ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ 'ಸೆಕ್ಯುಲರ್' ಅಬ್ದುಲ್ ನಾಸಿರ್ ಮದನಿ ಯಾರು ಗೊತ್ತಾ?
(Abdul Nasser Madani | Lashkar-e-Toiba | Peoples Democratic Party | Sufiya Madani)
ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೂ ಕೆಲಕ್ಷಣ ಮೊದಲು ಕೊಯಂಬತ್ತೂರಿನಲ್ಲಿ ನಡೆದ ಬಾಂಬ್ ಸ್ಫೋಟ, ಹಿಂದೂಗಳ ವಿರುದ್ಧ ಪ್ರಚೋದನಾಕಾರಿ ಭಾಷಣ, ಬೆಂಗಳೂರು ಸರಣಿ ಸ್ಫೋಟ, ಲಷ್ಕರ್ ಇ ತೋಯ್ಬಾ ಭಯೋತ್ಪಾದನಾ ಸಂಘಟನೆಯ ಜತೆ ಸಂಬಂಧ, ಮುಸ್ಲಿಂ ರಾಷ್ಟ್ರದ ಕನಸು -- ಇವೇ ಇದೀಗ ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿರುವ ಅಬ್ದುಲ್ ನಾಸಿರ್ ಮದನಿ ಎಂಬ ಅಪ್ಪಟ ಮೂಲಭೂತವಾದಿಯ ಸಿಂಪಲ್ ಜಾತಕ.
ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ಹೆಸರು ಕೇಳಿ ಬಂದ ನಂತರ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದರಿಂದ ಬಂಧನಕ್ಕೆ ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಬಂದಿದ್ದ ಮದನಿಯನ್ನು ಕೊನೆಗೂ ಮಂಗಳವಾರ ಬಂಧಿಸಲಾಗಿದೆ. ಕೇರಳದ ಕೊಲ್ಲಂನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಂಬುಲೆನ್ಸ್‌ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸೆರೆ ಹಿಡಿಯಲಾಗಿದೆ. ಇಂತಿಪ್ಪ ಮದನಿಯ ಬರ್ಬರ ಇತಿಹಾಸವನ್ನು ತಿಳಿದುಕೊಳ್ಳುವ ಕುತೂಹಲವನ್ನು ತಣಿಸುವ ಯತ್ನವಿದು.
PTI
1965ರಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಸಾಸ್ತಾಂಕೋಟಾದಲ್ಲಿನ ಅನ್ವರಶ್ಯೇರಿ ಎಂಬಲ್ಲಿ 1965ರಲ್ಲಿ ಜನಿಸಿದ್ದ ಅಬ್ದುಲ್ ನಾಸಿರ್ ಮದನಿ, ಆರಂಭದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮುಂತಾದ ಹಿಂದೂ ಸಂಘಟನೆಗಳ ವಿರುದ್ಧ ಕಿಡಿ ಕಾರುತ್ತಾ ಬಂದವನು. ಅದರಂತೆ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಸಂಚಿನಲ್ಲೂ ಆತ ಭಾಗಿಯಾಗಿದ್ದಾನೆ ಎಂದು ಇತ್ತೀಚಿನ ದಿನಗಳಲ್ಲಿ ಆರೋಪ ಎದುರಿಸುತ್ತಿದ್ದಾನೆ.
ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ತನ್ನ ಹೆಸರನ್ನು ಥಳಕು ಹಾಕಿಸಿಕೊಂಡಿದ್ದರೂ, ಜನ ಬೆಂಬಲ ಕಡಿಮೆಯಾಗಿಲ್ಲ. ಕಳೆದೆರಡು ದಶಕಗಳಿಂದ ಕೇರಳದ ಪ್ರಮುಖ ಮುಸ್ಲಿಂ ನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದಾನೆ, ರಾಜಕೀಯವಾಗಿಯೂ ಪ್ರಭಾವಶಾಲಿ ಎಂದು ಗುರುತಿಸಲ್ಪಟ್ಟಿದ್ದಾನೆ.
ಭಯೋತ್ಪಾದನೆ ನಂಟು... ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಲಷ್ಕರ್ ಇ ತೋಯ್ಬಾ ಜತೆ ಮದನಿ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸುತ್ತಾ ಬರಲಾಗಿದೆ. ಆದರೆ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದ ಆತನ ವಿರುದ್ಧದ ಆರೋಪಗಳು ಬಿದ್ದು ಹೋಗುತ್ತಿವೆ.
ಅಯೋಧ್ಯೆ ಶ್ರೀರಾಮ ಮಂದಿರ ಸ್ಥಳದಲ್ಲಿದ್ದ ಬಾಬ್ರಿ ಮಸೀದಿ ಕರಸೇವಕರಿಂದ ಧ್ವಂಸಗೊಂಡ ಬಳಿಕ ಮದನಿ 1992ರಲ್ಲಿ 'ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ' (ಪಿಡಿಪಿ) ಎಂಬ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತಂದಿದ್ದ. ಪಕ್ಷದತ್ತ ಜನರನ್ನು ತನ್ನತ್ತ ಸೆಳೆಯಲು ಆತ ಬಳಸಿದ ಅಸ್ತ್ರ 'ಮುಸ್ಲಿಂ'.
ಮುಸ್ಲಿಮರನ್ನು ಒಗ್ಗೂಡಿಸಿ, ಒಂದೇ ವೇದಿಕೆಗೆ ಕರೆ ತರುವ ಸಲುವಾಗಿ ಅಲ್ಲಲ್ಲಿ ಸಭೆಗಳನ್ನು ನಡೆಸುತ್ತಾ, ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಾ ಬಂದ ಮದನಿ ಈ ನಡುವೆ ಹಲವು ಪ್ರಕರಣಗಳಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದ.
ಆರೆಸ್ಸೆಸ್‌ಗೆ ಪ್ರತಿಸ್ಪರ್ಧೆ.... ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ನಾಯಕರು ಮುಸ್ಲಿಂ ಸಮುದಾಯದ ವಿರುದ್ಧ ಭಾಷಣಗಳನ್ನು ಮಾಡುತ್ತಿದ್ದಾಗ ಕುದಿಯುತ್ತಿದ್ದ ಮದನಿ ಅದನ್ನು ಎದುರಿಸಲು ಅಸ್ತಿತ್ವಕ್ಕೆ ಸಂದ ಸಂಘಟನೆ 'ಇಸ್ಲಾಮಿಕ್ ಸೇವಕ ಸಂಘ'.
ತನ್ನ ಇಸ್ಲಾಮಿಕ್ ಸೇವಕ ಸಂಘದ (ಐಎಸ್ಸೆಸ್) ಮೂಲಕ ಆರೆಸ್ಸೆಸ್ ಏನು ಮಾಡುತ್ತಿದೆಯೋ, ಅದೇ ರೀತಿಯಲ್ಲಿ ಕೇರಳದಲ್ಲೂ ಕಾರ್ಯಾಚರಣೆ ಆರಂಭಿಸಿತು. ಸಂಘದ ಶಾಖೆಗಳು, ಶಾಲೆಗಳು ಹಲವರ ಗಮನ ಸೆಳೆದವು. ಜತೆಗೆ ಮದನಿ ಪ್ರಚೋದನಾಕಾರಿ ಭಾಷಣಗಳೂ ಬಳಲಿದ್ದ ಮುಸ್ಲಿಮರಿಗೆ ಸಂತಸ ನೀಡಿತ್ತು.
ಇದು ಆರೆಸ್ಸೆಸ್ ಮತ್ತು ಐಎಸ್ಸೆಸ್ ನಡುವಿನ ಸಂಘರ್ಷಕ್ಕೂ ಕಾರಣವಾಯಿತು. ಅದೇ ಕಾರಣದಿಂದ ಆರೆಸ್ಸೆಸ್ ನಡೆಸಿದೆ ಎಂದು ಆರೋಪಿಸಲಾಗಿರುವ ದಾಳಿಯಲ್ಲಿ ಮದನಿಯ ಒಂದು ಕಾಲೇ ಹೊರಟು ಹೋಯಿತು. ಇನ್ನೊಂದು ವಾದದ ಪ್ರಕಾರ, ಆತನೇ ಬಾಂಬ್ ಸಾಗಿಸುತ್ತಿದ್ದಾಗ ಅದು ಸ್ಫೋಟಗೊಂಡು ಬಲಗಾಲು ತುಂಡಾಗಿತ್ತು. ಆದರೆ ಜೀವಕ್ಕೇನೂ ಅಪಾಯವಾಗಲಿಲ್ಲ.
ಇದು ಮದನಿಯ ಮೊದಲು ಸಂಘಟನೆಯೂ ಹೌದು. ಆದರೆ ಅಕ್ರಮ ಚಟುವಟಿಕೆಗಳ ಹಿನ್ನೆಲೆಯಲ್ಲಿ 1993ರಲ್ಲಿ ನಿಷೇಧಿಸಲಾಗಿತ್ತು.