ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೆ.30, ಗುರುವಾರ ಅಯೋಧ್ಯೆ ತೀರ್ಪು; ಸುಪ್ರೀಂ ತಡೆ ತೆರವು
(Ayodhya verdict | Allahabad HC | Supreme Court | Ramesh Chand Tripathi)
ಅಯೋಧ್ಯೆಯ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಇದ್ದ ಜಮೀನಿನ ಒಡೆತನ ಕುರಿತ ತೀರ್ಪು ಮುಂದೂಡಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ತ್ರಿಸದಸ್ಯ ವಿಶೇಷ ಪೀಠವು ಸೆಪ್ಟೆಂಬರ್ 30ರಂದು ಗುರುವಾರ ತನ್ನ ಮಹತ್ವದ ತೀರ್ಪನ್ನು ಘೋಷಿಸಲಿದೆ.
ತೀರ್ಪು ಘೋಷಣೆಗೆ ಇದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆರವುಗೊಳಿಸಿದೆ. ಅದರ ಬೆನ್ನಿಗೆ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆ ಒಡೆತನದ ತೀರ್ಪನ್ನು ಸೆಪ್ಟೆಂಬರ್ 30ರಂದು ಗುರುವಾರ ಅಪರಾಹ್ನ 3.30ಕ್ಕೆ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಸೆಪ್ಟೆಂಬರ್ 24ರಂದು ಅಪರಾಹ್ನ 3.30ಕ್ಕೆ ಅಲಹಾಬಾದ್ ಹೈಕೋರ್ಟಿನ ಲಕ್ನೋ ತ್ರಿಸದಸ್ಯ ಪೀಠವು ನೀಡಬೇಕಿದ್ದ ತೀರ್ಪಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಲು ಕಾರಣವಾಗಿದ್ದ ರಮೇಶ್ ಚಂದ್ರ ತ್ರಿಪಾಠಿಯವರ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪನ್ನು ಯಾವಾಗ ಬೇಕಾದರೂ ನೀಡಬಹುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ಅಫ್ತಾಬ್ ಆಲಂ ಮತ್ತು ಕೆ.ಎಸ್. ರಾಧಾಕೃಷ್ಣನ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವು ಇಂದು ಪ್ರಕರಣದ ವಿಚಾರಣೆ ನಡೆಸಿತ್ತು.
ಈ ವಿವಾದದ ಪರಿಹಾರಕ್ಕೆ ಅತ್ಯುತ್ತಮ ಹಾದಿ ಮಾತುಕತೆಯೇ ಆಗಿದೆ. ಆದರೆ ಅದು ಸುಸೂತ್ರವಾಗಿ ನಡೆಯುತ್ತಿಲ್ಲ. ಇಂತಹ ಅನಿಶ್ಚಿತತೆ ಇರುವುದರಿಂದ ಅದನ್ನು ಮುಂದುವರಿಯಲು ಅವಕಾಶ ನೀಡಬಾರದು. ಸೌಹಾರ್ದಯುತ ಪರಿಹಾರ ಸಾಧ್ಯವಿದ್ದರೆ, ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಾವು ಅನಿಶ್ಚಿತತೆಯನ್ನು ಬಯಸುವುದಿಲ್ಲ ಎಂದು ಅಟಾರ್ನಿ ಜನರಲ್ ಜೆ.ಇ. ವಾಹನಾವತಿ ನ್ಯಾಯಾಲಯಕ್ಕೆ ತಿಳಿಸಿದರು.
ದೇಶದಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್, ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆ ಒಡೆತನದ ತೀರ್ಪನ್ನು ಮುಂದೂಡಬೇಕು ಎಂಬ ತನ್ನ ವಾದವನ್ನು ತಳ್ಳಿ ಹಾಕಿದ್ದ ಹೈಕೋರ್ಟ್ ಆದೇಶದ ವಿರುದ್ಧ ರಮೇಶ್ ಚಂದ್ರ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿತು.
ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ತ್ರಿಸದಸ್ಯ ಪೀಠವೂ ಇದೇ ರೀತಿಯ ನಿರ್ಧಾರಕ್ಕೆ ಬಂದಿತ್ತು. ಅಲ್ಲದೆ ಅರ್ಜಿದಾರರಿಗೆ ದಂಡವನ್ನೂ ಹೇರಿತ್ತು.
ಇದರಿಂದ ಅಸಮಾಧಾನಗೊಂಡ ತ್ರಿಪಾಠಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀಂ ಪೀಠವೊಂದು ಸೆಪ್ಟೆಂಬರ್ 24ರಂದು ಹೈಕೋರ್ಟ್ ನೀಡಬೇಕಿದ್ದ ತೀರ್ಪಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿ, ಮುಖ್ಯ ನ್ಯಾಯಮೂರ್ತಿಯವರನ್ನೊಳಗೊಂಡ ಪೀಠಕ್ಕೆ ಪ್ರಕರಣವನ್ನು ಹಸ್ತಾಂತರಿಸಿತ್ತು.
ಪ್ರಸಕ್ತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮತ್ತು ತೀರ್ಪು ನೀಡಲಿರುವ ಹೈಕೋರ್ಟ್ ಲಕ್ನೋ ವಿಶೇಷ ಪೀಠದ ಓರ್ವ ನ್ಯಾಯಮೂರ್ತಿಗಳು ನಿವೃತ್ತಿಯಾಗುತ್ತಿರುವುದರಿಂದ ಅಕ್ಟೋಬರ್ 1ಕ್ಕಿಂತ ಮೊದಲು ತೀರ್ಪು ನೀಡಬೇಕು. ಅದು ಸಾಧ್ಯವಾಗದೆ ಹೋದರೆ ಮತ್ತಷ್ಟು ಕಾನೂನು ತೊಡಕುಗಳು ಎದುರಾಗುತ್ತವೆ ಎಂದು ಸುನ್ನಿ ವಕ್ಫ್ ಬೋರ್ಡ್ ಅಭಿಪ್ರಾಯಪಟ್ಟಿತ್ತು.