ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿ ಕೈಹಿಡಿದಿದ್ದಾರೆ. ಆ ನಿಟ್ಟಿನಲ್ಲಿ ಜನರ ಆಶೀರ್ವಾದಕ್ಕೆ ಋಣಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ಫಲಿತಾಂಶ ಘೋಷಣೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ 12 ಜಿಲ್ಲಾ ಪಂಚಾಯ್ತಿಯಲ್ಲಿ ಗೆಲುವು ಸಾಧಿಸಿದೆ. 176 ತಾಲೂಕು ಪಂಚಾಯ್ತಿಗಳಲ್ಲಿ 67 ಸ್ಥಾನ ಬಿಜೆಪಿ ತೆಕ್ಕೆಗೆ ಬಂದಿದೆ. ಮೂರು ಅತಂತ್ರ ಜಿ.ಪಂನಲ್ಲಿಯೂ ಬಿಜೆಪಿಗೆ ಅಧಿಕಾರ ದೊರೆಯಲಿದೆ. ಆದರೂ ಹಲವೆಡೆ ನಾವು ನಿರೀಕ್ಷಿಸಿದಷ್ಟು ಫಲಿತಾಂಶ ಬಂದಿಲ್ಲ ಎಂದರು.
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಮತದಾರರು ವಿಪಕ್ಷಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಇನ್ನು ಮುಂದಾದರು ಜೆಡಿಎಸ್ ಜತೆ ಒಳಒಪ್ಪಂದ ಮಾಡಿಕೊಳ್ಳುವುದನ್ನು ನಿಲ್ಲಿಸಲಿ. ಒಳ ಒಪ್ಪಂದ ಮಾಡಿಕೊಂಡರೆ ಜನ ಕ್ಷಮಿಸೋಲ್ಲ ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಇನ್ನುಳಿದ ಎರಡುಕಾಲು ವರ್ಷಗಳಲ್ಲಿ ಜೆಡಿಎಸ್ ಸುಮ್ಮನಿರಲಿ. ಜೆಡಿಎಸ್ ಓಡಾಟ, ಹಾರಾಟ ಕೇವಲ ಭ್ರಮೆ ಎಂದು ವ್ಯಂಗ್ಯವಾಡಿದ ಮುಖ್ಯಮಂತ್ರಿಗಳು, ಹಲವೆಡೆ ಜೆಡಿಎಸ್ ಖಾತೆಯೇ ತೆರೆದಿಲ್ಲ ಎಂದು ಟೀಕಿಸಿದರು.
ಆಡಳಿತಾರೂಢ ಬಿಜೆಪಿ ಪಕ್ಷದ ಅಭಿವೃದ್ಧಿ ಕೆಲಸವನ್ನು ಗಮನಿಸಿ ಜನರು ಪಕ್ಷಕ್ಕೆ ಮತ ನೀಡಿದ್ದಾರೆ. ಇನ್ನು ಮುಂದೆಯೂ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಸರಕಾರ ಉತ್ತಮ ಅಭಿವೃದ್ಧಿ ಕೆಲಸ ಮಾಡಿ ಜನರ ವಿಶ್ವಾಸ ಹೆಚ್ಚಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಆ ನೆಲೆಯಲ್ಲಿ ವಿಪಕ್ಷಗಳು ಅನಾವಶ್ಯಕವಾಗಿ ಗೂಬೆ ಕೂರಿಸುವ ಬದಲು ಸರಕಾರದ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಲಿ ಎಂದು ಮನವಿ ಮಾಡಿಕೊಂಡರು.