ವಿಶ್ವ ತುಳು ಸಮ್ಮೇಳನದ ಎರಡನೇ ದಿನವಾದ ಶುಕ್ರವಾರ ಉಜಿರೆ ಫುಲ್ ರಶ್ ಆಗಿತ್ತು. ಎಲ್ಲಿ ನೋಡಿದರೂ ಜನವೋ ಜನ. ಖಾಲಿ ಬಸ್ ಬಂದು ನಿಂತ ಎರಡೇ ನಿಮಿಷದಲ್ಲಿ ಬಸ್ ಫುಲ್. ಉಜಿರೆ ಹಿಂದೆಂದೂ ಕಂಡಿರದ ಜನಸಾಗರ ಪೇಟೆಯಲ್ಲಿ ಹರಿದು ಬಂತು. ಮಧ್ಯಾಹ್ನದ ಹೊತ್ತು ಪೊಲೀಸರಂತೂ ವಾಹನ ದಟ್ಟಣೆ ನಿಯಂತ್ರಿಸಲು ಹರಸಾಹಸ ಪಟ್ಟರು.
ಅಟಿಲ್ದ್ ಅರಗಣೆ, ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ ಎಲ್ಲಿ ನೋಡಿದರೂ ಜನ ಸಂದಣಿಯೇ. ಕಾಲು ದಾರಿಯಲ್ಲಿ ನಡೆಯೊದು ಕಷ್ಟವೆನಿಸುವ ಸ್ಥಿತಿ ನಿರ್ಮಾಣವಾಗಿತ್ತು. ಸಮ್ಮೇಳನದ ಸುತ್ತ ಮುತ್ತಲಿನ ಜಾಗಗಳಲ್ಲಿ ಧೂಳು ತಡೆಯಲು ನೀರು ಸುರಿಸುತ್ತಿದ್ದರೂ ಕ್ಷಣ ಮಾತ್ರದಲ್ಲೇ ಅದು ಇಂಗಿ ಹೋಗುತ್ತಿತ್ತು. ಮಾಹಿತಿ ಕೇಂದ್ರದ ಮೈಕ್ ಅಂತೂ ಇ...ವರು ಎಲ್ಲಿದ್ದರೂ ವೇದಿಕೆಯ ಬಳಿ ಬನ್ನಿ... ನಿಮಗಾಗಿ ಇಲ್ಲಿ ಕಾಯುತ್ತಿದ್ದಾರೆ...ಎಂದು ಕೂಗುತ್ತಿದ್ದು ಕೇಳಿ ಬರುತ್ತಿತ್ತು. ನಿಮ್ಮ ಅಮೂಲ್ಯ ವಸ್ತುಗಳ ಕಡೆಗೆ, ಮಕ್ಕಳ ಕಡೆ ಗಮನವಿರಲಿ ಎಂಬ ಸೂಚನೆಯೂ ಅಲ್ಲಿತ್ತು. ಜಾತಿ-ಭೇದ ಮರೆತು ಎಲ್ಲಾ ಧರ್ಮದ ಜನರೂ ಅಲ್ಲಿದ್ದರು.
ಇಷ್ಟು ಜನ ಸಂದಣಿಗೆ ಸೋತದ್ದು ಊಟದ ಚಪ್ಪರ ಮಾತ್ರ. ಸಮಿತಿಯ ನಿರೀಕ್ಷೆಯಂತೆ ಸುಮಾರು ಐವತ್ತು ಸಾವಿರ ಜನ ಬರುವ ಲೆಕ್ಕಚಾರವಿತ್ತು. ಆದರೆ ಊಟ ಮಾಡಿದ ಜನ ಮಾತ್ರ ಬರೋಬ್ಬರಿ ಒಂದು ಕಾಲು ಲಕ್ಷ. ಆದರೂ ಹೆಚ್ಚಿನ ಜನ ಊಟ ಮಾಡದೇ ಹತ್ತಿರದ ಹೊಟೇಲ್‌ಗಳ ಕದ ತಟ್ಟಿದ್ದರು. ಆದರೆ ಅಲ್ಲೂ ಊಟ ಖಾಲಿಯಾಗಿತ್ತು!
ಮಳಿಗೆಗಳಲ್ಲಿ ವ್ಯಾಪಾರವಂತೂ ಭರ್ಜರಿಯಾಗಿತ್ತು. ಪ್ರದರ್ಶನಗಳ ಪ್ರವೇಶ ದ್ವಾರಗಳಲ್ಲಿ ಸ್ವಯಂ ಸೇವಕರು ಜನಜಂಗುಳಿ ನಿಯಂತ್ರಿಸಲು ಬೆವರು ಸುರಿಸಿದರು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಆಗಮಿಸಲಿದ್ದರಿಂದ ನಿರೀಕ್ಷೆಯಂತೆ ರಾತ್ರಿ ಹೊತ್ತೂ ಜನ ಸಂದಣಿ ಹಾಗೇ ಇತ್ತು. ಬಸ‌್‌ಗಳ ಸಂಚಾರವೂ ಸಾಕಷ್ಟು ಸಂಖ್ಯೆಯಲ್ಲಿತ್ತು. ಜನ ಸಂದಣಿಯಲ್ಲಿ ಹಲವರು ತಮ್ಮ ಪರ್ಸ್‌ಗಳನ್ನು ಕಳಕೊಂಡಿದ್ದೂ ಆಯ್ತು. ಸಾವಿರಾರು ರೂ. ದುಡ್ಡು ಕಳಕೊಂಡವರೂ ಇದ್ದರು. ತುಳು ಸಮ್ಮೇಳನ ಅದ್ದೂರಿಯ ನಡುವೆ ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.