ತೀವ್ರ ವಿವಾದಕ್ಕೆ ಕಾರಣವಾದ ತನ್ನ ತರ್ಲೆಗಳು ಹೇಳಿಕೆಗೆ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಸ್ಪಷ್ಟನೆ ನೀಡಿದ್ದಾರೆ. ನಾನು ತರ್ಲೆಗಳು ಎಂದಿರುವುದು ರಾಜಕಾರಣಿಗಳನ್ನು, ಕನ್ನಡಿರನ್ನು ಅಲ್ಲ ಎಂದಿದ್ದಾರೆ.
PR
ಈ ಬಗ್ಗೆ ಲಿಖಿತ ಹೇಳಿಕೆಯನ್ನು ಭೈರಪ್ಪ ಬಿಡುಗಡೆ ಮಾಡಿದ್ದಾರೆ. ಕನ್ನಡಿಗರನ್ನು ದೂರುವ ಬದಲು ರಾಜಕಾರಣಿಗಳನ್ನೇ ಗುರಿಯಾಗಿಟ್ಟುಕೊಂಡು ಹೇಳಿಕೆ ನೀಡಿದ್ದಾರೆ. ಅದರ ನಡುವೆಯೇ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುವ ಪ್ರತಿಪಕ್ಷಗಳು ಮತ್ತು ಇತರ ಕೆಲವು ಮಂದಿಯನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ನಡ ಲೇಖಕನಾದ ನನಗೆ ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲೆ ಅಗಾಧ ಪ್ರೀತಿ ಇದೆ. ಅವರನ್ನು ನಾನು ಟೀಕಿಸಿದರೂ ಅದು ಪ್ರೀತಿಯಿಂದ ಮತ್ತು ತಮ್ಮ ಕಾರ್ಯದಲ್ಲಿ ಮುನ್ನಡೆಯಬೇಕೆಂಬ ಆಕಾಂಕ್ಷೆಯಿಂದ ಎಂದು ಭೈರಪ್ಪ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯನ್ನು ಟೀಕೆಗಳ ಹೊರತಾಗಿಯೂ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಮೋದಿಯವರು ಗುಜರಾತಿನಲ್ಲಿ ಸಾಧಿಸಿರುವ ಪ್ರಗತಿ ಅದಮ್ಯವಾದುದು. ಈ ಹಿಂದೆ ನಾನು ಆರು ವರ್ಷಗಳ ಕಾಲ ಗುಜರಾತಿನಲ್ಲೇ ನೌಕರಿ ಮಾಡಿದವನು. ಈಗಲೂ ಅಲ್ಲಿಗೆ ಹೋದಾಗ ಪ್ರಗತಿಯನ್ನು ನೋಡುತ್ತಿರುತ್ತೇನೆ. ಜನಸಾಮಾನ್ಯರು ಹೇಳುತ್ತಿರುವುದನ್ನು ಕೇಳಿದ್ದೇನೆ ಎಂದಿದ್ದಾರೆ.
ರಾಜಕಾರಣಿಗಳಿಗೆ ಜೈಕಾರ ಹಾಕುವ ಜನ ಜಾಸ್ತಿಯಾಗುತ್ತಿದ್ದಾರೆ ಎಂದು ಒಟ್ಟಾಗಿ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡಿರುವ ಭೈರಪ್ಪ, ಇದೇ ಕಾರಣದಿಂದ ಅಭಿವೃದ್ಧಿ ಕಾರ್ಯಗಳು ಪಕ್ಷಾತೀತವಾಗಿ ನಡೆಯುತ್ತಿಲ್ಲ ಎಂದಿದ್ದಾರೆ.
ಸರಕಾರ ಮಾಡುವ ಪ್ರಯತ್ನಗಳಿಗೆ ಅಡ್ಡಗಾಲು ಹಾಕಿ ತರ್ಲೆ ಮಾಡುವುದೇ ಪ್ರತಿಪಕ್ಷಗಳ ಜಾಯಮಾನವಾಗಿ ಹೋಗಿದೆ. ಇದೇ ಕಾರಣದಿಂದ ಪಶ್ಚಿಮ ಬಂಗಾಲದಿಂದ ಟಾಟಾ ಕಾರು ಕಾರ್ಖಾನೆ ಕರ್ನಾಟಕಕ್ಕೆ ಬರುವ ಬದಲು ಗುಜರಾತಿಗೆ ಹೋಯಿತು. ರೈತರ ಮನ ಗೆಲ್ಲುವಲ್ಲಿ ಮೋದಿ ಯಶಸ್ವಿಯಾಗಿದ್ದರು. ಅದರಲ್ಲಿ ಕಮಿಷನ್ ಹೊಡೆಯುವ ಅಥವಾ ಇತರರು ಹೊಡೆಯುವುದಕ್ಕೂ ಅವರು ಬಿಡಲಿಲ್ಲ. ಆದರೆ ನಮ್ಮ ರಾಜಕಾರಣಿಗಳು ಹಾಗಲ್ಲ. ಅವರಿಗೆ ಹಿಂದೆ ಮುಂದೆ ನೋಡದೆ ಜೈಕಾರ ಹಾಕುವ ಮಂದಿ ಹೆಚ್ಚಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಹಗರಣಗಳ ಬಗ್ಗೆ ನೇರವಾಗಿ ಉತ್ತರಿಸುವ ಬದಲು ಪರೋಕ್ಷ ಮಾರ್ಗವನ್ನು ಆರಿಸಿಕೊಂಡಿರುವ ಭೈರಪ್ಪ, ಉದ್ಯಮದಲ್ಲಿ ಹಣ ಗಳಿಸುವ ಯೋಗ್ಯತೆ ಇಲ್ಲದವರು ರಾಜಕೀಯಕ್ಕೆ ಬಂದು ಭೂ ದಂಧೆಯಿಂದ ಹಣ ಮಾಡುತ್ತಿದ್ದಾರೆ. ಈಗಿನವರು ಮಾತ್ರವಲ್ಲ, ಈ ಹಿಂದಿನ ಎಲ್ಲಾ ಮಂತ್ರಿಗಳು ಮತ್ತು ಶಾಸಕರ ಆಸ್ತಿಪಾಸ್ತಿ ತನಿಖೆ ಮಾಡಬೇಕು. ಪತ್ನಿಗೆ ಒಡವೆ ಮಾಡಿಸಿದುದರಿಂದ ಹಿಡಿದು, ಹಳೆ ಕಾರನ್ನು ಮಾರಿ ಹೊಸತನ್ನು ಖರೀದಿಸಿದರೂ ಅದನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸುವಂತಹ ವ್ಯವಸ್ಥೆ ಬರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ತನ್ನ ವಿರುದ್ಧ ಪ್ರತಿಭಟನೆ ಮಾಡಿದ ಕನ್ನಡ 'ಹೋರಾಟಗಾರ'ರನ್ನು ಭೈರಪ್ಪ ಟೀಕಿಸಿದ್ದಾರೆ.
ಪ್ರತಿಭಟನೆಯ ಬಗ್ಗೆ ಮೊದಲೇ ಮಾಧ್ಯಮದವರಿಗೆ ಹೇಳಿ, ನನ್ನ ಮನೆಯ ಮುಂದೆ ಬಂದು ಏಕವಚನದಲ್ಲಿ ಭೈರಪ್ಪನಿಗೆ ಧಿಕ್ಕಾರ, ಆತನನ್ನು ಬಂಧಿಸಿ, ಗಡಿಪಾರು ಮಾಡಿ ಎಂದೆಲ್ಲ ಹೇಳಿದ್ದಾರೆ. ಸಂಜೆಯೊಳಗೆ ಕ್ಷಮಾಪಣೆ ಕೇಳದಿದ್ದರೆ ರಾಜ್ಯವ್ಯಾಪಿ ಚಳವಳಿ ನಡೆಸುತ್ತೇವೆ ಎಂದಿದ್ದಾರೆ. ಒಬ್ಬ ಲೇಖಕನ ಬಗ್ಗೆ ಈ ರೀತಿಯಾಗ ಅಗೌರವದಿಂದ ನಡೆದುಕೊಳ್ಳುವವರು ಕನ್ನಡ-ಕರ್ನಾಟಕದ ರಕ್ಷಣೆ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.