ಒಂದು ಕಡೆ ಸೀರೆಯ ಬದಲು ಚೂಡಿದಾರದಲ್ಲಿ ಪಾಠ ಮಾಡಿದ ಶಿಕ್ಷಕಿ ಮತ್ತು ಮತ್ತೊಂದು ಕಡೆ ಬುರ್ಖಾ ಧರಿಸದ ಯುವತಿ -- ಇಬ್ಬರಿಗೂ ಒಂದಿಲ್ಲೊಂದು ರೀತಿಯ ಮಾನಸಿಕ ಹಿಂಸೆ. ಸಮಾಜ ಗೌರವ ಭಾವನೆಯಿಂದ ನೋಡುವ ಯಾವುದೇ ದಿರಿಸನ್ನಾದರೂ ಸ್ತ್ರೀಯೊಬ್ಬಳು ತೊಡುವ ಕನಿಷ್ಠ ಸ್ವಾತಂತ್ರ್ಯವೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಲ್ಲವೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳಲು ಇಂತಹ ಪ್ರಕರಣಗಳು ಸಾಕಲ್ಲವೇ?
ಮೊದಲ ಪ್ರಕರಣ ನಡೆದಿರುವುದು ಪಶ್ಚಿಮ ಬಂಗಾಲದಲ್ಲಿ. ಶಿಕ್ಷಕಿಯೊಬ್ಬಳು ಸೀರೆಯ ಬದಲು ಸಲ್ವಾರ್ ಕಮೀಜ್ ತೊಟ್ಟು ಪಾಠ ಮಾಡಿದ್ದಕ್ಕೆ ಆಕೆಯ ಸಹೋದ್ಯೋಗಿಯೊಬ್ಬರು ಕಪಾಳಕ್ಕೆ ಬಾರಿಸಿದ್ದಾರೆ. ಮತ್ತೊಂದು ಪ್ರಕರಣ ಕಾಸರಗೋಡಿನಲ್ಲಿ ನಡೆದಿರುವುದು. ಬುರ್ಖಾ ಧರಿಸುತ್ತಿಲ್ಲ ಎಂಬ ಕಾರಣಕ್ಕೆ ಆಕೆಗೆ ಜೀವ ಬೆದರಿಕೆ ಹಾಕಲಾಗುತ್ತಿದೆ.
ಸಂಪ್ರದಾಯ ಮುರಿದಳು... ಸಾಮಾನ್ಯವಾಗಿ ಶಿಕ್ಷಕಿಯರು ಸೀರೆಯಲ್ಲೇ ಶಾಲೆಗಳಿಗೆ ಬರುತ್ತಿರುವುದು ಸಂಪ್ರದಾಯ-ರೂಢಿ. ಆದರೆ ಅದನ್ನು ಮುರಿಯಲೆತ್ನಿಸಿದ ಶಿಕ್ಷಕಿಯರಲ್ಲೊಬ್ಬರಿಗೆ ನೀತಿಯ ಪಾಠ ಹೇಳುವ ಬದಲು ಹೊಡೆ-ಬಡಿ ಕಾರ್ಯಕ್ಕೆ ಮುಂದಾಗಿರುವ ಪ್ರಕರಣವಿದು.
ಹೌರಾದಲ್ಲಿನ ಶ್ಯಾಮ್‌ಪುರ್ ಗ್ರಾಮದಲ್ಲಿನ ಐಮಾ ಗಜಾಂಕೋಲ್ ಹೈಸ್ಕೂಲಿನ ಏಳು ಸಹೋದ್ಯೋಗಿಗಳಲ್ಲಿ ನಾಲ್ವರು ಚೂಡಿದಾರದಲ್ಲಿ ಶಾಲೆಗೆ ಬರುತ್ತಿರುವುದನ್ನು ಹಲವು ಪುರುಷ ಶಿಕ್ಷಕರು ಆಕ್ಷೇಪಿಸಿದ್ದರು.
ಶಿಕ್ಷಕಿಯರು ತೀವ್ರ ಪ್ರತಿರೋಧ ಒಡ್ಡಿದ ಕಾರಣ ಶಾಲೆಯ ಮುಖ್ಯೋಪಾಧ್ಯಾಯ ಶ್ಯಾಮ್‌ಸುಂದರ್ ದಾಸ್ ಸಭೆಯೊಂದನ್ನು ಕರೆದಿದ್ದರು. ಈ ಸಂದರ್ಭದಲ್ಲಿ ವಾದ-ವಿವಾದಗಳು ತಾರಕಕ್ಕೇರಿ ಗಣೇಶ್ ಮಂಡಲ್ ಎಂಬ ಶಿಕ್ಷಕನೋರ್ವ ಪಾಪ್ರಿ ದೇವ್ ಎಂಬ ಶಿಕ್ಷಕಿಯ ಕಪಾಳಕ್ಕೆ ಬಾರಿಸಿದ್ದ.
ಮುಖ್ಯೋಪಾಧ್ಯಾಯರು ದೇವ್‌ಳನ್ನು ಒಪ್ಪಿಸಲು ಯತ್ನಿಸುತ್ತಿದ್ದರು. ನೀವು ಸೀರೆಯ ಬದಲು ಚೂಡಿದಾರ ಧರಿಸಿಕೊಂಡು, ಕತ್ತಲ್ಲಿ ಮೊಬೈಲ್ ಫೋನುಗಳನ್ನು ನೇತು ಹಾಕಿಕೊಂಡು ಶಾಲೆಗೆ ಬಂದರೆ ಮಕ್ಕಳ ಹೆತ್ತವರು ಮತ್ತು ಇತರ ಮಹಿಳಾ ಶಿಕ್ಷಕಿಯರು ವಿರೋಧಿಸಬಹುದು ಎಂದು ಸಲಹೆ ನೀಡುತ್ತಿದ್ದರು.
ಅಷ್ಟರಲ್ಲಿ ಮೇಲೇರಿ ಬಂದ ಗಣೇಶ್, ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಶಾಲೆಯಲ್ಲಿ ಯಾವುದೇ ರೀತಿಯ ವಸ್ತ್ರಸಂಹಿತೆ ಜಾರಿಯಲ್ಲಿಲ್ಲ ಎಂದು ವರದಿಗಳು ಹೇಳಿವೆ.
ಘಟನೆ ನಡೆಯುತ್ತಿದ್ದಂತೆ ಗಣೇಶ್ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಅಪಮಾನಗೊಳಿಸಿದ್ದಕ್ಕಾಗಿ ಎಫ್ಐಆರ್ ದಾಖಲಿಸಲಾಗಿದೆ.
ಈ ನಡುವೆ ಸೀರೆ ಉಡಲು ನಿರಾಕರಿಸಿರುವ ನಾಲ್ವರು ಶಿಕ್ಷಕಿಯರ ತರಗತಿಗಳನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ವಿದ್ಯಾರ್ಥಿಗಳು ಬಂದಿದ್ದರಾದರೂ, ಮುಖ್ಯೋಪಾಧ್ಯಾಯರು ಮಧ್ಯಪ್ರವೇಶ ಮಾಡಿರುವುದರಿಂದ ಅದು ರದ್ದಾಗಿದೆ.
ಇತ್ತೀಚೆಗಷ್ಟೇ ಶಿರಿನ್ ಮಿದ್ಯಾ ಎಂಬ ಮುಸ್ಲಿಂ ಶಿಕ್ಷಕಿಯನ್ನು ಬುರ್ಖಾರಹಿತವಾಗಿ ತರಗತಿ ಪ್ರವೇಶ ಮಾಡಬಾರದು ಎಂದು ವಿದ್ಯಾರ್ಥಿಗಳು ಫರ್ಮಾನು ಹೊರಡಿಸಿದ ಪ್ರಕರಣದ ನಂತರ ಇದು ಬೆಳಕಿಗೆ ಬಂದಿದ್ದು, ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಆಕೆಗೆ ಬುರ್ಖಾ ಬೆದರಿಕೆ.... ಕಾಸರಗೋಡಿನ ರಿಯಾನಾ ಆರ್. ಕಾಜಿ ಎಂಬ 22ರ ಹರೆಯದ ಯುವತಿಯ ದೂರಿದು. ಬುರ್ಖಾ ಮತ್ತು ಮುಖಪರದೆ ಧರಿಸಲು ಒಲ್ಲೆ ಎಂದ ಯುವತಿಗೆ ಕೊಲೆ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಪ್ರವೇಶಿಸಿದ್ದ ಯುವತಿಗೆ ಭದ್ರತೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ರಿಯಾನಾ, ಆಕೆಯ ಹೆತ್ತವರು ಮತ್ತು ಒಡಹುಟ್ಟಿದವರಿಗೂ ಪೊಲೀಸ್ ಭದ್ರತೆ ನೀಡಬೇಕು. ಈ ಆದೇಶ ಮೂರು ವಾರಗಳ ಕಾಲ ಜಾರಿಯಲ್ಲಿರುತ್ತದೆ ಎಂದು ಕಾಸರಗೋಡಿನ ಸಬ್‌ಇನ್ಸ್‌ಪೆಕ್ಟರ್, ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಹೈಕೋರ್ಟ್ ವಿಭಾಗೀಯ ಪೀಠವು ಆದೇಶ ನೀಡಿದೆ.
ಚೆನ್ನೈಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಊರಿಗೆ ಮರಳಿದ ನಂತರ ಬುರ್ಖಾ ಧರಿಸಬೇಕು ಎಂದು ನೆರೆ ಮನೆಯವರು ಮತ್ತು ದೂರದ ಸಂಬಂಧಿಗಳು ಬಲವಂತ ಮಾಡುತ್ತಿದ್ದಾರೆ. ಇದು ನನ್ನ ಇಚ್ಛೆಗೆ ಬಿಟ್ಟದ್ದು ಎಂಬುದಕ್ಕೂ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಸಂಘಟನೆಗೆ ಸೇರಿದ ಕೆಲವು ವ್ಯಕ್ತಿಗಳು ದೂರವಾಣಿ ಮೂಲಕ ಕೊಲೆ ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ಯುವತಿ ಕೋರ್ಟಿಗೆ ತಿಳಿಸಿದ್ದಾಳೆ.
ಧರ್ಮದ ಹೆಸರಿನಲ್ಲಿ ನನ್ನ ಖಾಸಗಿ ಜೀವನಕ್ಕೆ ಅಕ್ರಮವಾಗಿ ನಿರ್ಬಂಧ ಹೇರಲು ಯತ್ನಿಸುತ್ತಿರುವ ಪ್ರಕರಣವನ್ನು ತಡೆಗಟ್ಟಲು ಸಾಧ್ಯವಾಗದೇ ಇದ್ದರೆ ಇದು ನನ್ನ ವೈಯಕ್ತಿಕ ಸ್ವಾತಂತ್ರ್ಯದ ಹರಣವಾದಂತಾಗುತ್ತದೆ ಎಂದು ರಿಯಾನಾ ನ್ಯಾಯಾಲಯದಲ್ಲಿ ವಾದಿಸಿದ್ದಳು.