ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನ್ಯಾಯ ಕೇಳಿದವರನ್ನು ಜೈಲಿಗೆ ತಳ್ಳುತ್ತೀರಾ?: ಆರುಂಧತಿ ರಾಯ್ (Arundhati Roy | Kashmir | Kashmiri Pandits | India)
Bookmark and Share Feedback Print
 
ದಗಾಕೋರರನ್ನು, ಅತ್ಯಾಚಾರಿಗಳನ್ನು, ಭ್ರಷ್ಟರನ್ನು ತಿರುಗಾಡಲು ಬಿಡುತ್ತೀರಿ, ಆದರೆ ದೌರ್ಜನ್ಯಕ್ಕೊಳಗಾಗಿರುವ ಕಾಶ್ಮೀರದ ಜನತೆಗೆ ನ್ಯಾಯ ಒದಗಿಸುವ ಮಾತುಗಳನ್ನಾಡಿದರೆ ಜೈಲಿಗೆ ತಳ್ಳುತ್ತೀರಾ? ಈ ದೇಶದ ಬಗ್ಗೆ ನನಗೆ ಕರುಣೆಯಿದೆ, ನಮ್ಮಂತಹ ಹೋರಾಟಗಾರರಿಗೆ ಬೆಂಬಲ ನೀಡದೇ ಇರುವ ಜನತೆಯ ಬಗ್ಗೆ ಮರುಕ ಹುಟ್ಟುತ್ತಿದೆ, ನನ್ನಲ್ಲಿ ವಿಷಾದಗಳು ಮನೆ ಮಾಡುತ್ತಿವೆ ಎಂದು ಲೇಖಕಿ ಆರುಂಧತಿ ರಾಯ್ ಹೇಳಿದ್ದಾರೆ.

ಇದನ್ನೂ ಓದಿ:
** ದೇಶದ್ರೋಹಿಗಳ ಬಗ್ಗೆ ಕೇಂದ್ರ ಸುಮ್ಮನಿದೆ, ಯಾಕೆ?
** ದೇಶದ್ರೋಹ: ಆರುಂಧತಿ ರಾಯ್, ಗಿಲಾನಿ ವಿರುದ್ಧ ಕೇಸ್?

ಪ್ರಸಕ್ತ ಕಾಶ್ಮೀರದಲ್ಲಿರುವ ಆರುಂಧತಿ ರಾಯ್, ದೇಶದ್ರೋಹ ವಿವಾದ ತಾರಕಕ್ಕೇರುತ್ತಿರುವ ಹೊತ್ತಿನಲ್ಲಿ ಮಂಗಳವಾರ ಶ್ರೀನಗರದಿಂದ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರ ಪ್ರಮುಖ ಅಂಶಗಳು ಹೀಗಿವೆ.
PTI

ನಾನು ಇದನ್ನು ಕಾಶ್ಮೀರದ ಶ್ರೀನಗರದಿಂದ ಬರೆಯುತ್ತಿದ್ದೇನೆ. ಇತ್ತೀಚಿನ ಕಾಶ್ಮೀರ ಸಭೆಗಳಲ್ಲಿ ನಾನು ಹೇಳಿರುವುದಕ್ಕಾಗಿ ರಾಜದ್ರೋಹ ಆರೋಪಗಳನ್ನು ನನ್ನ ಮೇಲೆ ಹೊರಿಸಿ ಬಂಧಿಸುವ ಸಾಧ್ಯತೆಗಳಿವೆ ಎಂದು ಇಂದು ಬೆಳಗ್ಗಿನ ಪತ್ರಿಕೆಗಳಲ್ಲಿ ಬಂದಿರುವುದನ್ನು ನೋಡಿದ್ದೇನೆ.

ಲಕ್ಷಗಟ್ಟಲೆ ಜನ ದಿನಂಪ್ರತಿ ಹೇಳುತ್ತಿರುವುದನ್ನು ನಾನು ಹೇಳಿದ್ದೆ. ಕಳೆದ ಹಲವಾರು ಸಮಯದಿಂದ ನಾನು ಮತ್ತು ಇತರ ಲೇಖಕರು ಬರೆದಿರುವುದನ್ನು ನಾನು ಹೇಳಿದ್ದೆ. ನನ್ನ ಭಾಷಣಗಳ ಪ್ರತಿಯನ್ನು ಯಾರಾದರೂ ಆಸ್ಥೆ ವಹಿಸಿ ಓದಿದ್ದೇ ಆದರೆ, ಅವರು ಖಂಡಿತವಾಗಿಯೂ ನ್ಯಾಯದ ಅಗತ್ಯವಿರುವುದನ್ನು ಮನಗಾಣುತ್ತಾರೆ.

ನಾನು ಮಾತನಾಡಿದ್ದು ವಿಶ್ವದ ಕ್ರೂರ ಮಿಲಿಟರಿ ಆಕ್ರಮಣಗಳಲ್ಲಿ ನಲುಗುತ್ತಿರುವ ಕಾಶ್ಮೀರ ಜನತೆಗೆ ನ್ಯಾಯ ಸಿಗಬೇಕಾದ ಬಗ್ಗೆ. ಕಾಶ್ಮೀರಿ ಪಂಡಿತರು ತಮ್ಮ ಬದುಕಿಗಾಗಿ ತಾಯ್ನಾಡನ್ನು ತೊರೆದಿರುವ ಹಿಂದಿನ ಕಾರಣಗಳ ಬಗ್ಗೆ.

ಕಳೆದ ವರ್ಷ ಆಸಿಯಾ ಮತ್ತು ನೀಲೋಫರ್ ಎಂಬಿಬ್ಬರ ಅಮಾನವೀಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ 47 ದಿನಗಳ ಪ್ರತಿಭಟನೆಯನ್ನು ಕಂಡಿದ್ದ ದಕ್ಷಿಣ ಕಾಶ್ಮೀರದ ಆಪಲ್ ನಗರ ಸೋಫಿಯಾನ್‌ಗೆ ನಾನು ನಿನ್ನೆ ಪ್ರಯಾಣಿಸಿದ್ದೆ. ಆ ಎರಡೂ ಸಾವಿಗೆ ಇದುವರೆಗೂ ನ್ಯಾಯ ದೊರಕಿಲ್ಲ. ನಾನು ನೀಲೋಫರ್ ಗಂಡ ಶಕೀಲ್ ಮತ್ತು ಆಸಿಯಾ ಸಹೋದರನನ್ನು ಭೇಟಿಯಾಗಿದ್ದೇನೆ.

ಶೋಕ ಮತ್ತು ಆಕ್ರೋಶಗೊಂಡಿದ್ದ ಒಂದಷ್ಟು ಜನರ ಮಾತುಗಳನ್ನು ಕೇಳಿದೆವು. ಅವರಿಗೆ ಭಾರತದಿಂದ ನ್ಯಾಯ ದೊರಕುವ ಬದಲು ಅನ್ಯಾಯವಾಗುತ್ತಿರುವುದರ ಬಗ್ಗೆ ಕೇಳಿ ತಿಳಿದುಕೊಂಡೆವು. ಅವರಿಗೆ ಬೇಕಾಗಿರುವುದು ಅವರೇ ನಂಬಿರುವ ಸ್ವಾತಂತ್ರ್ಯ ಎಂಬುದನ್ನು ಕೇಳಿಪಟ್ಟೆವು.

ಕಲ್ಲುತೂರಾಟ ನಡೆಸುತ್ತಿರುವ ಹಲವು ಯುವಕರನ್ನು ಕೂಡ ಭೇಟಿಯಾದೆ. ಅನಂತ್‌ನಾಗ್ ಜಿಲ್ಲೆಯ ಮೂವರು ಯುವಕರನ್ನು ಕಸ್ಟಡಿಗೆ ಪಡೆದ ಆಡಳಿತವು ಅವರ ಬೆರಳುಗಳ ಉಗುರುಗಳನ್ನು ಕಿತ್ತು, ಕಲ್ಲುತೂರಾಟಕ್ಕೆ ಯಾವ ರೀತಿಯ ಶಿಕ್ಷೆ ನೀಡಿತ್ತು ಎಂಬುದನ್ನು ನನ್ನ ಜತೆಗೆ ಪ್ರಯಾಣಿಸಿದ್ದ ಯುವಕನೊಬ್ಬ ವಿವರಿಸಿದ.

ನಾನು ದ್ವೇಷ ಭಾಷಣವನ್ನು ಮಾಡುತ್ತಿದ್ದೇನೆ, ಭಾರತವು ವಿಭಜನೆಯಾಗಬೇಕೆಂದು ಬಯಸುತ್ತಿದ್ದೇನೆ ಎಂಬ ರೀತಿಯ ಆರೋಪಗಳನ್ನು ಕೆಲವರು ಮಾಡಿರುವುದನ್ನು ಪತ್ರಿಕೆಗಳಲ್ಲಿ ನೋಡಿದ್ದೇನೆ. ಇದಕ್ಕೆ ಉತ್ತರಿಸುವುದಾದರೆ, ನಾನು ಹೇಳಿರುವುದು ಪ್ರೀತಿಯಿಂದ ಮತ್ತು ಅಭಿಮಾನದಿಂದ ಎಂದು ಹೇಳಬಲ್ಲೆ. ನೀವು ಭಾರತೀಯರೆಂದು ಒಪ್ಪಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಬೆರಳುಗಳ ಉಗುರುಗಳನ್ನು ಕೀಳುವುದು, ಬಂಧಿಸುವುದು, ಅತ್ಯಾಚಾರ ಮಾಡುವುದು ಮತ್ತು ಕೊಲ್ಲುವುದು ಸರಿಯಲ್ಲ ಎಂದು ನಾನು ಹೇಳುತ್ತಿದ್ದೇನೆ.

ತಮ್ಮ ಮನಸ್ಸಿನಲ್ಲಿರುವುದನ್ನು ಮಾತನಾಡಿದ ಲೇಖಕರ ಬಗ್ಗೆ ದೇಶ ಮೌನವಾಗಿರುವುದು ಶೋಚನೀಯ. ಕೋಮು ಹಂತಕರು, ಸಾಮೂಹಿಕ ಕೊಲೆಗಾರರು, ಕಾರ್ಪೊರೇಟ್ ಭ್ರಷ್ಟರು, ಲೂಟಿಕೋರರು, ಅತ್ಯಾಚಾರಿಗಳು ಮತ್ತು ಬಡವರನ್ನು ಬೇಟೆಯಾಡುವವರನ್ನು ಸ್ವತಂತ್ರವಾಗಿ ಬಿಟ್ಟು, ನ್ಯಾಯಕ್ಕಾಗಿ ದನಿ ಎತ್ತಿದವರನ್ನು ಜೈಲಿಗೆ ಕಳುಹಿಸುವ ಅಗತ್ಯ ಕಾಣುತ್ತಿರುವ ದೇಶದ ಬಗ್ಗೆ ಕನಿಕರ ಮೂಡುತ್ತಿದೆ.

ಇದು ಆರುಂಧತಿ ರಾಯ್ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ.
ಸಂಬಂಧಿತ ಮಾಹಿತಿ ಹುಡುಕಿ