ಮುಸ್ಲಿಂ ಧಾರ್ಮಿಕ ಸಂಘಟನೆ ದಾರುಲ್ ಉಲೂಮ್ ದಿಯೋಬಂದ್ ಮತ್ತೊಂದು ವಿವಾದಿತ ಫತ್ವಾ ಹೊರಡಿಸಿದೆ. ರಕ್ತದಾನ ಮಾಡುವುದು ಮತ್ತು ದೇಹದ ಯಾವುದೇ ಭಾಗವನ್ನು ದಾನ ಮಾಡುವುದು ಇಸ್ಲಾಮಿಗೆ ವಿರುದ್ಧವಾದುದು. ಆದರೂ ಆಪ್ತರು ಅಥವಾ ಹತ್ತಿರದವರ ಜೀವವನ್ನು ಉಳಿಸಲು ರಕ್ತ ನೀಡಬಹುದು ಎಂದು ಫತ್ವಾ ತಿಳಿಸಿದೆ.
ದಿಯೋಬಂದ್ ಹೊರಡಿಸಿರುವ ಈ ಫತ್ವಾಕ್ಕೆ ಹಲವು ಮುಸ್ಲಿಂ ಬುದ್ಧಿ ಜೀವಿಗಳು ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಕ್ತದಾನ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಈಗಾಗಲೇ ಹಲವು ಧಾರ್ಮಿಕ ಸಂಘಟನೆಗಳು ಹೇಳಿರುವುದನ್ನು ಹಲವರು ಉಲ್ಲೇಖಿಸಿದ್ದಾರೆ.
ರಕ್ತದಾನ ಅಥವಾ ದೇಹದ ಯಾವುದೇ ಅಂಗವನ್ನು ದಾನ ಮಾಡಲು ಇಸ್ಲಾಂ ಯಾರಿಗೂ ಅನುಮತಿ ನೀಡಿಲ್ಲ. ಮಾನವ ಜೀವದ ಮಾಲಕ ವ್ಯಕ್ತಿಯಲ್ಲದ ಕಾರಣ ಇಸ್ಲಾಂ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಫತ್ವಾ ಉತ್ತರಿಸಿದೆ.ಟ
ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡುವುದು ಸರಿಯೇ ಅಥವಾ ತಪ್ಪೇ ಎಂದು ಮುಸ್ಲಿಂ ವ್ಯಕ್ತಿಯೊಬ್ಬ ಕೇಳಿದ್ದ ಪ್ರಶ್ನೆಗೆ ದಾರುಲ್ ಉಲೂಮ್‌ನ ಫತ್ವಾ ವಿಭಾಗವು ಮೇಲಿನಂತೆ ವೆಬ್‌ಸೈಟಿನಲ್ಲಿ ಉತ್ತರಿಸಿದೆ.
ಈ ಫತ್ವಾ ಸರಿಯಲ್ಲ ಎಂದು ಧಾರ್ಮಿಕ ಮುಖಂಡ ಮೌಲಾನಾ ವಹಿದುದ್ದೀನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಈ ಫತ್ವಾದಿಂದ ಮುಸ್ಲಿಂ ಸಮುದಾಯವು ರಕ್ತದಾನದಿಂದ ಹಿಂದಕ್ಕೆ ಸರಿಯದು ಎಂದೂ ಹೇಳಿದ್ದಾರೆ.
ದೇಹದ ಭಾಗಗಳ ಮಾಲಕರು ನಾವಲ್ಲದ ಕಾರಣ ಅದನ್ನು ನಿಭಾಯಿಸುವ ಅಧಿಕಾರ ನಮಗಿಲ್ಲ. ಹಾಗಾಗಿ ದೇಹದ ಭಾಗ ಅಥವಾ ರಕ್ತವನ್ನು ದಾನ ಮಾಡುವುದು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾದುದು. ಆದರೂ ಹತ್ತಿರದ ಸಂಬಂಧಿಯ ಜೀವ ಉಳಿಸಲು ರಕ್ತದಾನ ಮಾಡುವುದನ್ನು ಇಸ್ಲಾಂ ಸ್ವೀಕರಿಸುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.
ರಕ್ತದಾನ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ರಕ್ತದಾನದಿಂದ ಜೀವಗಳನ್ನು ಉಳಿಸಬಹುದು ಎಂದು ದೆಹಲಿಯ ಜಾಮಿಲಾಯ ಮಿಲಿಯಾ ಇಸ್ಲಾಮಿಯಾ ಯುನಿವರ್ಸಿಟಿಯ ಇಸ್ಲಾಮಿಕ್ ಅಧ್ಯಯನ ವಿಭಾಗದ ಅಧ್ಯಕ್ಷ ಅಖ್ತಾರುಲ್ ವಾಸೆ ಹೇಳಿದ್ದಾರೆ. ಅಲ್ಲದೆ ಇಸ್ಲಾಮಿಕ್ ಕಾನೂನು ಸಂಘಟನೆಯಾಗಿರುವ ಇಸ್ಲಾಮಿಕ್ ಫಿಖಾ ಅಕಾಡೆಮಿಯು ರಕ್ತದಾನ ತಪ್ಪಲ್ಲ ಎಂದು ಹೇಳಿರುವುದನ್ನೂ ಉಲ್ಲೇಖಿಸಿದ್ದಾರೆ.
ದಿಯೋಬಂದ್ ಹೊರಡಿಸಿರುವ ಫತ್ವಾ ಕೇವಲ ಆ ಸಂಘಟನೆಯ ಅಭಿಪ್ರಾಯ ಮಾತ್ರ ಎಂದೂ ವಾಸೆ ತಿಳಿಸಿದ್ದಾರೆ.