ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಕೈ'ಗೆ ಹೀನಾಯ ಸೋಲು;ಹೊನ್ನಾಳಿ,ಅಶೋಕ್, ರೆಡ್ಡಿಗೆ ಮುಖಭಂಗ! (Karnataka district polls 2011 | B.S. Yeddyurappa | BJP | Congress | JDS)
Bookmark and Share Feedback Print
 
NRB
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿಯೂ ಆಡಳಿತಾರೂಢ ಬಿಜೆಪಿ ಗೆಲುವಿನ ನಗೆ ಬೀರಿದ್ದರೆ. ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದು, ಜೆಡಿಎಸ್ ತನ್ನ ಪ್ರಾಬಲ್ಯವನ್ನ ವೃದ್ಧಿಸಿಕೊಂಡಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿವಮೊಗ್ಗದಲ್ಲಿ ಹರಸಾಹಸಪಟ್ಟು ಬಿಜೆಪಿ ಜಯಸಾಧಿಸಿದೆ. ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು, ರೇಣುಕಾಚಾರ್ಯ ಹಾಗೂ ಸೋಮಣ್ಣ, ಆರ್. ಅಶೋಕ್ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ರಾಜ್ಯದ 30 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ, ಕಾಂಗ್ರೆಸ್ 4, ಜೆಡಿಎಸ್ 4 ಸ್ಥಾನಗಳಲ್ಲಿ ಜಯಭೇರಿ ಬಾರಿಸಿವೆ. ಆದರೆ ಹತ್ತು ಜಿಲ್ಲಾ ಪಂಚಾಯ್ತಿಗಳಲ್ಲಿ ಅತಂತ್ರ ಸ್ಥಿತಿ ತಲೆದೋರಿದೆ. ಅದೇ ರೀತಿ 176 ತಾಲೂಕು ಪಂಚಾಯ್ತಿಗಳಲ್ಲಿ 68 ಬಿಜೆಪಿ, ಕಾಂಗ್ರೆಸ್ 31 ಹಾಗೂ ಜೆಡಿಎಸ್ 48ರಲ್ಲಿ ಗೆಲುವು ಸಾಧಿಸಿದೆ. 48 ತಾ.ಪಂ.ಕ್ಷೇತ್ರ ಅತಂತ್ರವಾಗಿವೆ.

NRB
ಪ್ರಸಕ್ತ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಗಳಿಸುವ ಮುಖ್ಯಮಂತ್ರಿಗಳ ಕನಸು ನನಸಾಗಿಲ್ಲ. ಅವೆಲ್ಲಕ್ಕಿಂತ ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿ 16 ಸ್ಥಾನ ಪಡೆದು ಪ್ರಯಾಸದ ಗೆಲುವು ಪಡೆದಿದೆ. ಇಲ್ಲಿ ಕಾಂಗ್ರೆಸ್ 13 ಹಾಗೂ ಜೆಡಿಎಸ್ 2 ಸ್ಥಾನ ತನ್ನ ತೆಕ್ಕೆಗೆ ತೆಗೆದುಕೊಂಡಿವೆ.

ಬಳ್ಳಾರಿಯ ಗಣಿಧಣಿಗಳ ಜಿಲ್ಲೆಯಾದ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ತೀವ್ರ ಆಘಾತ ಅನುಭವಿಸಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತ ತಂದುಕೊಡುವಲ್ಲಿ ವಿಫಲರಾಗಿದ್ದಾರೆ. 36 ಸದಸ್ಯ ಬಲದ ಜಿ.ಪಂನಲ್ಲಿ ಬಿಜೆಪಿ 18, ಕಾಂಗ್ರೆಸ್ 17, ಜೆಡಿಎಸ್ 1 ಸ್ಥಾನ ಪಡೆಯುವ ಮೂಲಕ ಅತಂತ್ರ ಸ್ಥಿತಿ ಏರ್ಪಟ್ಟಿದೆ.

ಚಿತ್ರದುರ್ಗ ಜಿ.ಪಂ 34 ಸ್ಥಾನಗಳ ಪೈಕಿ ಬಿಜೆಪಿ ಗಳಿಸಿದ್ದು ಕೇವಲ 12 ಸ್ಥಾನ, ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದಿದ್ದು. ಕಂದಾಯ ಹಾಗೂ ಉಸ್ತುವಾರಿ ಸಚಿವ ಕರುಣಾಕರ ರೆಡ್ಡಿ ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ್ದಾರೆ. ಅಬಕಾರಿ ಸಚಿವ ಹೊನ್ನಾಳಿ ರೇಣುಕಾಚಾರ್ಯ ಕ್ಷೇತ್ರದಲ್ಲಿಯೂ ಬಿಜೆಪಿ ಹಿನ್ನಡೆ ಅನುಭವಿಸಿದ್ದು, ಹೊನ್ನಾಳಿ ತಾ.ಪಂ. ಕಾಂಗ್ರೆಸ್ ಮಡಿಲಿಗೆ ಬಿದ್ದಿದೆ.

ವಸತಿ ಹಾಗೂ ಹಾಸನ ಉಸ್ತುವಾರಿ ಹೊತ್ತಿರುವ ಸಚಿವ ವಿ.ಸೋಮಣ್ಣ ಸಾಕಷ್ಟು ಹರಸಾಹಸ ಪಟ್ಟರೂ, ಹಾಸನ ಜಿ.ಪಂ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲು ವಿಫಲವಾಗಿದೆ. ರಾಮನಗರದಲ್ಲಿ ಜೆಡಿಎಸ್ ಭದ್ರಕೋಟೆಯಾಗಿ ಹೊರಹೊಮ್ಮಿದ್ದು, ಬಿಜೆಪಿ ತನ್ನ ಖಾತೆಯನ್ನೇ ತೆರೆದಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ, ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ಖದರ್ ಕೂಡ ಠುಸ್ ಎಂದಿದೆ. ಚಿಕ್ಕಬಳ್ಳಾಪುರ ತಾ.ಪಂ.ನ 27 ಸ್ಥಾನಗಳ ಪೈಕಿ ಬಿಜೆಪೆ ಜಯಗಳಿಸಿದ್ದು ಕೇವಲ ಒಂದು ಸ್ಥಾನ ಮಾತ್ರ. ಮೈಸೂರು ಜಿಲ್ಲಾ ಉಸ್ತುವಾರಿ ಎ.ಎಸ್.ರಾಮದಾಸ್ ಅವರ ಮೈಸೂರು ಜಿ.ಪಂನ 46 ಸ್ಥಾನಗಳ ಪೈಕಿ ಬಿಜೆಪಿ ಕೇವಲ ಎಂಟರಲ್ಲಿ ಮಾತ್ರ ಗೆಲುವು ಸಾಧಿಸುವ ಮೂಲಕ ಹೀನಾಯ ಸೋಲು ಅನುಭವಿಸಿದೆ.

ಮಂಡ್ಯ ಉಸ್ತುವಾರಿ ಹೊಣೆ ಹೊತ್ತಿರುವ ಗೃಹ ಸಚಿವ ಆರ್.ಅಶೋಕ್ ಮ್ಯಾಜಿಕ್ ಠುಸ್ಸಾಗಿದ್ದು, ಮಂಡ್ಯ ಜಿ.ಪಂನಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆದಿದ್ದರೆ, ಬಿಜೆಪಿ ಖಾತೆಯನ್ನೇ ತೆರೆಯದೆ ಮುಖಭಂಗ ಅನುಭವಿಸಿದೆ. ಆರೋಗ್ಯ ಹಾಗೂ ರಾಯಚೂರು ಉಸ್ತುವಾರಿ ಸಚಿವರಾಗಿರುವ ಶ್ರೀರಾಮುಲು ವರ್ಚಸ್ಸು ಹೆಚ್ಚಿನ ಕಾರ್ಯನಿರ್ವಹಿಸಿಲ್ಲ. ರಾಯಚೂರು ಜಿ.ಪಂ.ಕ್ಷೇತ್ರದಲ್ಲಿ ಬಿಜೆಪಿ 11, ಕಾಂಗ್ರೆಸ್ 15 ಹಾಗೂ ಜೆಡಿಎಸ್ 9 ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದಂತಾಗಿದೆ.

NRB
ಜಿ.ಪಂ. ತಾಪಂ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಈಶ್ವರಪ್ಪ, 30 ಜಿ.ಪಂಗಳಲ್ಲಿ 20 ಸ್ಥಾನ ಹಾಗೂ 176 ತಾಲೂಕು ಪಂಚಾಯ್ತಿಗಳಲ್ಲಿ 100 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೂ ಈ ಚುನಾವಣೆಯಲ್ಲಿ ಜನ ಬಿಜೆಪಿ ಕೈಹಿಡಿದಿರುವುದಕ್ಕೆ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಬಿಜೆಪಿ ಕೂಡ ಗ್ರಾಮೀಣ ಪ್ರದೇಶದ ಪಕ್ಷ ಎಂಬುದಾಗಿ ಪರಿಗಣಿಸಿರುವುದಕ್ಕೆ ಋಣಿಯಾಗಿರುವುದಾಗಿ ಫಲಿತಾಂಶ ಪ್ರಕಟದ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

2005-10ರಲ್ಲಿನ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿನ ಫಲಿತಾಂಶ ಬಿಜೆಪಿ 152-441, ಕಾಂಗ್ರೆಸ್ 492-352, ಜೆಡಿಎಸ್ 289-180 ಸ್ಥಾನಗಳನ್ನು ಪಡೆದಿವೆ.

ಸೋತು ಸುಣ್ಣವಾದ ಕಾಂಗ್ರೆಸ್;
2005ರಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ 14 ಜಿ.ಪಂ.ಗಳಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಈ ಬಾರಿ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಗೆದ್ದಿದೆ. ಈ ಹಿಂದೆ ಎರಡು ಜಿಲ್ಲೆಗಳಲ್ಲಿ ಗೆದ್ದ ಜೆಡಿಎಸ್ ನಾಲ್ಕು ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

2005ರಲ್ಲಿ ಬಾಗಲಕೋಟೆ, ಬೆಂಗಳೂರು ನಗರ, ಬೆಳಗಾವಿ, ಬಿಜಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಮತದಾರ ಕೈ ಹಿಡಿದಿದ್ದ. ಆದರೆ ಈ ಬಾರಿ ಕಾಂಗ್ರೆಸ್ 14 ಜಿಲ್ಲೆಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಹತ್ತು ಜಿಲ್ಲೆಗಳಲ್ಲಿ ಮತದಾರ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾನೆ.

ಈ ಬಾರಿ ಹತ್ತು ಜಿ.ಪಂ.ಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ. ಅಲ್ಲದೇ ಈ ಹಿಂದೆ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಬಾಗಲಕೋಟೆ, ಬೆಳಗಾವಿ, ದಾವಣೆಗೆರೆ, ಗದಗ,ಹಾವೇರಿ, ಉಡುಪಿ ಜಿಲ್ಲೆಗಳು ಬಿಜೆಪಿ ಪಾಲಾಗಿದೆ. ಅದೇ ರೀತಿ ಮಂಡ್ಯ ಕೂಡ ಜೆಡಿಎಸ್ ವಶಕ್ಕೆ ಬಂದಿದೆ.

ಬಿಜೆಪಿ ಕಳೆದ ಬಾರಿ ಸ್ವತಂತ್ರವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಅಧಿಕಾರದಲ್ಲಿತ್ತು. ಆದರೆ ಈ ಬಾರಿ ಅಲ್ಲಿನ ಫಲಿತಾಂಶ ಅತಂತ್ರವಾಗಿದೆ. ಇನ್ನು ಜೆಡಿಎಸ್ ಕಳೆದ ಬಾರಿ ಹಾಸನ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಅಧಿಕಾರ ಹಿಡಿದಿದ್ದು, ಈ ಬಾರಿ ಮಂಡ್ಯ, ತುಮಕೂರು, ಹಾಸನ ಮತ್ತು ರಾಮನಗರಗಳಲ್ಲಿ ಗೆಲುವು ಸಾಧಿಸಿದೆ. ಬೆಂಗಳೂರು ಗ್ರಾಮಾಂತರ, ನಗರ, ಬಿಜಾಪುರ, ಚಿತ್ರದುರ್ಗ, ಗುಲ್ಬರ್ಗಾ, ಕೊಪ್ಪಳ, ಕೋಲಾರ, ಬಳ್ಳಾರಿ, ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ.

ಫಲಿತಾಂಶದ ಹೈಲೈಟ್ಸ್;
ಹೊನ್ನಾಳಿ ತಾಲೂಕಿನ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಸಚಿವ ರೇಣುಕಾಚಾರ್ಯ ಅವರ ನಾದಿನಿ ಕವಿತಾ ಸೋಲು ಕಂಡಿದ್ದಾರೆ. ಜೆ.ಎಚ್.ಪಟೇಲ್ ಅವರ ಸೊಸೆ, ಜಿ.ಟಿ.ದೇವೇಗೌಡರ ಪತ್ನಿ ಲಲಿತಾ, ಶಾಸಕರ ಪುತ್ರಿ ಕವಿತಾ ವೆಂಕಟಸ್ವಾಮಿ, ಸಚಿವ ರವೀಂದ್ರನಾಥ ಪುತ್ರಿ ಜಿ.ಪಂ.ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.

ಅನರ್ಹಗೊಂಡ ಶಾಸಕ, ಮಾಜಿ ಸಚಿವ ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್, ಬ್ಯಾಡನೂರು ಜಿ.ಪಂ.ಕ್ಷೇತ್ರದಲ್ಲಿ ಸಚಿವ ರೇವೂನಾಯಕ್ ಬೆಳಮಗಿ ಪುತ್ರ ಗಣೇಶ್ ಬೆಳಮಗಿ ಜಿ.ಪಂ.ಗೆ ಆಯ್ಕೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲು ಕ್ಷೇತ್ರದಿಂದ ಚನ್ನಿಗಪ್ಪ ಅವರ ಪುತ್ರ ವೇಣುಗೋಪಾಲ್ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದಾರೆ.

12 ಜಿ.ಪಂ.ಗಳಲ್ಲಿ ಅರಳಿದ ಕಮಲ;8ರಲ್ಲಿ ಕಾಂಗ್ರೆಸ್-ಜೆಡಿಎಸ್

ತಾ.ಪಂ.ಫಲಿತಾಂಶ-ಬಿಜೆಪಿ 68, ಕಾಂಗ್ರೆಸ್ 31, ಜೆಡಿಎಸ್ 29
ಸಂಬಂಧಿತ ಮಾಹಿತಿ ಹುಡುಕಿ