ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಕನ್ನಡಿಗ 'ಮುನಿಯ'ಲಿಲ್ಲ, ಆದರೂ ಅನ್ಯಾಯ ನಿಲ್ಲಲಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡಿಗ 'ಮುನಿಯ'ಲಿಲ್ಲ, ಆದರೂ ಅನ್ಯಾಯ ನಿಲ್ಲಲಿಲ್ಲ
ಅವಿನಾಶ್ ಬಿ.
WD
ಕೆ.ಎಚ್.ಮುನಿಯಪ್ಪರನ್ನು ಸಾರಿಗೆ ಖಾತೆಯಿಂದ ತೆಗೆದು ಹಾಕಿ ರೈಲು ಇಲಾಖೆಗೆ ಹಾಕಿದ್ದು ಒಂದಿಷ್ಟಾದರೂ ಫಲ ನೀಡಿದಂತೆ ಕಾಣುತ್ತಿದೆ. ಸ್ವಾತಂತ್ರ್ಯ ಬಂದಾರಭ್ಯ ಕಳೆದ 60 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಎಂಬ ಉಭಯ ಅಧಿಕಾರ ಕೇಂದ್ರಗಳಲ್ಲಿ ಕಾಂಗ್ರೆಸ್ ಸರಕಾರವೇ ಇದ್ದರೂ ಮತ್ತು ಆ ಬಳಿಕ ಕೇಂದ್ರದಲ್ಲೊಂದು ಸರಕಾರ, ರಾಜ್ಯದಲ್ಲಿ ವಿರೋಧ ಪಕ್ಷದ ಸರಕಾರ ಇರುವ ಮೂಲಕ ಯಾವಾಗಲೂ ಅನ್ಯಾಯವನ್ನೇ ನುಂಗಿಕೊಂಡಿರಬೇಕಾಗುತ್ತಿದ್ದ ಕನ್ನಡಿಗರ ಬಾಯಾರಿಕೆಗೆ ಈ ಬಾರಿ ಒಂದಿಷ್ಟು ಗುಟುಕು ನೀರು ಕೊಟ್ಟಿದ್ದಾರೆ ಮಮತಾ ಬ್ಯಾನರ್ಜಿ. ಆದರೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬ ಸ್ಥಿತಿ ಮಾತ್ರ ಮುಂದುವರಿದಿರುವುದಕ್ಕೆ ಬಹುಶಃ ರಾಜ್ಯದಲ್ಲಿ ಕಾಂಗ್ರೆಸ್ ಬದ್ಧ ರಾಜಕೀಯ ವೈರಿ ಬಿಜೆಪಿ ಸರಕಾರ ಇರುವುದೇ ಕಾರಣ ಇರಬಹುದು.

ಕರ್ನಾಟಕಕ್ಕೆ ಏನೇನ್ ಸಿಕ್ತು? ಇಲ್ಲಿ ಕ್ಲಿಕ್ ಮಾಡಿ.

ಈ ಬಾರಿ ರೈಲ್ವೇ ಸಚಿವ ಪಟ್ಟ ಲಾಲೂ ಪ್ರಸಾದ್ ಯಾದವ್‌ಗೆ ಇಲ್ಲ ಎಂಬ ಸುದ್ದಿ ಕೇಳಿದಾಗಲೇ ಕನ್ನಡಿಗರ ಮನಸ್ಸಿನಲ್ಲಿ ಒಂದಷ್ಟು ಆಶಾಭಾವನೆ ಅರಳಿತ್ತು. ಮಮತಾ ಬ್ಯಾನರ್ಜಿ ಅವರನ್ನು ರೈಲ್ವೇ ಸಚಿವೆಯನ್ನಾಗಿ ನೇಮಕ ಮಾಡಿದಾಗ, ಅವರಿಗೆ ಉಪ ಸಚಿವರನ್ನಾಗಿ ಕೋಲಾರದ ಸಂಸದ ಕೆ.ಎಚ್.ಮುನಿಯಪ್ಪರನ್ನು ನೇಮಿಸಿದಾಗ ಹಾಗೂ ಈ ಬಾರಿ ಜನಪರ ಬಜೆಟ್ ಮಂಡಿಸುತ್ತೇನೆ, ಪ್ರಾದೇಶಿಕ ಅಸಮತೋಲನ ನೀಗಿಸುವ ಪ್ರಯತ್ನ ಮಾಡುತ್ತೇನೆ ಎಂದೆಲ್ಲಾ ಆಕೆ ಹೇಳಿದಾಗ ಹಿರಿಹಿರಿ ಹಿಗ್ಗಿದ್ದರು ಕನ್ನಡಿಗರು. ಸಾರ್ವಜನಿಕರು ಮತ್ತು ಕನ್ನಡದ ಔದ್ಯಮಿಕ ವಲಯದಲ್ಲಿಯೂ ಭಾರೀ ನಿರೀಕ್ಷೆಗಳೇ ಇದ್ದವು.

ಮುನಿಯಪ್ಪ ಸಾರಿಗೆ ಸಚಿವರಾಗಿದ್ದಾಗ ಕರ್ನಾಟಕಕ್ಕೆ ಏನೂ ಪ್ರಯೋಜನವಾಗಿಲ್ಲ, ಎಲ್ಲ ಯೋಜನೆಗಳು ಕೂಡ ಅಂದು "ಬಂದರು ಮತ್ತು ಸಾರಿಗೆ" ಸಚಿವರಾಗಿದ್ದ ಎ.ರಾಜಾ ಅವರಿದ್ದ ತಮಿಳುನಾಡಿಗೇ ವರ್ಗಾವಣೆಯಾಗಿ ಕರ್ನಾಟಕವಂತೂ ಕಣ್ಣು ಮುಚ್ಚಿಯೇ ಕಣ್ಣೀರಿಡಬೇಕಾಗುತ್ತಿತ್ತು. ಬಹುಶಃ ಮುನಿಯಪ್ಪ ಅವರಿಗೆ ಕನ್ನಡಿಗರ ನೋವಿನ ಬಿಸಿ ಒಂದಷ್ಟು ತಟ್ಟಿರಬಹುದು. ಹೀಗಾಗಿ ಬಜೆಟ್ ಮಂಡಿಸಿದ ದಿನವಾದ ಶುಕ್ರವಾರವಂತೂ ಮಮತಾ ಪಕ್ಕದಲ್ಲೇ ಇದ್ದುಕೊಂಡು, ಇನ್ನಿಲ್ಲದ ಒತ್ತಡ ಹಾಕಿ, ಕರ್ನಾಟಕಕ್ಕೆ ಒಂದಿಷ್ಟಾದರೂ ಸಹಾಯ ಮಾಡಿ, ಇಲ್ಲವಾದಲ್ಲಿ ನಮಗೆ, ಕಾಂಗ್ರೆಸಿಗೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಬಳಿಯೂ ಹೇಳಿದ್ದಿರಬಹುದು. ಪರಿಣಾಮ, ಕನ್ನಡಿಗರಿಗೆ ಬರಗಾಲದಲ್ಲಿ ಒಂದು ಗುಟುಕು ನೀರು.

ಸಾರಿಗೆ ಲಾಬಿ ಇರುವ ಬೆಂಗಳೂರು-ಮಂಗಳೂರು ರೈಲು ಸಂಪರ್ಕವಂತೂ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿದೆ. ಇದಕ್ಕೆ ಕಾರಣ ಅದು ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ರೈಲು. ಬಸ್ಸಿನಲ್ಲಾದರೆ ಏಳೆಂಟು ತಾಸು ಸಾಕಾಗುವ ರೈಲು ಪ್ರಯಾಣಕ್ಕೆ ರೈಲಿನಲ್ಲಿ ಭರ್ತಿ 12 ತಾಸು. ಲಾಲೂ ಯಾದವ್ ರೈಲ್ವೇ ಸಚಿವರಾಗಿದ್ದಾಗ ಈ ರೈಲನ್ನು ದಯಪಾಲಿಸಿದ್ದರೂ, "ಕೊಟ್ಟಂತಿರಬೇಕು, ಕೊಡದಂತೆಯೂ ಇರಬೇಕು" ಎಂಬ ಧೋರಣೆಯಲ್ಲಿ ಈ ಕೊಂಕಣ ಸುತ್ತುವ ರೈಲನ್ನು ದಯಪಾಲಿಸಿದ್ದರು. ಇಷ್ಟಾದರೂ ಸಿಕ್ಕಿತಲ್ಲ ಎಂಬುದಷ್ಟೇ ಬೆಂಗಳೂರು-ಮಂಗಳೂರು ನಡುವಣ ಪ್ರಯಾಣಿಕರ ನಿಟ್ಟುಸಿರು. ಆದರೆ, ನಿಜವಾಗಿಯೂ ಬೇಕಾಗಿರುವುದು ಬೆಂಗಳೂರು-ಮಂಗಳೂರು ನಡುವಿನ ಹಗಲು ರೈಲು ಹಾಗೂ ನೇರ ರೈಲು ಪ್ರಯಾಣ ವ್ಯವಸ್ಥೆ. ಅದಂತೂ ಈ ಬಜೆಟಿನಲ್ಲಿಯೂ ಕೈಗೂಡಿಲ್ಲ. ಬಿಜೆಪಿಯವರು ಕಾಂಗ್ರೆಸಿನವರು ರಾಜಕೀಯ ಮಾಡೋದೇ ಬಂತು.

ಹಳಿ ಪರಿವರ್ತನೆ ನೆಪದಲ್ಲಿ 1997ರಲ್ಲಿ ಸ್ಥಗಿತಗೊಂಡಿದ್ದ ಈ ರೈಲು ಮಾರ್ಗವು ಕೇಂದ್ರ ಸರಕಾರದ ದಿವ್ಯ ನಿರ್ಲಕ್ಷ್ಯ, ಸಾರಿಗೆ ಲಾಬಿ ಇತ್ಯಾದಿಗಳ ಫಲವಾಗಿ ಆಮೆಗತಿಯಲ್ಲಿ ಸಾಗಿತ್ತು. ರಾಜ್ಯ ಹೆದ್ದಾರಿಯಂತೂ ಕುಲಗೆಟ್ಟು ಹೋಗಿ ಬೆಂಗಳೂರು-ಮಂಗಳೂರು ನಿತ್ಯ ಸಂಚಾರ ನರಕವಾಗಿದ್ದಂತೂ ಎಲ್ಲರಿಗೂ ಗೊತ್ತು. 2007ರ ನವೆಂಬರ್ ತಿಂಗಳಲ್ಲಿ ಮಂಗಳೂರು ಮತ್ತು ರಾಜಧಾನಿ ನಡುವೆ ರೈಲು ಸಂಚಾರ ಆರಂಭವಾದಾಗ ಜನ ನಿಟ್ಟುಸಿರುಬಿಟ್ಟಿದ್ದರು. ಆದರೆ, ಪ್ರಯಾಣಿಕ-ಸಂದಣಿ ತೀರಾ ಹೆಚ್ಚಿರುವ ಈ ಮಾರ್ಗದಲ್ಲಿ ಒಂದು ರೈಲು ಸಾಕಾಗುವುದಿಲ್ಲ ಎಂಬುದಂತೂ ಎಲ್ಲರಿಗೂ ಗೊತ್ತು.

ಇನ್ನು, 92 ವರ್ಷ ಹಳೆಯ ಅಶೋಕಪುರಂ ರೈಲ್ವೇ ಕಾರ್ಯಾಗಾರದ ಆಧುನೀಕರಣ. 1917ರಲ್ಲಿ ಸ್ಥಾಪನೆಯಾಗಿದ್ದ ಇದಕ್ಕೆ ಎರಡು ವರ್ಷಗಳ ಹಿಂದೆ ಆಡಳಿತಾತ್ಮಕ ಸಮ್ಮತಿ ದೊರಕಿದ್ದರೂ, ಅಷ್ಟೇನೂ ಪ್ರಗತಿ ಸಾಧಿಸಲೇ ಇಲ್ಲ. ಅದರ ಪ್ರಸ್ತಾಪವೆಲ್ಲೂ ರೈಲ್ವೇ ಬಜೆಟಿನಲ್ಲಿ ಕಂಡಿಲ್ಲ.

ಮೈಸೂರು-ಬೆಂಗಳೂರು ನಡುವೆ ಹಳಿ ದ್ವಿಗುಣಗೊಳಿಸುವ ಕಾರ್ಯವು ಕೂಡ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿತ್ತು. ರಾಮನಗರದವರೆಗೆ ಕೆಲಸ ಪೂರ್ಣಗೊಂಡಿದ್ದು ಮೈಸೂರು ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಸಮಸ್ಯೆ ಎದುರಿಸಿದೆ. ಹಳಿ ದ್ವಿಗುಣಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡರೆ, ಸದ್ಯ ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಅಗತ್ಯವಿರುವ 3 ಗಂಟೆಗಳ ಸಮಯವು ಕೇವಲ 90 ನಿಮಿಷಕ್ಕಿಂತ ಕಡಿಮೆ ತೆಗೆದುಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಒಟ್ಟಾರೆಯಾಗಿ ಹೇಳಬಹುದಾದರೆ ಕನ್ನಡ ನಾಡಿಗೆ ಎಂದಿನಂತೆ ಅನ್ಯಾಯವಾಗಿದ್ದೇ ಹೆಚ್ಚು. ಬೆಲೆ ಏರಿಕೆಯಿಲ್ಲದೆ, ಕೆಲವೊಂದು ಹೊಸ ರೈಲುಗಳು ಲಭಿಸಿದ್ದರೂ, ಹಲವು ವರ್ಷಗಳಿಂದ ಆಗಲೇಬೇಕಿದ್ದ, ನೆನೆಗುದಿಗೆ ಬಿದ್ದಿದ್ದ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ಮಾತ್ರ ನಿಜಕ್ಕೂ ರಾಜ್ಯದಿಂದ ಆಯ್ಕೆಯಾಗಿರುವ ನಾಲ್ವರು ಕೇಂದ್ರ ಸಚಿವರ ಹೊಣೆಗಾರಿಕೆಯ ಮೇಲೆ ಕಪ್ಪು ಚುಕ್ಕೆ ಎನ್ನಬಹುದೇ?

ಕೆಲವೊಂದು ಅಸಂಬದ್ಧ ಸಂಗತಿಗಳೂ ಇಲ್ಲಿವೆ. ಬೆಂಗಳೂರು-ಮಂಗಳೂರು ರೈಲನ್ನು ಕಾರವಾರಕ್ಕೆ ವಿಸ್ತರಿಸಿ ಎಂಬುದು ಕನ್ನಡಿಗರ ಒತ್ತಾಸೆ. ಆದರೆ ಅದನ್ನು ಕೇರಳದ ಕಣ್ಣೂರಿಗೆ ವಿಸ್ತರಿಸಿರುವುದು ಕೇರಳದ ಜನತೆಗೆ ಸಹಾಯವಾಗಲು, ನಮಗೇನೂ ಇಲ್ಲ! ಇಲ್ಲಿ ಬಹುಕಾಲದಿಂದ ಕನ್ನಡಿಗರನ್ನು ಕಾಡುತ್ತಲೇ ಇರುವ ಕೇರಳೀಯರ ಮಲಯಾಳಿ ಲಾಬಿಯೇ ಮೇಲುಗೈ ಸಾಧಿಸಿರುವುದು ಎದ್ದುಕಾಣುತ್ತದೆ.

ಇನ್ನೊಂದು, ಸ್ವಾಗತಿಸಲೇಬೇಕಾದ ಅಂಶವೆಂದರೆ ಉತ್ತರ ಕರ್ನಾಟಕವನ್ನು ಮಲೆನಾಡಿನೊಂದಿಗೆ ಬೆಸೆಯುವ ಶಿವಮೊಗ್ಗ-ಹರಿಹರ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ ದೊರೆತದ್ದು. ಇದು ಉತ್ತರ ಕರ್ನಾಟಕವನ್ನು ರಾಜ್ಯದ ಮುಖ್ಯ ಭಾಗದೊಂದಿಗೆ ಬೆಸೆಯುವ ಉತ್ತಮ ಪ್ರಯತ್ನವೂ ಹೌದು. ಅದೇ ರೀತಿ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಕೂಡ ಸ್ವಾಗತಾರ್ಹವೇ. ಯಾಕೆಂದರೆ ಈ ಎರಡೂ ಪ್ರಮುಖ ಪಟ್ಟಣಗಳ ನಡುವೆ ಅತ್ಯಂತ ಪ್ರಯಾಣಿಕ-ಸಂದಣಿ ಇರುತ್ತದೆ.

ಆದರೆ ಹುಬ್ಬಳ್ಳಿ-ಅಂಕೋಲ, ಶಿವಮೊಗ್ಗ-ತಾಳಗುಪ್ಪ, ತಾಳಗುಪ್ಪ-ಅಂಕೋಲ, ಬೆಂಗಳೂರು-ಮೈಸೂರು ಇಂಟರ್‌ಸಿಟಿ ಇತ್ಯಾದಿ ಬೇಡಿಕೆಗಳು ತುರ್ತಾಗಿ ಈಡೇರಬೇಕಿತ್ತು. ಅವುಗಳಿಲ್ಲದಿರುವ, ಇನ್ನೂ ಹಲವಾರು ನೆನೆಗುದಿಗೆ ಬಿದ್ದ ಕಾರ್ಯಗಳ ಉಲ್ಲೇಖವಿಲ್ಲದಿರುವುದು ಒಂದಿಷ್ಟು ಸಿಹಿಯ ಮಧ್ಯೆ ಒಂದಷ್ಟು ಕಹಿ.

ಕನ್ನಡಿಗರ ಬಹುಕಾಲದ ಕನಸುಗಳು ಈಡೇರಲು, ಪೂರ್ಣಗೊಳ್ಳಲು ರಾಜಕೀಯ ಬದ್ಧತೆ ಬೇಕು. ಅಲ್ಲಲ್ಲ, ಬರೀ ಬದ್ಧತೆ ಬೇಕು, ರಾಜಕೀಯ ಇರಬಾರದು ಅಷ್ಟೆ!
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಿಮ್ಮ ಅಭಿಪ್ರಾಯ ಬೇಕಾಗಿದೆ, ದಯವಿಟ್ಟು ಕ್ಲಿಕ್ ಮಾಡಿ
ಮಳೆ ಕ್ಷೀಣ: 'ಕಾವೇರ'ಲಿದೆಯೇ ತ.ನಾಡು-ಕರ್ನಾಟಕ !
ತಂದೆಯರ ದಿನ: ಮಗುವನ್ನು ಪ್ರೀತಿಸುವ ಹಕ್ಕು ನಮಗೂ ಇರಲಿ!
ಅಪ್ಪಂದಿರ ದಿನ: ಅಪ್ಪ ಸೋತು ಸುಸ್ತು!
ಸಿಂಗ್-ಜರ್ದಾರಿ ಭೇಟಿ: ಅಮೆರಿಕ 'ಒತ್ತಡ' ತಂತ್ರದ ಫಲವೇ?
ಕೇಸರಿ ಪಡೆಯ ರಾಜಕೀಯ ಅಂತ್ಯಗೊಂಡಿತಾ?