ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರರ ನಂಟು; ಪಾಪ್ಯುಲರ್ ಫ್ರಂಟ್‌ಗೆ ಕೇರಳ ನಿಷೇಧ? (Kerala | Popular Front | Islamic group | Prophet Mohammed)
Bookmark and Share Feedback Print
 
ಭಯೋತ್ಪಾದಕರೊಂದಿಗಿನ ಸಂಬಂಧ ಮತ್ತು ಉಪನ್ಯಾಸಕನ ಮೇಲೆ ದಾಳಿ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಮೇಲೆ ಕೇರಳ ಸರಕಾರ ನಿಷೇಧ ಹೇರುವ ಸಾಧ್ಯತೆಗಳಿವೆ.

ಉಪನ್ಯಾಸಕನ ಕೈ ಕತ್ತರಿಸಿದ ಪ್ರಕರಣ ಬಹಿರಂಗವಾದ ನಂತರ ಕೇರಳ ಪೊಲೀಸರು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಮನೆಗಳ ಮೇಲೆ ಕಚೇರಿಗಳ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಅವರಿಗೆ ಭಯೋತ್ಪಾದಕ ಸಂಘಟನೆಗಳ ಜತೆ ಸಂಬಂಧವಿರುವುದು ಗಮನಕ್ಕೆ ಬಂದಿದೆ.

ನಿನ್ನೆಯಷ್ಟೇ ಕಣ್ಣೂರಿನಲ್ಲಿನ ಸಂಘಟನೆಯ ಕಚೇರಿಗೆ ಪೊಲೀಸರು ದಾಳಿ ನಡೆಸಿದ ವೇಳೆ ದೇಶೀ ನಿರ್ಮಿತ ಬಾಂಬುಗಳು, ಖಡ್ಕಗಳು, ಚೂರಿಗಳು ಮತ್ತು ಪ್ರಚೋದನಾಕಾರಿ ಬರಹಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾಪ್ಯುಲರ್ ಫ್ರಂಟ್ ಸೇರಿದಂತೆ ಹಲವು ಮೂಲಭೂತವಾದಿ ಸಂಘಟನೆಗಳು ಕೇರಳದಲ್ಲಿ ಸಕ್ರಿಯವಾಗುತ್ತಿರುವುದು ಇತ್ತೀಚಿನ ವರದಿಗಳಲ್ಲಿ ಬಹಿರಂಗವಾದ ನಂತರ ಉಪನ್ಯಾಸಕನ ಕೈ ಕತ್ತರಿಸಿದ ಪ್ರಕರಣ ದೇವರ ನಾಡು ಎಂಬ ಖ್ಯಾತಿಯ ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತಿರುವುದನ್ನು ಮನಗಂಡಿರುವ ಮುಖ್ಯಮಂತ್ರಿ ವಿ.ಎಸ್. ಅಚ್ಯುತ್ತಾನಂದನ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಂತಹ ಸಂಘಟನೆಗಳ ಮೇಲೆ ನಿಷೇಧ ಹೇರುವ ಕುರಿತು ಮಾತುಕತೆ ನಡೆಸಲಾಗಿದೆ.

ಪ್ರವಾದಿ ಮಹಮ್ಮದ್ ಅವರ ಕುರಿತು ಪ್ರಶ್ನೆ ಪತ್ರಿಕೆ ತಯಾರಿಸಿದಾಗ ಅಪಮಾನಕಾರಿ ಶಬ್ದಗಳನ್ನು ಬಳಸಿದ್ದಾರೆ ಎಂದು ಹೇಳಲಾದ ಉಪನ್ಯಾಸಕನ ಕೈ ಕತ್ತರಿಸಿದ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಬ್ಬರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಯೋತ್ಪಾದನಾ ನಿಗ್ರಹ ದಳವನ್ನು ಸ್ಥಾಪಿಸುವ ಯೋಜನೆಯೂ ಸರಕಾರದ್ದು ಎಂದು ಹೇಳಲಾಗಿದೆ.

ಬಳಿಕ ರಾಜ್ಯ ಪೊಲೀಸರು ಮತ್ತು ತನಿಖಾ ದಳಗಳು ಪಾಪ್ಯುಲರ್ ಫ್ರಂಟ್‌ ಚಟುವಟಿಕೆ ಮತ್ತು ಅದರ ಆರ್ಥಿಕ ಮೂಲಗಳನ್ನು ಕೆದಕಿದ್ದು, ಸಂಘಟನೆ ವಿದೇಶದ ಭಯೋತ್ಪಾದನಾ ಸಂಘಟನೆಗಳ ಜತೆ ಸಂಬಂಧ ಹೊಂದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದಾಖಲೆಗಳು ದೊರೆತಿವೆ ಎಂದು ಹೇಳಲಾಗುತ್ತಿದೆ.

ಕಳೆದ ವಾರವಷ್ಟೇ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತನ ಕಾರೊಂದರಲ್ಲಿ ತಾಲಿಬಾನ್ ಕುಕೃತ್ಯಗಳ ಸಿಡಿ ದೊರೆತಿತ್ತು. ತಾಲಿಬಾನ್ ಮತ್ತು ಅಲ್‌ಖೈದಾಗಳು ತಾವು ಸೆರೆ ಹಿಡಿದವರನ್ನು ಯಾವ ರೀತಿ ಕೊಂದು ಹಾಕುತ್ತವೆ ಎಂಬ ವೀಡಿಯೋ ತುಣುಕುಗಳು ಅದರಲ್ಲಿವೆ ಎಂದು ಪೊಲೀಸರು ಹೇಳಿದ್ದರು.

ಈ ನಡುವೆ ಉಪನ್ಯಾಸಕರ ಜೋಸೆಫ್ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸಬೇಕು ಎಂದು ಆಗ್ರಹಿಸಿರುವ ಬಿಜೆಪಿ, ಪಾಪ್ಯುಲರ್ ಫ್ರಂಟ್ ಮೇಲೆ ನಿಷೇಧ ಹೇರಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಸಂಬಂಧಪಟ್ಟ ಸುದ್ದಿಗಳು:
** ಕೇರಳದಲ್ಲೂ ತಾಲಿಬಾನ್ ಭಯೋತ್ಪಾದನಾ ಜಾಲ?
** ಉಪನ್ಯಾಸಕನ ಕೈ ಕತ್ತರಿಸಿದ್ದು ಪೂರ್ವನಿಯೋಜಿತ ಕೃತ್ಯ
** ಪ್ರವಾದಿ ಪ್ರಶ್ನೆ ಕೇಳಿದ್ದಕ್ಕೆ ಕೈ ಕತ್ತರಿಸಿದ ಮತಾಂಧರು
ಸಂಬಂಧಿತ ಮಾಹಿತಿ ಹುಡುಕಿ