ಕುಖ್ಯಾತ ಲಾಬಿಗಾರ್ತಿ ನೀರಾ ರಾಡಿಯಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ಪೇಜಾವರ ಸ್ವಾಮಿಯವರನ್ನು ಸುತ್ತಿಕೊಂಡಿದೆ. ಆದರೆ ತನಗೆ ರಾಡಿಯಾ ಜತೆ ಯಾವುದೇ ಸಂಬಂಧವಿಲ್ಲ, ನನ್ನನ್ನು ಪ್ರಕರಣದಲ್ಲಿ ವೃಥಾ ಎಳೆಯಲಾಗಿದೆ ಎಂದು ಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ರಾಡಿಯಾ ಜತೆ ಎನ್‌ಡಿಎ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಅನಂತ್ ಕುಮಾರ್ ಸಂಬಂಧ ಹೊಂದಿದ್ದರು. 2002ರಲ್ಲಿ ವಸಂತ್ ಕುಂಜ್‌ನಲ್ಲಿನ ರಾಡಿಯಾ ಅವರ ಟ್ರಸ್ಟ್‌ಗೆ ಎನ್‌ಡಿಎ ಸರಕಾರವು ಭಾರೀ ಪ್ರಮಾಣದ ಜಮೀನು ಮಂಜೂರು ಮಾಡಿತ್ತು. ಸ್ವತಃ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರು ಬಂದು ಇದಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು ಎಂದು ರಾಡಿಯಾ ಮಾಜಿ ಸಹಚರ ರಾವ್ ಧೀರಜ್ ಸಿಂಗ್ ಆರೋಪಿಸಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಬಿಜೆಪಿ, ಆ ಭೂಮಿ ಪೇಜಾವರ ಸ್ವಾಮಿ ಟ್ರಸ್ಟ್‌ಗೆ ಸೇರಿದ್ದಾಗಿದೆ ಮತ್ತು ಅದನ್ನು ನೀಡಿದ್ದು ಪಿ.ವಿ. ನರಸಿಂಹ ರಾವ್ ಸರಕಾರ. ಧೀರಜ್ ಸಿಂಗ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಡ್ವಾಣಿಯವರು ರಾಡಿಯಾರ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಈ ಸಂಬಂಧ ಜನತೆಯ ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದಿದೆ.
ಯಾವುದೇ ಸಂಬಂಧವಿಲ್ಲ: ಪೇಜಾವರ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಪ್ರಕರಣಕ್ಕೆ ತನ್ನನ್ನು ಎಳೆದು ತಂದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು, ನನಗೂ ರಾಡಿಯಾಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
'ಆಗಿನ ನಾಗರಿಕ ವಾಯುಯಾನ ಸಚಿವ ಅನಂತ್ ಕುಮಾರ್ ಅವರಿಗೆ ನೀರಾ ರಾಡಿಯಾರನ್ನು ಪರಿಚಯಿಸಿದ್ದು ನಾನಲ್ಲ. ರಾಡಿಯಾರನ್ನು ನನಗೆ ಪರಿಚಯಿಸಿದ್ದು ನನ್ನ ಭಕ್ತರೇ ಹೊರತು ಯಾವುದೇ ರಾಜಕೀಯ ಪಕ್ಷವಲ್ಲ'
'ದೆಹಲಿಯ ವಸಂತ್ ಕುಂಜ್‌ನಲ್ಲಿರುವ ನನ್ನ ಭೂಮಿಗೂ ರಾಡಿಯಾ ಟ್ರಸ್ಟ್‌ಗೂ ಯಾವುದೇ ಸಂಬಂಧವಿಲ್ಲ. ನನ್ನ ಭೂಮಿ ನೊಂದಾಯಿತ ಸಂಸ್ಥೆಯಾಗಿರುವ ರಾಮ ವಿಠಲ ಶಿಕ್ಷಣ ಸೇವಾ ಸಮಿತಿಗೆ ಸೇರಿದೆ. ಆ ಸಂಸ್ಥೆಗೆ ನಾನೇ ಅಧ್ಯಕ್ಷ. ಪಿ.ವಿ. ನರಸಿಂಹ ರಾವ್ ಪ್ರಧಾನ ಮಂತ್ರಿಯಾಗಿದ್ದಾಗ ಈ ಸಂಘಟನೆಗೆ ಅರ್ಧ ಎಕರೆ ಭೂಮಿಯನ್ನು ನೀಡಲಾಗಿತ್ತು. ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದಾಗ ಒಂದು ಎಕರೆ ನೀಡಲಾಗಿತ್ತು'
'ಆಗಿನ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರು ನನ್ನ ಆಹ್ವಾನದ ಮೇರೆಗೆ ಸಂಸ್ಥೆಯ ಶಂಕು ಸ್ಥಾಪನೆಗೆ ಆಗಮಿಸಿದ್ದರೇ ಹೊರತು, ರಾಡಿಯಾ ಪ್ರಭಾವದಿಂದ ಅಲ್ಲ'
ನನ್ನ ಬಗ್ಗೆ ಒಲವು ಹೊಂದಿರುವವರು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ. ಈ ದೇಶದ ಕಾನೂನು, ನೀತಿ-ನಿಯಮಗಳ ಅಡಿಯಲ್ಲಿ ರಾಮ ವಿಠಲ ಶಿಕ್ಷಣ ಸೇವಾ ಸಮಿತಿಗಾಗಿ ನಾನು ಸರಕಾರದಿಂದ ಭೂಮಿ ಪಡೆದುಕೊಂಡಿದ್ದೇನೆ. ವಿವಾದದಲ್ಲಿ ನನ್ನ ಹೆಸರನ್ನು ಥಳಕು ಹಾಕಿರುವುದು ತೀವ್ರ ನೋವನ್ನುಂಟು ಮಾಡಿದೆ ಎಂದು ಶ್ರೀಗಳು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.