ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಗುಜರಾತ್ ಸ್ತುತಿ ಸರಿ; ದಿಯೋಬಂದ್‌ಗೆ ರಾಜೀನಾಮೆ (Gujarat | Narendra Modi | Deoband | Maulana Mohammad Ghulam Vastanvi)
Bookmark and Share Feedback Print
 
ದಿಯೋಬಂದ್ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ಉಪಕುಲಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಮೌಲಾನಾ ಗುಲಾಮ್ ಮೊಹಮ್ಮದ್ ವಸ್ತಾನ್ವಿ, ನಾನು ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕ್ಷಮಿಸಿದ್ದೇನೆ ಅಥವಾ ಅವರೊಬ್ಬ ಶ್ರೇಷ್ಠ ವ್ಯಕ್ತಿ ಎಂದು ಹೇಳಿಲ್ಲ. ಆದರೆ ಗುಜರಾತಿನ ಜನತೆ ಮೋದಿಯವರ ಪರವಾಗಿದ್ದಾರೆ. ಅಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಹೌದು ಎಂದು ತನ್ನ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

ಸಂಬಂಧಪಟ್ಟ ಸುದ್ದಿಗಳು:
** ಮೋದಿ ಗುಜರಾತಿಗೆ ಮುಸ್ಲಿಮರ ಪರಮೋಚ್ಚ ಸಂಸ್ಥೆ ಮೆಚ್ಚುಗೆ
** ನರೇಂದ್ರ ಮೋದಿ ವಿವಾದ; ದಿಯೋಬಂದ್ ಮುಖ್ಯಸ್ಥ ಪದತ್ಯಾಗ?

ಇತ್ತೀಚೆಗಷ್ಟೇ ಅವರು ದಿಯೋಬಂದ್ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡ ನಂತರ ಮೋದಿ ಪರವಾಗಿ ಹೇಳಿಕೆ ನೀಡಿದ್ದಾರೆಂದು ವಿದ್ಯಾರ್ಥಿಗಳು ಮತ್ತು ಇತರ ಕೆಲವು ಮುಖಂಡರು ಭಾರೀ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಸ್ತಾನ್ವಿ ರಾಜೀನಾಮೆ ನೀಡಿದ್ದಾರೆ. ಆದರೆ ಇದಕ್ಕೆ ಒತ್ತಡ ಕಾರಣ ಎಂಬುದನ್ನು ಅವರು ನಿರಾಕರಿಸಿದ್ದಾರೆ.

ನಾನು ದಿಯೋಬಂದ್‌ಗೆ ರಾಜೀನಾಮೆ ನೀಡಬೇಕೆಂದು ಬಲವಂತ ಮಾಡಲಾಗುತ್ತಿದೆ ಎಂಬ ಅನುಭವ ನನಗೆ ಬಂದಿರುವುದು ಹೌದು. ಆದರೆ ನಾನು ರಾಜೀನಾಮೆ ನೀಡಿರುವುದರ ಹಿಂದೆ ಒತ್ತಡವಿಲ್ಲ. ಮೋದಿ ಬಗ್ಗೆ ನೀಡಿರುವ ಹೇಳಿಕೆಗಳ ಕುರಿತು ಕೂಡ ವಿಷಾದವಿಲ್ಲ ಎಂದು ತಿಳಿಸಿದ್ದಾರೆ.

ಗುಜರಾತಿನ ಸೂರತ್ ಮೂಲದವರಾಗಿರುವ ವಸ್ತಾನ್ವಿ ಜನವರಿ 10ರಂದು ದಿಯೋಬಂದ್ ಉಪ ಕುಲಪತಿಯಾಗಿ ನೇಮಕಗೊಂಡಿದ್ದರು. ಆದರೆ ಗುಜರಾತ್ ಮುಖ್ಯಮಂತ್ರಿಯನ್ನು ಹೊಗಳಿದ್ದಕ್ಕೆ ದಿಯೋಬಂದ್ ವಿದ್ಯಾರ್ಥಿಗಳಿಂದ ತೀವ್ರ ಪ್ರತಿರೋಧ ಎದುರಿಸಬೇಕಾಗಿತ್ತು.

'ಗುಜರಾತಿನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳಿಗೆ ನರೇಂದ್ರ ಮೋದಿ ಕಾರಣರಾಗಿರುವುದರಿಂದ, ಅಲ್ಲಿನ ಜನತೆ ಅವರ ಪರವಾಗಿದ್ದಾರೆ. ಖಚಿತವಾಗಿ ಗುಜರಾತ್ ಪ್ರಗತಿ ಪಥದಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಜತೆಯಾಗಿ ಬಾಳುತ್ತಿದ್ದಾರೆ. ನನ್ನ ಹೇಳಿಕೆಯಲ್ಲಿ ನಾನು ಎಲ್ಲೂ ಕೂಡ ಮೋದಿಯವರನ್ನು ಕ್ಷಮಿಸಿದ್ದೇನೆ ಅಥವಾ ಅವರೊಬ್ಬ ಶ್ರೇಷ್ಠ ವ್ಯಕ್ತಿ ಎಂದು ಹೇಳಿಲ್ಲ. ಅವರು ಏನು ಮಾಡಿದ್ದಾರೋ, ಅದನ್ನು ವಿಶ್ವವೇ ಕ್ಷಮಿಸಿಲ್ಲ. ಹಾಗಿರುವಾಗ ಮೋದಿ ಪರಿಶುದ್ಧ ವ್ಯಕ್ತಿ ಎಂದು ಹೇಳಲು ನಾನು ಯಾರು?' ಎಂದು ವಸ್ತಾನ್ವಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ವಸ್ತಾನ್ವಿಯವರು ರಾಜೀನಾಮೆ ಸಲ್ಲಿಸಿರುವುದು ಹೌದಾದರೂ, ಅದು ಇನ್ನೂ ಸ್ವೀಕೃತಗೊಂಡಿಲ್ಲ. ಇದೇ ಫೆಬ್ರವರಿ 15ರಂದು ನಡೆಯಲಿರುವ ದಾರುಲ್ ಉಲೂಮ್ ಆಡಳಿತ ಮಂಡಳಿ 'ಮಜ್ಲಿಸ್-ಇ-ಶೂರ್' ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಹಲವು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಎಂಬಿಎ ಪದವೀಧರ ಹಾಗೂ ಉದ್ಯಮಿಯಾಗಿರುವ ವಸ್ತಾನ್ವಿ ದಿಯೋಬಂದ್‌ಗೆ ರಾಜೀನಾಮೆ ನೀಡಿರುವುದು ದುರದೃಷ್ಟಕರ. ಅವರು ಆ ಹುದ್ದೆಯಲ್ಲಿ ಮುಂದುವರಿಯುತ್ತಿದ್ದರೆ, ಮುಸ್ಲಿಂ ಸಮಾಜಕ್ಕೆ ಹೆಚ್ಚಿನ ಕೊಡುಗೆ ಸಿಗುತ್ತಿತ್ತು ಎಂದು ಹಲವು ಮುಸ್ಲಿಂ ನಾಯಕರು ಹೇಳಿಕೊಂಡಿದ್ದಾರೆ.

ವಸ್ತಾನ್ವಿ ಅವರ ಸಂಪನ್ಮೂಲಗಳು ಮತ್ತು ಅನುಭವಗಳಿಂದ ಸಂಸ್ಥೆಗೆ ಹೆಚ್ಚಿನ ಲಾಭವಾಗುತ್ತಿತ್ತು. ಅವರನ್ನು ಕೆಲಸ ಮಾಡಲು ಬಿಡದೇ ಇರುವುದು ದುರದೃಷ್ಟಕರ. ಅವರ ವಿರುದ್ಧ ದಾಳಿ ನಡೆಸಿರುವುದು ಮೋದಿಯ ಹೊಗಳಿಕೆಗಲ್ಲ, ಗುಜರಾತ್ ಪ್ರಗತಿಯ ಬಗ್ಗೆ ಅವರು ನೀಡಿರುವ ಹೇಳಿಕೆಗೆ. ಅವರು ಹೇಳಿಕೆ ನೀಡಿರುವುದು ದಿಯೋಬಂದ್ ಮುಖ್ಯಸ್ಥರಾಗಿ ಅಲ್ಲ, ಓರ್ವ ಗುಜರಾತ್ ನಿವಾಸಿಯಾಗಿ. ಅವರ ವಿರುದ್ಧ ಪಿತೂರಿ ನಡೆಸಲಾಗಿದೆ ಎಂಬ ಸಂಶಯವೂ ಇದೆ ಎಂದು ದಿಯೋಬಂದ್ ಉಪ ಮುಖಂಡ ಮೌಲಾನಾ ಅಬ್ದುಲ್ ಖಾಲಿಫ್ ಮದ್ರಾಸಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ