ಗಂಡ ಷಂಡ ಎಂದು ಹೇಳಿ ಪತ್ನಿಯೇನೋ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಪಡೆದುಕೊಂಡಿದ್ದಾಳೆ. ಆದರೆ ತಾನು ಷಂಡನಲ್ಲ, ಪರಿಪೂರ್ಣ ಗಂಡಸು; ಮಾಜಿ ಪತ್ನಿ ಹೇಳಿದ್ದು ನಿಜವಲ್ಲ ಎಂದು ನಿರೂಪಿಸಲು ಆಕೆಯ ಮಾಜಿ ಗಂಡ ಗುಜರಾತ್ ಹೈಕೋರ್ಟ್‌ನಲ್ಲಿ ಲಾಗ ಹಾಕುತ್ತಿದ್ದಾರೆ.
ತನ್ನ ಗಂಡ ರಾಜೇಂದ್ರ ಮದುವೆಯ ಪರಿಪೂರ್ಣತೆಯನ್ನು ನೆರವೇರಿಸಿಲ್ಲ ಎಂಬ ಆಧಾರದಲ್ಲಿ ಪತ್ನಿ ರಮೀಲಾ ಪಟೇಲ್ ಕೌಟುಂಬಿಕ ನ್ಯಾಯಾಲಯವೊಂದರಿಂದ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಳು. ನನಗೆ ಕಿರುಕುಳ ನೀಡಲಾಗಿತ್ತು, ಅಲ್ಲದೆ ಗಂಡನ ಹಣಕಾಸು ಅವ್ಯವಹಾರವೊಂದರಲ್ಲೂ ತನ್ನನ್ನು ಬಲಿಪಶು ಮಾಡಲಾಗಿತ್ತು ಎಂದು ರಮೀಲಾ ವಾದಿಸಿದ್ದಳು.
ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ರಾಜೇಂದ್ರ, ಸಂಬಂಧಪಟ್ಟ ಪ್ರಯೋಗಾಲಯಗಳ ವೈದ್ಯಕೀಯ ವರದಿಗಳನ್ನು ನೀಡಿದ್ದಾನೆ. ತಾನು ಷಂಡ ಅಥವಾ ದಾಂಪತ್ಯದಲ್ಲಿ ನಿರ್ವಹಿಸಬೇಕಾದ ಪಾತ್ರವನ್ನು ನಿರ್ವಹಿಸಿಲ್ಲ ಎಂಬ ರಮೀಲಾ ವಾದದಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತು ನಿರ್ಣಾಯಕ ಸಾಕ್ಷ್ಯಗಳಿಲ್ಲ ಎಂದು ವಾದಿಸಿದ್ದಾನೆ.
ಆದರೂ ಗೃಹಹಿಂಸೆ ಆಧಾರದಲ್ಲಿ ಮದುವೆಯನ್ನು ರದ್ದುಗೊಳಿಸಿರುವ ಕೌಟುಂಬಿಕ ನ್ಯಾಯಾಲಯದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿ ಕಳೆದ ವಾರವಷ್ಟೇ ತೀರ್ಪು ನೀಡಿದೆ.
2000ನೇ ಇಸವಿಯಲ್ಲಿ ರಾಜೇಂದ್ರ ಮತ್ತು ರಮೀಲಾ ಮದುವೆಯಾಗಿದ್ದರು. ರಾಜೇಂದ್ರ ಅಹಮದಾಬಾದ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಹಾಗೂ ರಮೀಲಾ ಅಕೌಂಟ್ಸ್ ಆಫೀಸರ್ ಆಗಿ ದೂರವಾಣಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
2003ರಲ್ಲಿ ರಮೀಲಾ ತನಗೆ ವಿಚ್ಛೇದನ ಬೇಕೆಂದು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಳು. ಗಂಡನಿಂದ ದೈಹಿಕ ಆಕಾಂಕ್ಷೆಗಳು ಪೂರೈಕೆಯಾಗುತ್ತಿಲ್ಲ, ಆತ ಮದುವೆಯನ್ನು ಪೂರ್ತಿಗೊಳಿಸಿಲ್ಲ, ಷಂಡನಾಗಿದ್ದಾನೆ. ಇದರಿಂದ ನಾನು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಆರೋಪಿಸಿ ಮದುವೆ ರದ್ದುಗೊಳಿಸುವಂತೆ ಮನವಿ ಮಾಡಿದ್ದಳು.
2009ರಲ್ಲಿ ಕೌಟುಂಬಿಕ ನ್ಯಾಯಾಲಯವು ರಮೀಲಾಳ ಅರ್ಜಿಯನ್ನು ಪುರಸ್ಕರಿಸಿ, ಗಂಡ ಷಂಡ ಮತ್ತು ಕ್ರೂರಿ ಎಂಬ ಆಧಾರದಲ್ಲಿ ವಿಚ್ಛೇದನ ನೀಡಿತ್ತು.
ಗಂಡ ರಾಜೇಂದ್ರನ ವೀರ್ಯವನ್ನು ಪರೀಕ್ಷೆ ನಡೆಸಿದ್ದ ವೈದ್ಯಕೀಯ ವರದಿಯನ್ನು ಆಧರಿಸಿ ತೀರ್ಪು ನೀಡಲಾಗಿತ್ತು. ವರದಿ ಪ್ರಕಾರ ರಾಜೇಂದ್ರನ ವೀರ್ಯದಲ್ಲಿ ಫಲವತ್ತತೆ ಪ್ರಮಾಣ ಕಡಿಮೆಯಿತ್ತು. ಇದೇ ಕಾರಣದಿಂದ ಆತ ಮದುವೆಯನ್ನು ಪೂರ್ಣಗೊಳಿಸಲು ಶಕ್ತನಲ್ಲ ಎಂದು ವೈದ್ಯಕೀಯ ವರದಿ ಹೇಳಿತ್ತು.
ಈ ಬಗ್ಗೆ ಹೈಕೋರ್ಟ್‌ನಲ್ಲಿ ವಿವರಣೆ ನೀಡಿರುವ ರಾಜೇಂದ್ರ, ತಾನು ಇನ್ನೊಂದು ಪ್ರಯೋಗಾಲಯದಲ್ಲಿ ತನ್ನ ವೀರ್ಯವನ್ನು ಪರೀಕ್ಷೆಗೊಳಪಡಿಸಿದ್ದೇನೆ. ವೀರ್ಯವು ಫಲವತ್ತತೆಯನ್ನು ಹೊಂದಿದೆ ಎಂದು ಹೇಳಿತ್ತು. ಆ ವೈದ್ಯಕೀಯ ವರದಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ನೀಡಿದ್ದರೂ, ಅದನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ ಎಂದಿದ್ದಾನೆ.
ಅಲ್ಲದೆ ಕೌಟುಂಬಿಕ ನ್ಯಾಯಾಲಯದಲ್ಲಿ ಹೇಳಿರುವಂತೆ ವೀರ್ಯ ಫಲವತ್ತತೆ ಕಡಿಮೆಯಿದೆ ಎಂಬುದರ ಅರ್ಥ ಆತ ಷಂಡ ಅಥವಾ ಮದುವೆಯನ್ನು ಪೂರ್ಣಗೊಳಿಸಲು ಅಸಮರ್ಥ ಎಂದಲ್ಲ ಎಂದು ರಾಜೇಂದ್ರನ ವಕೀಲರೂ ವಾದಿಸಿದ್ದಾರೆ.
ವಾದ-ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಮತ್ತು ಅಭಿಲಾಷಾ ಕುಮಾರಿ ಅವರನ್ನೊಳಗೊಂಡ ಹೈಕೋರ್ಟ್ ಪೀಠವು, ನಿರ್ಣಾಯಕ ಪುರಾವೆಗಳ ಕೊರತೆಯಿಂದಾಗಿ ಗಂಡ ಷಂಡ ಮತ್ತು ಹೆಂಡತಿ ಹೇಳಿರುವಂತೆ ಮದುವೆಯ ಕರ್ತವ್ಯವನ್ನು ನಿರ್ವಹಿಸಿಲ್ಲ ಎಂದು ಹೇಳುವುದು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.