2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಪಾಕಿಸ್ತಾನದ ಇಬ್ಬರು ಸೇನಾಧಿಕಾರಿಗಳೂ ಸೇರಿದಂತೆ ಐವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಿರ್ದೇಶನದಂತೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಿದೆ.
ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿಗಳು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆಯು ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಿದೆ.
ಪಾಕಿಸ್ತಾನ ಮೂಲದ ಅಮೆರಿಕಾ ಪ್ರಜೆ, ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯೀದ್ ಗಿಲಾನಿ ಎನ್‌ಐಎಗೆ ಬಹಿರಂಗಪಡಿಸಿದ ಮಾಹಿತಿಗಳ ಆಧಾರದಲ್ಲಿ ಆರೋಪಿಗಳ ವಿರುದ್ಧ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿತ್ತು.
ಪಾಕಿಸ್ತಾನದ ಮೇಜರ್ ಸಮೀರ್ ಆಲಿ ಮತ್ತು ಮೇಜರ್ ಇಕ್ಬಾಲ್ ಪ್ರಸಕ್ತ ಪಾಕ್ ಮಿಲಿಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರೂ ಸೇರಿದಂತೆ ಲಷ್ಕರ್ ಭಯೋತ್ಪಾದಕರಾದ ಸಾಜಿದ್ ಮಜೀದ್ ಮತ್ತು ಸಯ್ಯದ್ ಅಬ್ದುರ್ ರೆಹಮಾನ್ ಹಶೀಮ್ ಎಂಬವರಿಗೂ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಲಾಗಿದೆ.
160 ಅಮಾಯಕರ ಸಾವಿಗೆ ಕಾರಣವಾಗಿದ್ದ 2008ರ ನವೆಂಬರ್ 26ರ ದಾಳಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಲಷ್ಕರ್ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಆತನ ಸಹಚರ ಝಾಕೀರ್ ರೆಹಮಾನ್ ಲಖ್ವಿಯವರಿಗೆ ಇಂಟರ್‌ಪೋಲ್ ಈ ಹಿಂದೆಯೇ ರೆಡ್ ಕಾರ್ನರ್ ನೋಟೀಸ್ ನೀಡಿತ್ತು.
ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯನ್ನು ಸಂಘಟಿಸಲು ಈ ಎಲ್ಲಾ ವ್ಯಕ್ತಿಗಳು ಲಷ್ಕರ್ ಜತೆ ಸಹಕಾರ ನೀಡಿದ್ದರು.