ಇಲ್ಲಿನ ರತ್ನವರ್ಮ ಕ್ರೀಡಾಂಗಣದ ತುಳುನಾಡ ಸಿರಿ ದೊಂಪದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ರೂಪಿಸಿದ ವೇದಿಕೆಯಲ್ಲಿ ಕಳೆದ ನಾಲ್ಕು ದಿನಗಳ ಕಾಲ ನಡೆದ ವರ್ಣರಂಜಿತ ವಿಶ್ವ ತುಳು ಸಮ್ಮೇಳನ ಭಾನುವಾರ ತೆರೆ ಕಂಡಿದೆ.
50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕರಾವಳಿಯಲ್ಲಿ ಪ್ರತಿಯೊಂದು ಜಾತಿ ವರ್ಗಗಳಲ್ಲಿ ಆಡು ಭಾಷೆ ಮತ್ತು ಸಂಪರ್ಕ ಭಾಷೆಯಾಗಿರುವ, ಸಮೃದ್ಧ ಸಾಹಿತ್ಯ ಪರಂಪರೆ , 2500 ವರ್ಷಗಳ ಪ್ರಾಚೀನತೆ ಇರುವ ತುಳು ಭಾಷೆಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ನೀಡಬೇಕು ಎಂಬುದು ಸೇರಿದಂತೆ 18 ನಿರ್ಣಯಗಳನ್ನು ಮುಕ್ತಾಯವಾದ ವಿಶ್ವ ತುಳು ಸಮ್ಮೇಳನದಲ್ಲಿ ಅಂಗೀಕರಿಸಲಾಗಿದೆ.
ಅಲ್ಪಸಂಖ್ಯಾತ ಭಾಷೆಗಳ ಅಭಿವೃದ್ಧಿಗೆ ಕೊಡುವ ಎಲ್ಲಾ ಸೌಲಭ್ಯ, ಅನುದಾನಗಳನ್ನು ತುಳು ಭಾಷೆಗೆ ಕೊಡಬೇಕು. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡು ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಮಂಗಳೂರು ರೈಲು ನಿಲ್ದಾಣವನ್ನು ಸುಸಜ್ಜಿತ ನಿಲ್ದಾಣವಾಗಿ ಪರಿವರ್ತಿಸಿ ಪ್ರತ್ಯೇಕ ರೈಲ್ವೆ ವಿಭಾಗವಾಗಿ ಘೋಷಿಸಬೇಕು ಎಂದೂ ನಿರ್ಣಯ ಅಂಗೀಕರಿಸಲಾಯಿತು. ಪ್ರವಾಸೋದ್ಯಮ ಅಭಿವೃದ್ದಿ, ಕೃಷಿ ಹಾಗೂ ಹಾಲು ಉತ್ಪನ್ನಗಳಿಗೆ ಬೆಂಬಲ ಬೆಲೆ, ಕರಾವಳಿ ಜಿಲ್ಲೆಗಳ ರಸ್ತೆಗಳ ಅಭಿವೃದ್ದಿ, ಮೀನುಗಾರಿಕಾ ಬಂದರುಗಳ ಅಭಿವೃದ್ದಿ ಸೇರಿದಂತೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಅಧ್ಯಯನ ಕೇಂದ್ರ ಸೇರಿದಂತೆ ನೇತ್ರಾವತಿ ನದಿ ತಿರುವು ಕೈ ಬಿಡುವುದನ್ನು ಇದೇ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಗುರುವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವತುಳು ಸಮ್ಮೇಳನಕ್ಕೆ ಚಾಲನೆ ನೀಡಿದ್ದರು. ಸಮ್ಮೇಳನದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವಹಿಸಿದ್ದರು. ನಾಲ್ಕು ದಿನಗಳ ಕಾಲ ನಡೆದ ವಿಶ್ವತುಳು ಸಮ್ಮೇಳನದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು.