ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲೇ ನಿರ್ಮಿಸಬೇಕೇ ಹೊರತು ಇನ್ಯಾವುದೇ ಕಡೆಯಲ್ಲಲ್ಲ ಎಂದು ಸ್ಪಷ್ಟಪಡಿಸಿರುವ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ, ಮುಂದಿನ ತಿಂಗಳಿನಿಂದ ಸಂಘಟನೆಯು ಚಳವಳಿಗೆ ಚಾಲನೆ ನೀಡುತ್ತಿದೆ ಎಂದು ಘೋಷಿಸಿದ್ದಾರೆ.
ರಾಮ ಮಂದಿರ ಚಳವಳಿಯು ಶೀಘ್ರದಲ್ಲೇ ಆರಂಭವಾಗಲಿದ್ದು, ಅಂತಿಮ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ನಾಲ್ಕು ತಿಂಗಳುಗಳ ಕಾಲ ನಡೆಯಲಿರುವ ಈ 'ಜಾಗರಣಾ ಯಾತ್ರೆ'ಯು ಆಗಸ್ಟ್ 17ರಂದು ಚಾಲನೆ ಪಡೆದುಕೊಳ್ಳಲಿದೆ. ಆ ಮೂಲಕ ರಾಮ ಮಂದಿರ ನಿರ್ಮಾಣ ಚಳವಳಿಗೆ ಹಿಂದೂಗಳನ್ನು ಸನ್ನದ್ಧಗೊಳಿಸಲಾಗುತ್ತದೆ ಎಂದು ತೊಗಾಡಿಯಾ ತಿಳಿಸಿದ್ದಾರೆ.
1990-92ರಲ್ಲಿ ರಾಮ ಮಂದಿರ ಚಳವಳಿಗಾಗಿ ನಡೆದ ಹೋರಾಟಗಳ ರೀತಿಯ ಹೋರಾಟದ ವಾತಾವರಣ ಮರು ನಿರ್ಮಾಣವಾಗಬೇಕೆಂದು ವಿಶ್ವ ಹಿಂದೂ ಪರಿಷತ್ ಬಯಸುತ್ತದೆ ಎಂದೂ ಈ 'ಬೆಂಕಿ ಚೆಂಡು' ಖ್ಯಾತಿಯ ನಾಯಕ ಹೇಳಿಕೊಂಡಿದ್ದಾರೆ.
ಹರ್ಯಾಣದ ಅಂಬಾಲಾ ಸಮೀಪದ ತಪೇಲಾ ಎಂಬಲ್ಲಿನ ನಂದಲಾಲ್ ಗೀತಾ ವಿದ್ಯಾಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ತರಬೇತಿ ಶಿಬಿರದಲ್ಲಿ ಮಾತನಾಡುತ್ತಿದ್ದ ಅವರು ಇದನ್ನು ಪ್ರಕಟಿಸಿದ್ದಾರೆ.
ಈ ಶಿಬಿರದಲ್ಲಿ ಜಮ್ಮು, ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ದೆಹಲಿಗಳಲ್ಲಿನ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಅದೇ ಹೊತ್ತಿಗೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಹಿಂದೂಗಳ ಆತ್ಮಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ವೈಷ್ಣೋದೇವಿ ಮತ್ತು ಅಮರನಾಥ ಯಾತ್ರೆಗಳಿಗೆ ಹೋಗುವ ಹಿಂದೂಗಳ ಮೇಲೆ ತೆರಿಗೆ ವಿಧಿಸುತ್ತಿರುವ ಜಮ್ಮು-ಕಾಶ್ಮೀರ ಸರಕಾರದ ಮೇಲೂ ಕಿಡಿ ಕಾರಿರುವ ತೊಗಾಡಿಯಾ, ಇದನ್ನೆಲ್ಲ ಕಂಡು ಹಿಂದೂಗಳು ಮೌನವಾಗಿ ಕುಳಿತಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.