ಭಾರತೀಯರು ಪಾಶ್ಚಾತ್ಯರ ಕಣ್ಣಿನಲ್ಲಿ ಅಲ್ಪರಾಗುತ್ತಿರುವುದು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ನ್ಯೂಜಿಲೆಂಡ್ ಟಿವಿ ನಿರೂಪಕನೊಬ್ಬ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಅಪಾರ್ಥ ಬರುವಂತೆ ಉಚ್ಛರಿಸಿ, ವಿಕೃತ ಸುಖ ಅನುಭವಿಸಿದ ಬೆನ್ನಿಗೆ ಇದೀಗ ಆಸ್ಟ್ರೇಲಿಯಾ ಪೊಲೀಸರು ಅಂತಹುದೇ ಮಹತ್ ಕಾರ್ಯಕ್ಕೆ ಮುಂದಾಗಿದ್ದಾರೆ.
ಆಸ್ಟ್ರೇಲಿಯಾ ಎಂದ ಕೂಡಲೇ ಅದು ಜನಾಂಗೀಯ ನಿಂದನೆಗೆ ಹೆಸರಾದ ದೇಶ ಎಂಬುದು ಜನಜನಿತ. ಅದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿರುವ ಅಲ್ಲಿನ ಜನತೆಗೆ ಈಗ ಪೊಲೀಸರೂ ಕೈ ಜೋಡಿಸಿದ್ದಾರೆ. ಭಾರತದಲ್ಲಿ ವಿದ್ಯುತ್ ರೈಲು ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾಯುತ್ತಿರುವ ವೀಡಿಯೋವನ್ನು ನೋಡುತ್ತಾ, ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೂ ಇದೇ ಮದ್ದು ಎಂದು ಮೇಲ್‌ಗಳನ್ನು ಪಸರಿಸುತ್ತಿದ್ದಾರೆ.
ಮೊನ್ನೆಯಷ್ಟೇ ನ್ಯೂಜಿಲೆಂಡ್ ರಾಯಭಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಭಾರತೀಯ ವಿದೇಶಾಂಗ ಸಚಿವಾಲಯವು ಈಗ ಆಸ್ಟ್ರೇಲಿಯಾ ರಾಯಭಾರಿಗೂ ಸಮನ್ಸ್ ಜಾರಿಗೊಳಿಸಿದೆ.
ದೆಹಲಿಯಲ್ಲಿರುವ ಆಸ್ಟ್ರೇಲಿಯಾದ ರಾಯಭಾರಿ ಪೀಟರ್ ವರ್ಗೀಸ್ ಅವರನ್ನು ತಕ್ಷಣವೇ ಸಚಿವಾಲಯಕ್ಕೆ ಬರುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರ ವರ್ತನೆಗೆ ಭಾರತವು ತನ್ನ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಲಿದೆ ಎಂದು ನಂಬಲಾಗಿದೆ.
ಸಾವಿನ ವೀಡಿಯೋದಲ್ಲೂ ಸುಖ... ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಪೊಲೀಸರ ಕರ್ಮಕಾಂಡವಿದು. ತಮಗೆ ಸಿಕ್ಕಿದ ವೀಡಿಯೋವೊಂದನ್ನು ಒಬ್ಬರಿಂದೊಬ್ಬರಿಗೆ ವಿಕೃತವಾಗಿ ಕಾಮೆಂಟ್ ಮಾಡುತ್ತಾ ಇಮೇಲ್ ಮೂಲಕ ಎಲ್ಲರಿಗೂ ರವಾನಿಸುತ್ತಿದ್ದಾರೆ.
ಭಾರತದಲ್ಲಿನ ತುಂಬಿ ತುಳುಕುತ್ತಿದ್ದ ರೈಲೊಂದರ ಛಾವಣಿಯ ಮೇಲೂ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಎಂದು ನಿಂತಿದ್ದ. ಆಗ ಆತ ಕೈಗಳು ಮೇಲಿದ್ದ ವಿದ್ಯುತ್ ತಂತಿಗಳಿಗೆ ತಗುಲಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದ್ದ. ಈ ವೀಡಿಯೋವನ್ನು ಹೇಗೋ ಸಂಪಾದಿಸಿದ್ದ ಪೊಲೀಸರು, ಅದನ್ನೇ ತಮ್ಮ ಜನಾಂಗೀಯ ನಿಂದನೆಗೆ ಬಳಸಿಕೊಂಡಿದ್ದಾರೆ.
ಭಾರತೀಯ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಇದು ಒಂದು ಉತ್ತಮ ಹಾದಿ ಎಂಬಂತೆ ಕಾಮೆಂಟುಗಳನ್ನು ಬರೆದಿರುವ ವಿಕ್ಟೋರಿಯಾ ಪೊಲೀಸರು, ತಮ್ಮ ಕಚೇರಿಗಳಲ್ಲಿನ ಕಂಪ್ಯೂಟರುಗಳಲ್ಲಿ ಸಾವಿನ ಸುದ್ದಿಯ ಆಟವಾಡುತ್ತಿದ್ದಾರೆ.
ಆದರೆ ಇದನ್ನು ವಿಕ್ಟೋರಿಯಾದ ಪೊಲೀಸ್ ಮುಖ್ಯಸ್ಥರು, ರಾಜ್ಯದ ಮುಖ್ಯಸ್ಥ ಜಾನ್ ಬ್ರೂಂಬಿ ಸೇರಿದಂತೆ ಹಲವರು ಖಂಡಿಸಿದ್ದಾರೆ.
ಈ ಸಂಬಂಧ ಈಗಾಗಲೇ ತನಿಖೆ ಆರಂಭವಾಗಿದೆ. ವರದಿಗಳ ಪ್ರಕಾರ ಮೂವರು ಪೊಲೀಸ್ ವರಿಷ್ಠಾಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ. ಹಲವು ಇನ್ಸ್‌ಪೆಕ್ಟರುಗಳು ಕೂಡ ಪಾಲ್ಗೊಂಡಿರುವುದು ಖಚಿತವಾಗಿದೆ ಎಂದು ಹೇಳಲಾಗಿದೆ.