ಸ್ವಾಮಿ ಅಸೀಮಾನಂದ್ ತಪ್ಪೊಪ್ಪಿಗೆ ನೀಡಿದ್ದಾರೆ ಎನ್ನುವುದು ಬಹಿರಂಗವಾದ ಬೆನ್ನಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರುವ ಕಾಂಗ್ರೆಸ್ ವಕ್ತಾರರು, ಆರೆಸ್ಸೆಸ್ ನಿಷೇಧಿಸುವಂತೆ ಆಗ್ರಹಿಸಿದ್ದಾರೆ.
ಆರೆಸ್ಸೆಸ್‌ನ ಭಯೋತ್ಪಾದನೆಯ ಮುಖ ಹೊರಗೆ ಬಂದಿದೆ. ಈ 'ಸಂಘಿ' ಭಯೋತ್ಪಾದನೆ ದೇಶಕ್ಕೆ ಬಹುದೊಡ್ಡ ಬೆದರಿಕೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆರೆಸ್ಸೆಸನ್ನು ನಿಷೇಧಿಸುವುದು ಅಥವಾ ವಿಸರ್ಜಿಸುವ ನಿರ್ಧಾರಕ್ಕೆ ಸರಕಾರ ಬರಬೇಕು ಎಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹ್ಮದ್ ಒತ್ತಾಯಿಸಿದರು.
ಸಿಬಿಐ ವಿರುದ್ಧ ಆರೆಸ್ಸೆಸ್ ವಾಗ್ದಾಳಿ... ಸ್ವಾಮಿ ಅಸೀಮಾನಂದರ ತಪ್ಪೊಪ್ಪಿಗೆ ಹೇಳಿಕೆಯನ್ನು ಸಿಬಿಐ ಉದ್ದೇಶಪೂರ್ವಕವಾಗಿ ಬಹಿರಂಗ ಮಾಡುತ್ತಿದೆ ಎಂದು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಆರೋಪಿಸಿದ್ದಾರೆ.
ತನಿಖಾ ಸಂಸ್ಥೆಗಳ ಹಿತಾಸಕ್ತಿ, ಸಂಘಟನೆಗಳ (ಆರೆಸ್ಸೆಸ್) ಮತ್ತು ವ್ಯಕ್ತಿಗಳ ಹೆಸರಿಗೆ ಮಸಿ ಬಳಿಯುವುದುಗಾಗಿದೆ ಎನ್ನುವುದು ಈ ರೀತಿಯಾಗಿ ಉದ್ದೇಶ ಪೂರ್ವಕವಾಗಿ ದಾಖಲೆಗಳನ್ನು ಬಹಿರಂಗಪಡಿಸುತ್ತಿರುವುದರಿಂದ ಸಾಬೀತಾಗಿದೆ. ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ ಎಂದರು.
ಇದು ಕಾಂಗ್ರೆಸ್ ಕುತಂತ್ರ: ಬಿಜೆಪಿ ಆರೆಸ್ಸೆಸ್‌ನ ನಿರ್ದಿಷ್ಟ ನಾಯಕರನ್ನು ಗುರಿ ಮಾಡಿಕೊಂಡು ಸಿಬಿಐ ಆಯ್ದ ದಾಖಲೆಗಳನ್ನು ಬಹಿರಂಗಪಡಿಸುತ್ತಿರುವುದು ತೀವ್ರ ಖಂಡನೀಯ. ಸಿಬಿಐ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಆರೆಸ್ಸೆಸ್ ನಾಯಕರನ್ನು ಭಯೋತ್ಪಾದನೆಯ ಪ್ರಕರಣಗಳಲ್ಲಿ ಸಿಲುಕಿಸುತ್ತಿದೆ. ಇದರ ಹಿಂದೆ ಇರುವುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಯಾವುದೇ ಹೆಸರನ್ನು ಉಲ್ಲೇಖಿಸದೆ ಪ್ರತಿಕ್ರಿಯಿಸಿದ ಅವರು, ತನಿಖಾ ಸಂಸ್ಥೆಯ ಬಲವಂತದಿಂದ ತಪ್ಪೊಪ್ಪಿಗೆ ಹೇಳಿಕೆಗಳನ್ನು ಪಡೆದುಕೊಳ್ಳಲಾಗುತ್ತಿದೆ. ಆದರೆ ದಾಳಿ ಮಾಡುವುದು ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ ಮೇಲೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದು ಸೋನಿಯಾ ಕುತಂತ್ರ: ವಿಎಚ್‌ಪಿ ಹಿಂದೂ ಸಂಘಟನೆಗಳ ವಿರುದ್ಧ ಭಯೋತ್ಪಾದನೆ ಆರೋಪಗಳು ಕೇಳಿ ಬರುತ್ತಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಾಲ್, ಇದು ಸೋನಿಯಾ ಗಾಂಧಿ ಸೃಷ್ಟಿಸುತ್ತಿರುವ ಕಟ್ಟುಕತೆ ಎಂದು ಲೇವಡಿ ಮಾಡಿದ್ದಾರೆ.
ಗೋವಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು ಹಿಂದೂ ಸಂತರು, ಆರೆಸ್ಸೆಸ್ ಮತ್ತು ಇತರ ಹಿಂದೂ ಸಂಘಟನೆಗಳನ್ನು ಹಿಂದೂ ಭಯೋತ್ಪಾದಕರು ಅಥವಾ ಭಯೋತ್ಪಾದಕ ಸಂಘಟನೆಗಳು ಅಥವಾ ಕೇಸರಿ ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ಸೋನಿಯಾ ಗಾಂಧಿ ಪಿತೂರಿ ಎಂದು ಆರೋಪಿಸಿದರು.