ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭಾರತದ ಭ್ರಷ್ಟಾಚಾರಗಳ 'ಗಂಗೋತ್ರಿ' ಎಂದು ವಾಗ್ದಾಳಿ ನಡೆಸಿರುವ ಜನತಾಪಕ್ಷದ ಸುಬ್ರಮಣ್ಯನ್ ಸ್ವಾಮಿ, ಪ್ರತಿಪಕ್ಷಗಳು ಆಕೆಯಂತೆ ನಡೆದುಕೊಳ್ಳಬಾರದು ಎಂದಿದ್ದಾರೆ.
2ಜಿ ತರಂಗಾಂತರ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆ ನಡೆದರೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ತೀವ್ರ ಮುಖಭಂಗವಾಗಲಿದ್ದು, ಅದೇ ಕಾರಣದಿಂದ ಸೋನಿಯಾ ಗಾಂಧಿ ಬಯಕೆಯಂತೆ ಅವರು ರಾಜೀನಾಮೆ ನೀಡಬಹುದು ಎಂದು ಸ್ವಾಮಿ ಹೇಳಿದ್ದಾರೆ.
ಮುಂಬೈಯ ಉಪನಗರ ಬಾಂದ್ರಾಕ್ಕೆ ತೆರಳಿ, ಶಿವಸೇನಾ ವರಿಷ್ಠ ಬಾಳಾ ಠಾಕ್ರೆಯವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾವು ಸೋನಿಯಾ ಗಾಂಧಿ ಆಡುತ್ತಿರುವ 'ಆಟ'ವನ್ನು ಆಡುತ್ತಿಲ್ಲ ಎಂಬುದರ ಕುರಿತು ವಿಪಕ್ಷಗಳು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ನಿಮ್ಮ ಪ್ರಕಾರ ಜೆಪಿಸಿ ತನಿಖೆಗೆ ಪ್ರತಿಪಕ್ಷಗಳನ್ನು ಸೋನಿಯಾ ಗಾಂಧಿ ಒತ್ತಾಯಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, 'ಹೌದು, 2ಜಿ ಹಗರಣದಲ್ಲಿ ಪ್ರಧಾನ ಮಂತ್ರಿ ಹುದ್ದೆ ಕಳೆದುಕೊಳ್ಳುವಂತಾಗಲು ಆಕೆ ಪ್ರತಿಪಕ್ಷಗಳನ್ನು ಬಳಸಿಕೊಳ್ಳುತ್ತಿದ್ದಾರೆ' ಎಂದರು.
ಪ್ರತಿಪಕ್ಷಗಳು ಸೋನಿಯಾ ಆಡಿಸಿದಂತೆ ಕುಣಿಯುತ್ತಿವೆ ಎಂದು ನಿಮ್ಮ ಭಾವನೆಯೇ ಎಂದಾಗ, 'ಈ ಘಟ್ಟದಲ್ಲಿ ಪ್ರಧಾನ ಮಂತ್ರಿಯವರು ರಾಜೀನಾಮೆ ನೀಡುವ ಒತ್ತಡಕ್ಕೆ ಸಿಲುಕಿದರೆ, ಸೋನಿಯಾ ಗಾಂಧಿ ಪ್ರಬಲರಾಗುತ್ತಾರೆ. ಆಗ ಆಕೆ ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಯಾವುದೇ ಅಡೆತಡೆಗಳಿರುವುದಿಲ್ಲ' ಎಂದು ನೇರವಾಗಿ ಆರೋಪಿಸಿದರು.
ಠಾಕ್ರೆ ಜತೆಗಿನ ಭೇಟಿಯ ಕುರಿತು ಕೂಡ ಸ್ವಾಮಿ ವಿವರಣೆ ನೀಡಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ದೊಡ್ಡ ರ‌್ಯಾಲಿಯೊಂದನ್ನು ಸಂಘಟಿಸುವಂತೆ ನಾನು ಠಾಕ್ರೆಯವರನ್ನು ಒತ್ತಾಯಿಸಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಬಹುಶಃ ಈ ರ‌್ಯಾಲಿ ಶಿವಾಜಿ ಪಾರ್ಕಿನಲ್ಲಿ ನಡೆಯಲಿದೆ ಎಂದರು.
ದೇಶದ ಭ್ರಷ್ಟಾಚಾರಗಳ ಗಂಗೋತ್ರಿ (ಮೂಲ) ಸೋನಿಯಾ ಗಾಂಧಿಯಾಗಿದ್ದು, ಹಗರಣಗಳಿಂದ ದೇಶವನ್ನು ರಕ್ಷಿಸಿ ಮುನ್ನಡೆಸಬೇಕು ಎಂದು ಠಾಕ್ರೆಯವರಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.