ರಾಹುಲ್ ಮೇಲೆ ಆರೆಸ್ಸೆಸ್ ಕೇಸ್ | ಶರದ್ ಕ್ಷಮೆಗೆ 'ಕೈ' ಗಡುವು
ನವದೆಹಲಿ, ಮಂಗಳವಾರ, 26 ಅಕ್ಟೋಬರ್ 2010( 11:38 IST )
ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲ್ಗೊಂಡಿರುವ ನಿಷೇಧಿತ ಸಂಘಟನೆ 'ಸಿಮಿ'ಯ ಜತೆ ರಾಷ್ಟ್ರೀಯತಾ ವಾದವನ್ನು ಉಸಿರಾಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹೋಲಿಕೆ ಮಾಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಜಾರ್ಖಂಡ್ ರಾಜಧಾನಿ ರಾಂಚಿ ನಿವಾಸಿ ಆಶಿಶ್ ಕುಮಾರ್ ಸಿಂಗ್ ಎಂಬವರು ಇಲ್ಲಿನ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದಲ್ಲಿ ಮಾನನಷ್ಟ ಮತ್ತು ಧರ್ಮದ ಆಧಾರದಲ್ಲಿ ಭಿನ್ನ ಗುಂಪುಗಳ ನಡುವೆ ವೈಷಮ್ಯಕ್ಕೆ ಕಾರಣವಾಗಿರುವುದು ಮುಂತಾದ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆ 499, 500, 501, 153 A, 153ಬಿ ಅಡಿಯಲ್ಲಿ ದಾಖಲಿಸಿದ್ದಾರೆ.
ಅಕ್ಟೋಬರ್ ಮೊದಲ ವಾರದಲ್ಲಿ ಮಧ್ಯಪ್ರದೇಶ ಪ್ರವಾಸ ಮಾಡಿದ್ದ ರಾಹುಲ್ ಗಾಂಧಿ ಭೋಪಾಲ್‌ನಲ್ಲಿ ಈ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು ಎಂದು ಇಂಜಿನಿಯರ್ ಆಗಿರುವ 30ರ ಹರೆಯದ ಆರೆಸ್ಸೆಸ್ ಕಾರ್ಯಕರ್ತ ಆಶಿಶ್ ಆರೋಪಿಸಿದ್ದಾರೆ.
ಸಿಮಿ ಮತ್ತು ಆರೆಸ್ಸೆಸ್‌ಗಳೆರಡೂ ಮತಾಂಧ ಮತ್ತು ಮೂಲಭೂತವಾದಿ ದೃಷ್ಟಿಕೋನಗಳನ್ನು ಹೊಂದಿರುವುದರಿಂದ ನನ್ನ ಪ್ರಕಾರ ಅವೆರಡೂ ಸಂಘಟನೆಗಳ ನಡುವೆ ಹೆಚ್ಚಿನ ವ್ಯತ್ಯಾಸಗಳು ಕಾಣುತ್ತಿಲ್ಲ ಎಂದು ರಾಹುಲ್ ಹೇಳಿದ್ದರು.
ಶರದ್ ಯಾದವ್ ಕ್ಷಮೆಗೆ ಕಾಂಗ್ರೆಸ್ ಆಗ್ರಹ... ರಾಹುಲ್ ಗಾಂಧಿಯನ್ನು ಗಂಗಾ ನದಿಗೆ ಎಸೆಯಿರಿ ಎಂದು ಹೇಳಿಕೆ ನೀಡಿರುವ ಜೆಡಿಯು ವರಿಷ್ಠ ಶರದ್ ಯಾದವ್ ವಿರುದ್ಧ ಕಾಂಗ್ರೆಸ್ ಮುಗಿ ಬಿದ್ದಿದೆ. 24 ಗಂಟೆಗಳ ಒಳಗೆ ಕ್ಷಮೆ ಯಾಚಿಸಬೇಕು, ತಪ್ಪಿದಲ್ಲಿ ಪಕ್ಷವು ಕ್ರಮಕ್ಕೆ ಮುಂದಾಗುತ್ತದೆ ಎಂದು ಕಾಂಗ್ರೆಸ್ ಬೆದರಿಕೆ ಹಾಕಿದೆ.
ರಾಜಕೀಯದಲ್ಲಿ ಯಾರೊಬ್ಬರೂ ಸಂಸದೀಯ ಭಾಷೆಯನ್ನು ಮೀರಿ ಮಾತನಾಡಬಾರದು. ಆದರೆ ಸಂಯುಕ್ತ ಜನತಾದಳ ಅಧ್ಯಕ್ಷ ಶರದ್ ಯಾದವ್ ಮತ್ತು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಅನಾಗರಿಕ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಯುವಕರ ಐಕಾನ್ ಆಗಿರುವ ರಾಹುಲ್ ವಿರುದ್ಧ ಈ ಪಕ್ಷಗಳು ಹೊಂದಿರುವ ಹತಾಶೆಯನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಪ್ರೇಮಚಂದ್ ಮಿಶ್ರಾ ತಿಳಿಸಿದ್ದಾರೆ.
24 ಗಂಟೆ ಒಳಗಡೆ ಶರದ್ ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ಅವರ ಬಂಧನ ಸೇರಿದಂತೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿರುವ ಕಾಂಗ್ರೆಸ್, ನಿಮ್ಮ ಅಧ್ಯಕ್ಷರಿಗೆ ಕೊಂಚ ನೀತಿ ಪಾಠ ಹೇಳಿ ಎಂದು ಜೆಡಿಯು ನಾಯಕ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಲಹೆ ನೀಡಿದೆ.
ರಾಹುಲ್ ಗಾಂಧಿಯವರ ಸಮಾರಂಭಗಳಿಗೆ ಪ್ರವಾಹೋಪಾದಿಯಲ್ಲಿ ಬರುತ್ತಿರುವ ಜನರನ್ನು ನೋಡಿ ಶರದ್ ಯಾದವ್ ಬೆಚ್ಚಿ ಬಿದ್ದಿದ್ದಾರೆ. ಹಾಗಾಗಿ ಹತಾಶೆಯಿಂದ ಇಂತಹ ಹೇಳಿಕೆ ನೀಡಿದ್ದಾರೆ. ನರ್ವಸ್ ಆದ ವ್ಯಕ್ತಿಯೊಬ್ಬ ಮಾತ್ರ ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯ ಎಂದು ಮತ್ತೊಬ್ಬ ವಕ್ತಾರ ಶಕೀಲ್ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.