ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೊಹ್ರಾಬುದ್ದೀನ್ ಸಾಕ್ಷಿ ಆಜಂ ದಾಳಿ ನಡೆದಿಲ್ಲ, ಅದು ನಾಟಕ
(Azam Khan | Sohrabuddin encounter case | Iqbal | Udaipur)
ಉದಯ್ಪುರ್, ಗುರುವಾರ, 16 ಸೆಪ್ಟೆಂಬರ್ 2010( 12:05 IST )
ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಹತ್ಯಾ ಪ್ರಕರಣದ ಸಾಕ್ಷಿಯಾಗಿರುವ ಆಜಂ ಖಾನ್ ಹತ್ಯಾ ಯತ್ನ ನಡೆದಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಪೊಲೀಸರು, ಈ ದಾಳಿಯನ್ನು ಸ್ವತಃ ಆಜಂ ಮಾಡಿಕೊಂಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಸೊಹ್ರಾಬುದ್ದೀನ್‌ನನ್ನು 10 ಕೋಟಿ ರೂಪಾಯಿ ಹಣಕ್ಕಾಗಿ ಹತ್ಯೆಗೈಯಲಾಗಿತ್ತು ಮತ್ತು ಈ ಸಂಬಂಧ ಬಿಜೆಪಿ ನಾಯಕರುಗಳ ನಡುವೆ ಡೀಲ್ ನಡೆದಿತ್ತು ಎಂದು ಆರೋಪಿಸಿದ್ದ ಆಜಂ ಖಾನ್, ತನ್ನ ಮೇಲೆ ವಿಫಲ ಹತ್ಯಾಯತ್ನ ನಡೆದಿದೆ ಎಂದು ಮಂಗಳವಾರ ಹೇಳಿದ್ದರು.
ಮಂಗಳವಾರ ಸಂಜೆ ರಾಜಸ್ತಾನದ ಉದಯ್ಪುರದ ಹೊರವಲಯದಲ್ಲಿದ್ದ ಖಾನ್ ಆಜಂ ಮೇಲೆ ಇಬ್ಬರು ಅಪರಿಚಿತ ಬಂದೂಕುದಾರಿಗಳು ಗುಂಡಿಕ್ಕಿ ಕೊಲ್ಲಲು ವಿಫಲ ಯತ್ನ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಕುರಿತು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ತನಿಖೆ ನಡೆಸಿದ್ದು, ನಕಲಿ ದಾಳಿಯನ್ನು ಸ್ವತಃ ಆಜಂ ಸೃಷ್ಟಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಆಜಂ ಖಾನ್ ಅವರು ದೇಸೀ ನಿರ್ಮಿತ ಪಿಸ್ತೂಲಿನಿಂದ ಸ್ವತಃ ಗುಂಡು ಹಾರಿಸಿಕೊಂಡು ಗಾಯ ಮಾಡಿಕೊಂಡಿದ್ದರು. ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಇತರರ ಗಮನವನ್ನು ತನ್ನತ್ತ ಸೆಳೆಯುವುದು ಅವರ ಉದ್ದೇಶವಾಗಿತ್ತು ಎಂದು ಉದಯ್ಪುರ್ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ನರ್ಜಾರಿ ತಿಳಿಸಿದ್ದಾರೆ.
ಆಜಂ ಖಾನ್ ಮತ್ತು ಅವರ ಸ್ನೇಹಿತ ಇಕ್ಬಾಲ್ ಇಬ್ಬರೂ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ಬೈಕ್ ಸವಾರರು ಕಾರನ್ನು ಅಡ್ಡಗಟ್ಟಿ ಗುಂಡು ಹಾರಿಸಿದ್ದರು ಎಂದು ಆರೋಪಿಸಲಾಗಿತ್ತು.
ಗಾಯಾಳುವಾಗಿದ್ದ ಆಜಂ ಮತ್ತು ಅವರ ಸ್ನೇಹಿತ ಇಕ್ಬಾಲ್ ಅವರನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದ ಪೊಲೀಸರು, ದಾಳಿ ನಕಲಿಯಾಗಿತ್ತು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಆಜಂ ಮಾತ್ರ ಇಬ್ಬರು ಅಪರಿಚಿತರಿಂದ ದಾಳಿ ನಡೆದಿದೆ ಎಂದು ವಾದಿಸುತ್ತಿದ್ದಾರೆ.
ಸೊಹ್ರಾಬುದ್ದೀನ್ ಹತ್ಯೆಗಾಗಿ ಮಾರ್ಬಲ್ ವ್ಯಾಪಾರಿಗಳು ಮತ್ತು ರಾಜಸ್ತಾನದ ಮಾಜಿ ಗೃಹಸಚಿವರ ನಡುವೆ 10 ಕೋಟಿ ರೂಪಾಯಿಗಳ ವ್ಯವಹಾರ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿ ಸಾಕ್ಷಿಯಾಗಿರುವ ಆಜಂ ಆರೋಪಿಸಿದ್ದಲ್ಲದೆ, ಇದೇ ಕಾರಣದಿಂದ ತನ್ನ ಮೇಲೆ ಅಪಾಯದ ತೂಗುಗತ್ತಿಯಿದೆ ಎಂದು ಕೆಲ ಸಮಯದ ಹಿಂದೆ ಆರೋಪಿಸಿದ್ದರು.
ಸೊಹ್ರಾಬುದ್ದೀನ್ ಹತ್ಯೆಯ ಏಕೈಕ ಸಾಕ್ಷಿ ತುಳಸೀರಾಮ್ ಪ್ರಜಾಪತಿಯೊಂದಿಗೆ ಜೈಲಿನಲ್ಲಿ ಕೊಠಡಿ ಹಂಚಿಕೊಂಡಿದ್ದ ಆಜಂ, ಬಿಜೆಪಿ ನಾಯಕ ಮತ್ತು ರಾಜಸ್ತಾನದ ಮಾಜಿ ಗೃಹಸಚಿವ ಗುಲಾಬ್ ಚಾಂದ್ ಕಠಾರಿಯಾ ಅವರಿಗೆ ಸೊಹ್ರಾಬುದ್ದೀನ್‌ನನ್ನು ಮುಗಿಸುವಂತೆ ಆರ್.ಕೆ. ಮಾರ್ಬಲ್ಸ್ 10 ಕೋಟಿ ರೂಪಾಯಿಗಳನ್ನು ನೀಡಿತ್ತು. ಸೊಹ್ರಾಹುದ್ದೀನ್ ಮಾರ್ಬಲ್ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಕಾರಣಕ್ಕೆ ಈ ರೀತಿ ಮಾಡಲಾಗಿತ್ತು ಎಂದು ಹೇಳಿದ್ದರು.
ಸೊಹ್ರಾಬುದ್ದೀನ್ ಕೊಲೆಯನ್ನು ನೋಡಿದ್ದ ಕಾರಣಕ್ಕಾಗಿ ಗುಜರಾತ್ ಮತ್ತು ರಾಜಸ್ತಾನ ಪೊಲೀಸರು ನಕಲಿ ಎನ್‌ಕೌಂಟರ್ ಮೂಲಕ ತುಳಸೀರಾಂನನ್ನು ಮುಗಿಸಿದ್ದರು. ಇಷ್ಟೆಲ್ಲ ಮಾಹಿತಿಗಳನ್ನು ಹೊಂದಿರುವ ನನ್ನ ಜೀವವೂ ಈಗ ಅಪಾಯದಲ್ಲಿದೆ. ಸತತವಾಗಿ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆಜಂ ಖಾನ್ ತಿಳಿಸಿದ್ದರು.