ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರ್ಕರೆ ಕರೆಗೆ ದಾಖಲೆ ಇದೆ, ಈಗ ಕ್ಷಮೆ ಕೇಳಿ: ದಿಗ್ವಿಜಯ್
(Digvijay Singh | Mumbai Terror | 26 11 Attack | Hemanth Karkare | Terror | Hindu)
ಮುಂಬೈ ದಾಳಿ ನಡೆದ 2008ರ ನವೆಂಬರ್ 26ರಂದು ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ತಮಗೆ ದೂರವಾಣಿ ಮಾಡಿದ್ದಾರೆ ಎಂಬ ವಾದವನ್ನು ಪುಷ್ಟೀಕರಿಸಲು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮಂಗಳವಾರ ಪುರಾವೆಯನ್ನು ಮುಂದಿಟ್ಟಿದ್ದು, ತನ್ನ ಹೇಳಿಕೆಯನ್ನು ಸುಳ್ಳು ಎಂದು ಜರೆದ ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್.ಪಾಟೀಲ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆರ್.ಆರ್.ಪಾಟೀಲ್ ಅವರು ಎನ್‌ಸಿಪಿ ಸಚಿವರಾಗಿದ್ದು, ಈ ಹೇಳಿಕೆಯ ಮೂಲಕ ಮಹಾರಾಷ್ಟ್ರದ ಪಾಲುದಾರ ಪಕ್ಷ ಎನ್‌ಸಿಪಿ ಜೊತೆ ದಿಗ್ವಿಜಯ್ ನೇರ ತಿಕ್ಕಾಟಕ್ಕಿಳಿದಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿ ತಮ್ಮ "ಹಿಂದೂ-ಉಗ್ರವಾದ" ಎಂಬ ಆರೋಪಗಳನ್ನು ಸಮರ್ಥಿಸಿಕೊಂಡ ದಿಗ್ವಿಜಯ್ ಸಿಂಗ್, ಮುಂಬೈ ದಾಳಿಯಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳೊಂದಿಗಿನ ಹೋರಾಟದ ವೇಳೆ ಸಾಯುವ ಕೆಲವೇ ಗಂಟೆಗಳ ಮೊದಲು ತಮಗೆ ಕರ್ಕರೆ ಕರೆ ಮಾಡಿದ್ದರು ಎಂದು ಪುನರುಚ್ಚರಿಸಿದರು.
ಮಧ್ಯಪ್ರದೇಶ ಕಾಂಗ್ರೆಸ್ ಜೊತೆ ನೋಂದಾವಣೆಗೊಂಡಿರುವ ಮೊಬೈಲ್ ಫೋನಿಗೆ ಕರ್ಕರೆ ಅವರು ಎಟಿಎಸ್ ಕಚೇರಿಯ ಲ್ಯಾಂಡ್‌ಲೈನ್ ನಂಬರ್‌ನಿಂದ ಕರೆ ಮಾಡಿದ್ದರು ಎಂದ ಅವರು, ನಾನು ಹಿಂದೂ ಭಯೋತ್ಪಾದನೆ ವಿಷಯವನ್ನು ಎತ್ತಿದ್ದಕ್ಕಾಗಿ ನನ್ನ ಮೇಲೆ ಮುಗಿಬೀಳಲಾಗುತ್ತಿದೆ. ನಾನು ಕರ್ಕರೆ ಜತೆ ಮಾತನಾಡಿದ್ದೇನೆ ಎಂಬುದಕ್ಕೆ ಈಗ ನನ್ನ ಬಳಿ ದಾಖಲೆ ಇದೆ. ನನ್ನನ್ನು ದೇಶದ್ರೋಹಿ, ಪಾಕಿಸ್ತಾನಿ ಏಜೆಂಟ್, ಸುಳ್ಳುಗಾರ ಎಂದೆಲ್ಲಾ ಕರೆದವರೀಗ ಕ್ಷಮೆ ಕೇಳಬೇಕು ಎಂದಿದ್ದಾರೆ ದಿಗ್ವಿಜಯ್.
ಟೆಲಿಕಾಂ ಇಲಾಖೆ ತನ್ನ ಬಳಿ ಕರೆಯ ದಾಖಲೆಗಳಿಲ್ಲ ಎಂದು ಹೇಳಿದಾಗ ನಿರಾಶನಾಗಿದ್ದೆ, ಆದರೆ ಹೇಗೋ ಮಾಡಿ ದಾಖಲೆಗಳನ್ನು ಕಾಡಿಬೇಡಿ ಸಂಪಾದಿಸಿದ್ದೇನೆ. ಆ ದಿನ ಸಂಜೆ 5.44ಕ್ಕೆ ಕರೆ ಮಾಡಲಾಗಿರುವ ದಾಖಲೆ ಇದೆ ಎಂದರು.
ಈಗ ಭಯೋತ್ಪಾದನೆ ಕಡಿಮೆಯಾಗಲು ಕಾರಣ... ಹಿಂದೂ ಭಯೋತ್ಪಾದನಾ ಸಂಘಟನೆಗಳ ಸದಸ್ಯರನ್ನು ಬಂಧಿಸಿದ ಬಳಿಕ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿವೆ ಎಂದು ಘೋಷಿಸಿದರಲ್ಲದೆ, ಕಾಂಗ್ರೆಸ್ ಎಂದಿಗೂ ಭಯೋತ್ಪಾದನೆ ಜೊತೆ ರಾಜಿ ಮಾಡಿಕೊಂಡಿಲ್ಲ ಎಂದೂ ಸ್ಪಷ್ಟಪಡಿಸಿದರು.