ಉದ್ಯಾನನಗರಿಯಲ್ಲಿ 2008ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಳಷ್ಟು ನಾಟಕೀಯ ಬೆಳವಣಿಗೆಯ ನಂತರ ರಾಜ್ಯದ ಪೊಲೀಸರು ಪಿಡಿಪಿ ಮುಖಂಡ ಅಬ್ದುಲ್ ನಾಸಿರ್ ಮದನಿಯನ್ನು ಬಂಧಿಸಿದ್ದು, ಮಂಗಳವಾರ ರಾತ್ರಿ ನಗರಕ್ಕೆ ಕರೆ ತರಲಾಯಿತು.
ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಮದನಿಯನ್ನು ರಾತ್ರಿ 9.30ರ ಸುಮಾರಿಗೆ ಬೆಂಗಳೂರಿಗೆ ಕರೆತಂದರು. ನಂತರ ಅಧಿಕಾರಿಗಳು ಮದನಿಯನ್ನು ಕೋರಮಂಗಲದ ಒಂದನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಧೀಶ ವೆಂಕಟೇಶ್ ಹುಲಗಿ ಅವರ ನಿವಾಸದಲ್ಲಿ ಹಾಜರುಪಡಿಸಿದರು.
ಬಾಂಬ್ ಸ್ಫೋಟದಲ್ಲಿ ಮದನಿ ಕಾಲೊಂದನ್ನು ಕಳೆದುಕೊಂಡಿದ್ದು, ಆತನನ್ನು ತಳ್ಳು ಕುರ್ಚಿಯಲ್ಲಿ ಕರೆ ತಂದಿದ್ದರು. ನಂತರ ನ್ಯಾಯಾಧೀಶರು ಮನೆಯಿಂದ ಹೊರಬಂದು ಮದನಿ ವಿಚಾರಣೆ ನಡೆಸಿ, ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದರು.
ಮದನಿ ಮಂಗಳವಾರ ತಾನು ನ್ಯಾಯಾಲಯ ಮುಂದೆ ಶರಣಾಗುವುದಾಗಿ ತಿಳಿಸಿದ್ದ. ಆದರೆ ಮದನಿಯ ಬಂಧನಕ್ಕಾಗಿ ಕಾದು ಕುಳಿತಿದ್ದ ಕರ್ನಾಟಕ ಪೊಲೀಸರು ಅನ್ವರ್‌ಶೇರಿಯ ಮದರಸಾ ಕಾಂಪ್ಲೆಕ್ಸ್ ಬಳಿ ಮಂಗಳವಾರ ಮಧ್ಯಾಹ್ನ ನಾಟಕೀಯ ರೀತಿಯಲ್ಲಿ ಸೆರೆ ಹಿಡಿದಿದ್ದರು. ನಂತರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತಿರುವನಂತಪುರದಿಂದ ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ ಕರೆ ತರಲಾಯಿತು.
ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಗಳೂರು ಪೊಲೀಸರು ಸಲ್ಲಿಸಿದ್ದ ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಮದನಿಯನ್ನು 31ನೇ ಆರೋಪಿಯಾಗಿ ಉಲ್ಲೇಖಿಸಲಾಗಿತ್ತು. ಶಂಕಿತ ಲಷ್ಕರ್ ಎ ತೊಯ್ಬಾ ಸಂಘಟನೆಯ ಟಿ.ನಾಸೀರ್ ಬೆಂಗಳೂರು ಸ್ಫೋಟದಲ್ಲಿ ಮದನಿ ಕೈವಾಡ ಇತ್ತು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ.
ಆ ನಿಟ್ಟಿನಲ್ಲಿ ಮದನಿ ವಿರುದ್ಧ ಜೂನ್ 11ರಂದು ಜಾಮೀನು ರಹಿತ ವಾರಂಟ್ ಜಾರಿಗೊಳಿಸಲಾಗಿತ್ತು. ಅಲ್ಲದೆ, ಮದನಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರಾಜ್ಯ ಹೈಕೋರ್ಟ್ ಕಳೆದ ವಾರ ವಜಾ ಮಾಡಿದ ನಂತರ ಬಂಧನ ಅನಿವಾರ್ಯವಾಗಿತ್ತು. ಆತ ನೆಲೆಸಿದ್ದ ಕೊಲ್ಲಂ ಜಿಲ್ಲೆಯ ಅನ್ವಶ್ಶೇರಿಗೆ ರಾಜ್ಯ ಪೊಲೀಸರ ತಂಡ ತೆರಳಿತ್ತು. ಸ್ವಾತಂತ್ರ್ಯೋತ್ಸವ ಹಾಗೂ ಕೇರಳಕ್ಕೆ ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಬಂಧನ ತಡವಾಗಿತ್ತು. ನಂತರ ಆರೋಗ್ಯ ಸರಿಯಿಲ್ಲ, ತಾನೇ ಶರಣಾಗುವುದಾಗಿ ಹೇಳಿಕೆ ನೀಡುವ ಮೂಲಕ ಮದನಿ ಬಂಧನ ತಿರುವು ಪಡೆಯುತ್ತಿತ್ತು. ಕೊನೆಗೂ ರಾಜ್ಯದ ಪೊಲೀಸರು ನಾಟಕೀಯ ಬೆಳವಣಿಗೆಯಲ್ಲಿ ಮದನಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಏತನ್ಮಧ್ಯೆ ಮದನಿ ಬಂಧನ ವಿಳಂಬವಾಗುತ್ತಿರುವುದಕ್ಕೆ ಗೃಹ ಸಚಿವ ವಿ.ಎಸ್.ಆಚಾರ್ಯ ಕೇರಳ ಸರಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಮದನಿಯನ್ನು ಮಂಗಳವಾರ ಮಧ್ಯಾಹ್ನ 3 ಗಂಟೆಯೊಳಗೆ ಶರಣಾಗುವಂತೆ ಒಪ್ಪಿಸಬೇಕು. ಇಲ್ಲದಿದ್ದರೆ ರಾಜ್ಯದ ಪೊಲೀಸರೇ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.