ಕೊಟ್ಟಿರುವ 24 ಕೋಟಿ ರೂಪಾಯಿ ನೆರೆ ಪರಿಹಾರವನ್ನು ಸ್ವೀಕರಿಸಲು ಪಾಕಿಸ್ತಾನ ಇನ್ನೂ ಮೀನಾ-ಮೇಷ ಎನಿಸುತ್ತಿರುವಾಗಲೇ ಭಾರತ ಮತ್ತೆ ಸುಮಾರು 94 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಪ್ರಕಟಿಸಿದೆ.
ಭಾರತವು ಈ ಹಿಂದೆ ನೀಡಿದ ಐದು ಮಿಲಿಯನ್ ಡಾಲರ್ (23.4 ಕೋಟಿ ರೂ.) ಪರಿಹಾರವನ್ನು ಪಾಕಿಸ್ತಾನವು ವಿಶ್ವಸಂಸ್ಥೆಯ ಮೂಲಕ ಸ್ವೀಕರಿಸಲು ಸಿದ್ಧವಾಗಿದೆ ಎಂಬ ವರದಿಗಳು ಬಂದ ನಂತರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಲೋಕಸಭೆಯಲ್ಲಿ ಹೆಚ್ಚುವರಿ ಪರಿಹಾರವನ್ನು ಪ್ರಕಟಿಸಿದ್ದಾರೆ.
ಪ್ರಾಕೃತಿಕ ವಿಕೋಪದಿಂದ ಪಾಕಿಸ್ತಾನದ ಜನತೆ ಭಾರೀ ಸಂಕಷ್ಟಕ್ಕೀಡಾಗಿದ್ದು, ಅವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರ ಈಗಾಗಲೇ ಐದು ಮಿಲಿಯನ್ ಡಾಲರ್ ಘೋಷಿಸಿದೆ. ಅದನ್ನೀಗ 25 ಮಿಲಿಯನ್ ಡಾಲರುಗಳಿಗೆ (117 ಕೋಟಿ ರೂಪಾಯಿ) ಹೆಚ್ಚಳ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ ಒಟ್ಟು ಪರಿಹಾರದ ಮೊತ್ತದಲ್ಲಿ 20 ಮಿಲಿಯನ್ ಡಾಲರುಗಳನ್ನು ವಿಶ್ವಸಂಸ್ಥೆಯ ತುರ್ತು ಪರಿಹಾರ ನಿಧಿಗೆ ಜಮಾ ಮಾಡಲಾಗುತ್ತದೆ. ಐದು ಮಿಲಿಯನ್ ಡಾಲರುಗಳನ್ನು ಪಾಕಿಸ್ತಾನಕ್ಕಾಗಿನ ವಿಶ್ವ ಆಹಾರ ಕಾರ್ಯಕ್ರಮಕ್ಕಾಗಿ ನೀಡಲಾಗುತ್ತದೆ. ಒಟ್ಟಾರೆ 25 ಮಿಲಿಯನ್ ಡಾಲರುಗಳು ಪಾಕ್ ನೆರೆ ಸಂತ್ರಸ್ತರಿಗೆ ಸಂದಾಯವಾಗಲಿದೆ ಎಂದು ಲೋಕಸಭೆಗೆ ವಿವರಣೆ ನೀಡಿದರು.
ಕಳೆದ 80 ವರ್ಷಗಳಲ್ಲಿ ಕಂಡು-ಕೇಳಿರದ ಭಾರೀ ನೆರೆ ಕಾಣಿಸಿಕೊಂಡಿರುವ ಪಕ್ಕದ ರಾಷ್ಟ್ರಕ್ಕೆ ಹೆಚ್ಚಿನ ಸಹಕಾರ ನೀಡಲು ಸಿದ್ಧ ಎಂದು ಆಗಸ್ಟ್ 19ರಂದು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಆರಂಭದಲ್ಲಿ ಪಾಕಿಸ್ತಾನವು ಭಾರತದ ಪರಿಹಾರ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿತ್ತು. ಆದರೆ ಅಮೆರಿಕಾದಿಂದ ಒತ್ತಡ ಬಂದ ನಂತರ ತಾನು ಸ್ವೀಕರಿಸುವುದಾಗಿ ಹೇಳಿತ್ತು. ಇದೀಗ ಪರಿಹಾರವನ್ನು ನೇರವಾಗಿ ಸ್ವೀಕರಿಸುವ ಬದಲು, ವಿಶ್ವಸಂಸ್ಥೆಯ ಮೂಲಕ ಬರಲಿ ಎಂದು ಹೇಳುತ್ತಿದೆ.
ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ 1.72 ಕೋಟಿ ಮಂದಿ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಇದುವರೆಗೆ ಸಾವನ್ನಪ್ಪಿರುವವರು 1,600ಕ್ಕೂ ಹೆಚ್ಚು ಮಂದಿ. 12 ಲಕ್ಷ ಮನೆಗಳಿಗೆ ಹಾನಿಯಾಗಿದೆ ಅಥವಾ ಧ್ವಂಸಗೊಂಡಿವೆ. ಪಾಕಿಸ್ತಾನದ ಎಲ್ಲಾ ನಾಲ್ಕು ಪ್ರಾಂತ್ಯಗಳು ಮತ್ತಾ ಪಾಕ್ ಆಕ್ರಮಿತ ಕಾಶ್ಮೀರವು ಪ್ರವಾಹದಿಂದ ತತ್ತರಿಸಿದೆ ಎಂದು ಕೃಷ್ಣ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.