂಬ ಭ್ರಾಂತಿಗೆ ಅಂಟಿಕೊಂಡಿರುವುದು ಧಾರ್ಮಿಕ ಮುಕ್ತವಾದ ಸಿದ್ಧಾಂತವನ್ನು ಕಂಡುಕೊಳ್ಳದಿರುವುದು ಮತ್ತು ಆರೆಸ್ಸೆಸ್ ಅನ್ನು ತನ್ನ ಮಾರ್ಗದರ್ಶಕ, ರಾಜಕೀಯ ಗುರು ಹಾಗೂ ಸಾಂಸ್ಥಿಕ ಗೇಟ್‌ಕೀಪರ್ ಆಗಿರಿಸಿಕೊಂಡಿರುವುದೂ ಸಹ ಬಿಜೆಪಿ ಹಿನ್ನಡೆಗೆ ಕಾರಣ.

ತನ್ನ ಪ್ರಮುಖ ರಾಜಕೀಯವನ್ನು ಮತಗಳನ್ನಾಗಿಸಲು ಮತ್ತು ಜನಪ್ರಿಯ ಆಕರ್ಷಣೆಯನ್ನಾಗಿಸಲು ಬಿಜೆಪಿ ಬಳಿ ಕಾರ್ಯತಂತ್ರವಿಲ್ಲ. ರಾಮಮಂದಿರ ವಿಚಾರ ಬಿಟ್ಟರೆ ಅದು ಅಂಟಿಕೊಂಡಿದ್ದು ಮಂಡಲ್ ಆಯೋಗಕ್ಕೆ. ಮಂಡಲ್ ವಿರೋಧಿ ನಿಲುವು ಬಿಜೆಪಿಗೆ ಮೇಲ್ವರ್ಗಗಳ ಮತಗಳನ್ನು ತಂದುಕೊಟ್ಟಿತು. ಆದರೆ ಇದು ಕೆಳಜಾತಿಗಳ ಕೋಪಕ್ಕೆ ತುತ್ತಾಯಿತು. ಒಂದು ಕಾಲದಲ್ಲಿ ಬಿಜೆಪಿಯು ಮಂಡಲ ಮತ್ತು ಕಮಂಡಲ(ಹಿಂದುತ್ವ) ಅಂಟಿಕೊಂಡಿತ್ತು. ಆದರೆ ಈಗ ಕಾಲ ಹಾಗಿಲ್ಲ.

ಬಿಜೆಪಿಯ ಸಾಂಸ್ಥಿಕ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತಿದೆ. ಆರೆಸ್ಸೆಸ್ ಮತ್ತು ಇತರ ಸಂಘಪರಿವಾರಗಳೊಂದಿಗೆ ಇದರ ಸಂಬಂಧ ಉದ್ವಿಗ್ನಗೊಳ್ಳುತ್ತಿದೆ. ಅದು ಇಂದಿನ ಕಾಂಗ್ರೆಸ್‌ಗಿಂತಲೂ ಹೆಚ್ಚು ಹೋಳಾಗುತ್ತಿದೆ. ಗುಜರಾತಿನಲ್ಲೂ ವಿಶ್ವಹಿಂದೂ ಪರಿಷತ್ ಅಸಮಾಧಾನವಿದೆ. ಆರೆಸ್ಸೆಸ್‌ಗೂ ಸಂಘಪರಿವಾರದ ಮೇಲೆ ಮೊದಲಿನ ಹಿಡಿತ ಉಳಿದಿಲ್ಲ. ಅಲ್ಲದೆ ಬಿಜೆಪಿಯೊಳಗಿನ ನಾಯಕತ್ವ ಬಿಕ್ಕಟ್ಟು ದಟ್ಟವಾಗಿದೆ. ವಾಜಪೇಯಿ-ಆಡ್ವಾಣಿ ನಂತರದ ತಲೆಮಾರಿನ ನಾಯಕರೊಳಗೆ ಪರಸ್ಪರ ವಿರೋಧ ಬೆಳೆಯುತ್ತಿದೆ.

ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಬಿಜೆಪಿಯು ಹೇಗೆ ಮತ್ತೆ ಹೊಸ ಚೈತನ್ಯವನ್ನು ಕಾಣುಬಹುದು ಎಂಬುದು ಪ್ರಶ್ನೆ. ಇದು ದೀರ್ಘಕಾಲೀನ ಸೋಲು ಅನುಭವಿಸಿದರೂ ಅಚ್ಚರಿ ಇಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೃಷ್ಣಗೆ ಮಣೆ: ಕುಮಾರ ಮಂತ್ರಿಗಿರಿ ಕನಸು ಭಗ್ನ
'ಹುಲಿ' ಹತ್ಯೆ: ರಕ್ತ ಸಿಕ್ತ ತಮಿಳು ಹೋರಾಟ ಅಂತ್ಯ
ವೆಬ್‌ದುನಿಯಾದಲ್ಲಿ ಚುನಾವಣಾ ಫಲಿತಾಂಶ ಲೈವ್
ವೆಬ್‌ದುನಿಯಾದಲ್ಲಿ ಅಮರ ಚಿತ್ರ ಕಥಾ ಮಾಲಿಕೆ
ಹಣದುಬ್ಬರ ಶೂನ್ಯವಾದರೂ ಆಹಾರ ಕೈಗೆಟಕುತ್ತಿಲ್ಲವೇಕೆ?
ಕಾನೂನಿಗೆ ಅಂಜದ ಕಾನೂನು ಭಂಜಕರೇ ಇವರು?