ಭೂಹಗರಣ ಆರೋಪದ ಮೇಲೆ ಇಬ್ಬರು ಖಾಸಗಿ ವ್ಯಕ್ತಿಗಳು ನೀಡಿದ ದೂರಿನನ್ವಯ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೇಸು ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದ ಆದೇಶದ ಪ್ರತಿಯನ್ನು ಸ್ವತಃ ಮುಖ್ಯಮಂತ್ರಿಗೆ ಮತ್ತು ಬಿಜೆಪಿಗೆ ಒಪ್ಪಿಸಲು ರಾಜ್ಯಪಾಲರು ನಿಧಾನಿಸುತ್ತಿರುವುದೇಕೆ? ಶುಕ್ರವಾರ ಸಂಜೆಯೇ ಆದೇಶ ಹೊರಡಿಸಿದ್ದು, ಎಲ್ಲ ವಾಹಿನಿಗಳಲ್ಲಿ ಪ್ರಕಟವಾಗಿದ್ದರೂ ಇಂದು ಮಧ್ಯಾಹ್ನದವರೆಗೂ ಬಿಜೆಪಿಗೆ, ಮುಖ್ಯಮಂತ್ರಿಗೆ ಈ ಆದೇಶವು ತಲುಪಿಲ್ಲವೇಕೆ?
ಇಂಥದ್ದೊಂದು ಪ್ರಶ್ನೆ ಬಿಜೆಪಿ ವಲಯದಲ್ಲಿ ಊಹಾಪೋಹಗಳಿಗೆ ಕಾರಣವಾಗುತ್ತಿದೆ. ಇದು ಕೂಡ ಬಿಜೆಪಿ ಸರಕಾರ ಅಸ್ಥಿರಗೊಳಿಸುವ ಕಾಂಗ್ರೆಸ್ ತಂತ್ರದ ಭಾಗ ಎಂಬುದು ಬಿಜೆಪಿ ನಾಯಕರ ಆರೋಪ.
ನಿನ್ನೆ ಸಂಜೆ ಬಹುತೇಕ ಎಲ್ಲ ಟಿವಿ ವಾಹಿನಿಗಳಿಗೆ ತಲುಪಿರುವ ಈ ಆದೇಶದ ಪ್ರತಿಯು, ಸ್ವತಃ ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗೆ ಲಭ್ಯವಾಗಿಲ್ಲ, ಇಂದು ಕೂಡ ಸಚಿವರ ನಿಯೋಗವು ರಾಜ-ಭವನಕ್ಕೆ ತೆರಳಿ ಕೇಳಿದರೂ, ಆಮೇಲೆ ಬನ್ನಿ ಎಂದು ಹೇಳಿ ಕಳುಹಿಸಲಾಗಿತ್ತು ಎಂಬುದನ್ನು ನೋಡಿದರೆ, ಇದು ಪೂರ್ವಯೋಜಿತ ಸಂಚು ಎಂಬುದು ಮೇಲ್ನೋಟಕ್ಕೆ ಅರಿವಾಗುತ್ತಿದೆ ಎನ್ನುತ್ತಿದ್ದಾರೆ ಬಿಜೆಪಿ ಮುಖಂಡರು.
ನಿನ್ನೆ ಸಂಜೆ ಸುದ್ದಿ ತಿಳಿದಾಕ್ಷಣ ಸಿಎಂ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಪತ್ರ ಬರೆದು, ತನಗೆ ಮಾಧ್ಯಮದ ಮೂಲಕ ಮಾತ್ರ ಈ ಅಂಶ ತಿಳಿದಿದೆ, ದಯವಿಟ್ಟು ಆದೇಶದ ಪ್ರತಿಯನ್ನು ಕೊಡಿ ಎಂದು ಕೇಳಿದ್ದರಲ್ಲದೆ, ತಾನು ಅಧಿಕಾರಿಯನ್ನು ರಾಜಭವನಕ್ಕೆ ಕಳುಹಿಸಿದಾಗ, ನೀವು ಕೊಡಲು ನಿರಾಕರಿಸಿದ್ದೀರಿ ಎಂದು ತಿಳಿಸಿದ್ದರು.
ಒಂದು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿ ನೀವು ಆದೇಶದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೂ, ನಾವು ಕೇಳಿದರೂ ಕೊಡುವುದಿಲ್ಲ ಎಂಬ ನೀತಿ ಅನುಸರಿಸುತ್ತಿರುವುದು ತೀರಾ ದುರದೃಷ್ಟಕರ ಎಂದು ಯಡಿಯೂರಪ್ಪ ಪತ್ರದಲ್ಲಿ ತಿಳಿಸಿದ್ದು, ಇದುವರೆಗೆ ತನಗೆ ಈ ಆದೇಶದ ಪ್ರತಿ ಸಿಕ್ಕಿಲ್ಲ ಮತ್ತು ನನ್ನ ನಿಲುವು ಸ್ಪಷ್ಟಪಡಿಸಲು ನೀವು ಅವಕಾಶವನ್ನೂ ನೀಡಿಲ್ಲ. ದಯವಿಟ್ಟು ಆದೇಶದ ಪ್ರತಿಯನ್ನು ಕೂಡಲೇ ಕೊಡುವಂತೆ ಕೋರುತ್ತೇನೆ ಎಂಬ ಒಕ್ಕಣೆಯನ್ನೂ ನಿನ್ನೆ ಸಂಜೆ ಬರೆದ ಪತ್ರದಲ್ಲಿ ಸೇರಿಸಿದ್ದರು.
PR
ಸುಮಾರು 2000 ಪುಟಗಳುಳ್ಳ ಆರೋಪವನ್ನು ಅಧ್ಯಯನ ಮಾಡಿ, ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದ ರಾಜ್ಯಪಾಲರು, ಶುಕ್ರವಾರ ದಿಢೀರನೇ ಸಿಎಂ ವಿರುದ್ಧ ಕೇಸು ದಾಖಲಿಸಲು ಅನುಮತಿ ನೀಡಿದ್ದರು.
ವಾಸ್ತವವಾಗಿ, ಆದೇಶದ ಪ್ರತಿಯಲ್ಲಿ ಏನಿದೆ ಎಂಬುದನ್ನು ನೋಡಿಕೊಂಡು ಮುಂದಿನ ಕಾರ್ಯತಂತ್ರ ರೂಪಿಸಲು, ರಾಜ್ಯ ಸರಕಾರವು ಇದಕ್ಕಾಗಿ ರಾಜ್ಯಪಾಲರಿಗೆ ಮನವಿ ಮುಂದಿಟ್ಟಿತ್ತು. ಈಗ ಬಿಜೆಪಿಯು ಆದೇಶದ ಪ್ರತಿಯನ್ನು ನೋಡಿ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ಇಂದು ಶನಿವಾರ, ಮಧ್ಯಾಹ್ನವರೆಗೆ ಮಾತ್ರ ನ್ಯಾಯಾಲಯ ಕಲಾಪ ಇರುತ್ತದೆ. ನಾಳೆ ಭಾನುವಾರ, ಕಲಾಪ ಇರುವುದಿಲ್ಲ. ಎರಡು ದಿನ ವಿಳಂಬಿಸಿದರೆ ಯಡಿಯೂರಪ್ಪ ಅವರಿಗೆ ಕಾನೂನುಬದ್ಧ ಹಾದಿ ತುಳಿಯಲು ವಿಳಂಬವಾಗುತ್ತದೆ ಎಂಬುದು ಸಾಮಾನ್ಯರಿಗೆ ಅರ್ಥವಾಗುವ ಸಂಗತಿ.
ಇತ್ತೀಚಿನ ಮಾಹಿತಿಯ ಪ್ರಕಾರ, ರಾಜಭವನದಿಂದ ಮುಖ್ಯಮಂತ್ರಿ ಕಚೇರಿಗೆ ಈ ಆದೇಶದ ಪ್ರತಿಯು ರವಾನೆಯಾಗಿದೆ.