ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮಾನತು ಅವಮಾನ; ಎಲ್‌ಜೆಪಿ ಶಾಸಕರಿಂದ ರಾಜೀನಾಮೆ (Bihar assembly | Lok Janashakti Party | Udaya Narain Chowdhary | JDU)
Bookmark and Share Feedback Print
 
ಬಿಹಾರ ವಿಧಾನಸಭೆಯಲ್ಲಿ ಚಪ್ಪಲಿ ತೂರಿ ದಾಂಧಲೆ ಎಬ್ಬಿಸಿ ಅಸಂಸದೀಯ ವರ್ತನೆ ತೋರಿಸಿದ ಕಾರಣಕ್ಕಾಗಿ ಸ್ಪೀಕರ್ ಅವರಿಂದ ಅಮಾನತುಗೊಂಡಿರುವ ಲೋಕ ಜನಶಕ್ತಿ ಪಕ್ಷದ ಎಲ್ಲಾ 12 ಶಾಸಕರು, ತಮಗೆ ಅವಮಾನವಾಗಿದೆ ಎಂದು ರಾಜೀನಾಮೆ ಸಲ್ಲಿಸಿದ್ದಾರೆ.

ಕಳೆದೆರಡು ದಿನಗಳಲ್ಲಿ ಮೇಜು-ಕುರ್ಚಿಗಳನ್ನು ಎತ್ತಿ ಹಾಕುತ್ತಾ, ಹೂಕುಂಡವನ್ನು ಎಸೆಯುತ್ತಾ, ಸ್ಪೀಕರ್ ಮೇಲೆ ಚಪ್ಪಲಿಯನ್ನೂ ತೂರಿ ತಾವು ಜನಪ್ರತಿನಿಧಿಗಳು ಎಂಬುದನ್ನೂ ಮರೆತಿದ್ದ ಶಾಸಕರು ಇದೀಗ ತಮಗೆ ಅವಮಾನವಾಗಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ತಾವು ಶಾಸಕರಾಗಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ರಾಜೀನಾಮೆಗೆ ಕಾರಣ ನೀಡಿದ್ದಾರೆ!

ರಾಜ್ಯ ವಿಧಾನಸಭೆಯ ಕಲಾಪದ ಮುಂದಿನ ಅವಧಿಯಿಂದ ಸ್ಪೀಕರ್ ಉದಯ ನಾರಾಯಣ ಚೌಧರಿಯವರು ಶಾಸಕರನ್ನು ಅಮಾನತುಗೊಳಿಸಿರುವ ಕ್ರಮವನ್ನು ಪ್ರತಿಭಟಿಸಿ ಅಮಾನತುಗೊಂಡಿರುವ ಎಲ್‌ಜೆಪಿಯ ಎಲ್ಲಾ 12 ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಮತ್ತು ರಾಜ್ಯಾಧ್ಯಕ್ಷ ಪಶುಪತಿ ಕುಮಾರ್ ಪರಸ್ ಅವರಿಗೆ ಸಲ್ಲಿಸಿದ್ದಾರೆ ಎಂದು ಎಲ್‌ಜೆಪಿ ವಕ್ತಾರ ಕೇಶವ್ ಸಿಂಗ್ ತಿಳಿಸಿದ್ದಾರೆ.

ಕಳೆದ ರಾತ್ರಿ ನಡೆದ ರಾಜ್ಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ತಮ್ಮ ರಾಜೀನಾಮೆಗಳನ್ನು ನೀಡಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವಂತೆ ಪಕ್ಷದ ನಾಯಕತ್ವವನ್ನು ಮನವಿ ಮಾಡಿಕೊಂಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ತಮ್ಮನ್ನು ಸದನದಿಂದ ಸ್ಪೀಕರ್ ಅಮಾನತುಗೊಳಿಸಿ ಅವಮಾನಗೊಳಿಸಿರುವುದರಿಂದ ತಾವು ಶಾಸಕರಾಗಿ ರಾಜ್ಯ ವಿಧಾನಸಭೆಯಲ್ಲಿರುವುದು ಅರ್ಥಹೀನವೆಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ. ಇದು ಸದನದ ಸದಸ್ಯರ ಘನತೆಗೂ ಕಳಂಕ ತಂದಂದಾಗಿದೆ ಎಂದು ವಿವರಿಸಿದರು.

ಮಂಗಳವಾರ ಮತ್ತು ಬುಧವಾರ ಬಿಹಾರ ವಿಧಾನಸಭೆಯಲ್ಲಿ ಅಸಂಸದೀಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಎಲ್‌ಜೆಪಿಯ 12 ಶಾಸಕರಲ್ಲಿ 11 ಮಂದಿಯನ್ನು ಸ್ಪೀಕರ್ ಅಮಾನತುಗೊಳಿಸಿದ್ದರು.

ಮಳೆಗಾಲದ ಅಧಿವೇಶನದ ಮುಂದಿನ ಅವಧಿಯಲ್ಲಿ 67 ಶಾಸಕರು ಭಾಗವಹಿಸುವಂತಿಲ್ಲ ಎಂದು ಅಮಾನತುಗೊಳಿಸಿ ಸ್ಪೀಕರ್ ಆದೇಶ ನೀಡಿದ್ದರು. ಈಗ ಎಲ್‌ಜೆಪಿ ಮಾತ್ರ ಪ್ರತಿಭಟನಾರ್ಥವಾಗಿ ಈ ಕ್ರಮಕ್ಕೆ ಮುಂದಾಗಿದೆ. ಇತರ ಪಕ್ಷಗಳ ಶಾಸಕರು ಯಾವುದೇ ಅಂತಿಮ ತೀರ್ಮಾನಕ್ಕೆ ಇನ್ನೂ ಬಂದಿಲ್ಲ.

ಸಂಬಂಧಪಟ್ಟ ಸುದ್ದಿಗಳಿವು:
** ಬಿಹಾರ ಸ್ಪೀಕರ್‌ಗೆ ಚಪ್ಪಲಿ ಎಸೆದ ಪ್ರತಿಪಕ್ಷ ಶಾಸಕರು
** ಬಿಹಾರ ವಿಧಾನಸಭೆಯಲ್ಲಿ ಶಾಸಕರ ಘನಘೋರ ಕಾಳಗ!
ಸಂಬಂಧಿತ ಮಾಹಿತಿ ಹುಡುಕಿ