ರಾಜ್ಯ ಮತ್ತು ಕೇಂದ್ರದಲ್ಲಿ ಪ್ರಭಾವ ಹೊಂದಿರುವ ಹೊರತಾಗಿಯೂ ಕರ್ನಾಟಕದಿಂದ ಕಾವೇರಿ ನೀರನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ರಾಜೀನಾಮೆ ನೀಡುವಂತೆ ಎಐಎಡಿಎಂಕೆ ವರಿಷ್ಠೆ ಹಾಗೂ ಪ್ರತಿಪಕ್ಷದ ನಾಯಕಿ ಜಯಲಲಿತಾ ಆಗ್ರಹಿಸಿದ್ದಾರೆ.
ಕಾವೇರಿ ನೀರು ತಮಿಳುನಾಡಿನ ಜೀವನಾಡಿ. ಕರ್ನಾಟಕ ಕಾವೇರಿ ನೀರನ್ನು ಹರಿಸಲು ನಿರಾಕರಿಸುತ್ತದೆ ಎಂಬ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಮೊದಲೇ ಊಹಿಸಿ ಅದಕ್ಕೆ ತಕ್ಕ ಕ್ರಮಕ್ಕೆ ಮುಂದಾಗಬೇಕಿತ್ತು. ಇದರಲ್ಲಿ ವಿಫಲರಾಗಿರುವುದರಿಂದ ರಾಜೀನಾಮೆ ಕೊಟ್ಟು ಹೊರ ನಡೆಯಲಿ ಎಂದು ಜಯಲಲಿತಾ ತನ್ನ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಕಾವೇರಿ ನೀರು ಬಿಡುವುದಿಲ್ಲ ಎಂದು ಕರ್ನಾಟಕ ನಿರಾಕರಿಸಿರುವುದರ ಕುರಿತ ಮಾಧ್ಯಮ ವರದಿಗಳಿಗೆ, ಎರಡು ರಾಜ್ಯಗಳ ಸಂಬಂಧದ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಕಾರಣಕ್ಕೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದು ನೀಡಿದ್ದ ಕರುಣಾನಿಧಿ ಹೇಳಿಕೆಯನ್ನು ಕೂಡ ಜಯಲಲಿತಾ ತರಾಟೆಗೆ ತೆಗೆದುಕೊಂಡಿದ್ದಾರೆ.
PTI
ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಕರ್ನಾಟಕದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿಕೆ ನೀಡುವಾಗ ಅವರಲ್ಲಿ ಅಂತಹ ಯಾವುದೇ ಭಾವನೆ ಇರಲಿಲ್ಲ. ಆದರೂ ಕರುಣಾನಿಧಿ ಬಾಂಧವ್ಯ ವೃದ್ಧಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರವನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಜತೆ ಕರುಣಾನಿಧಿ ತಕ್ಷಣವೇ ಚರ್ಚೆ ನಡೆಸಬೇಕಿತ್ತು ಎಂದರು.
2007ರಲ್ಲಿ ಕಾವೇರಿ ಜಲ ವಿವಾದಗಳ ನ್ಯಾಯಾಧೀಕರಣವು ಅಂತಿಮ ತೀರ್ಪು ನೀಡಿದ ನಂತರ ಇದರ ಆದೇಶವನ್ನು ಕೇಂದ್ರದ ಗೆಜೆಟ್ಟಿನಲ್ಲಿ ಪ್ರಕಟವಾಗುವಂತೆ ಸಾಧ್ಯವಾಗುವ ಎಲ್ಲಾ ಯತ್ನಗಳನ್ನು ರಾಜ್ಯ ಸರಕಾರವು ಮಾಡಬೇಕು ಮುಖ್ಯಮಂತ್ರಿ ಕರೆದ ಸರ್ವಪಕ್ಷಗಳ ಎರಡೆರಡು ಸಭೆಯಲ್ಲಿ ತನ್ನ ಪಕ್ಷ ಒತ್ತಾಯಿಸಿದರೂ, ಇಂತಹ ಪ್ರಮುಖ ವಿಚಾರದಲ್ಲಿ ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸಲು ಕರುಣಾನಿಧಿ ಏನೂ ಮಾಡುತ್ತಿಲ್ಲ ಎಂದು ಜಯಲಲಿತಾ ಆರೋಪಿಸಿದರು.
ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿಯನ್ನು ವಿಳಂಬ ಮಾಡದೆ ತಕ್ಷಣವೇ ಅಸ್ತಿತ್ವಕ್ಕೆ ತರಬೇಕು ಎಂದು ಎಐಎಡಿಎಂಕೆ ಒತ್ತಾಯಿಸಿತ್ತು. ಆದರೆ ಡಿಎಂಕೆ ಆಡಳಿತವು ಈ ಸಂಬಂಧ ಯಾವೊಂದು ಕ್ರಮಕ್ಕೂ ಮುಂದಾಗಿಲ್ಲ ಎಂದರು.
ತನ್ನ ಪಕ್ಷ ನೀಡಿದ್ದ ಸಲಹೆಗಳಂತೆ ಸರಕಾರವು ನಡೆದುಕೊಂಡಿದ್ದರೆ, ನ್ಯಾಯಾಧೀಕರಣದ ಆದೇಶದಂತೆ ಕರ್ನಾಟಕ ನೀಡು ಬಿಡುತ್ತಿತ್ತು. ಜತೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಪ್ರಭಾವ ಹೊಂದಿರುವ ಹೊರತಾಗಿಯೂ ಕಾವೇರಿ ನೀರು ಬರುವಂತೆ ನೋಡಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಈ ವೈಫಲ್ಯದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.