Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 23 ಮಾರ್ಚ್ 2019 (09:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಹಿಂದಿನ ತಪ್ಪುಗಳನ್ನು ಸರಿಪಡಿಸುತ್ತಾ ಕೂರಬೇಕಾಗಬಹುದು. ಆರ್ಥಿಕವಾಗಿ ಕೆಲವರು ಸಾಲ ಕೇಳಿಕೊಂಡು ಬರುವರು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.
 
ವೃಷಭ: ವಿನಾಕಾರಣ ಪರರ ನಿಂದನೆಗೆ ಗುರಿಯಾಗಬೇಕಾಗಬಹುದು. ಅನಗತ್ಯವಾಗಿ ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸಲು ಹೋಗದೇ ಇರುವುದೇ ಲೇಸು. ಅದರ ಹೊರತಾಗಿ ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಉನ್ನತಿ ಕಾಣುವಿರಿ.
 
ಮಿಥುನ: ವಿದ್ಯಾರ್ಥಿಗಳಿಗೆ ನಿರೀಕ್ಷೆಗೂ ಮೀರಿದ ಪ್ರಯತ್ನ ಮಾಡಬೇಕಾಗುತ್ತದೆ. ಪೋಷಕರ ಸಲಹೆಗಳಿಗೆ ಕಿವಿಗೊಡಿ. ಅವಿವಾಹಿತರು ಕಂಕಣ ಭಾಗ್ಯ ಪಡೆಯುವರು. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.
 
ಕರ್ಕಟಕ: ಸ್ತ್ರೀಯರಿಗೆ ಶುಭ ದಿನ. ಉದ್ಯೋಗದಲ್ಲಿ ಬಡ್ತಿ, ಮುನ್ನಡೆ ಇರುತ್ತದೆ. ಕೃಷಿ ಕ್ಷೇತ್ರದಲ್ಲಿರುವವರು ನಿವ್ವಳ ಲಾಭ ಗಳಿಸುವರು. ಆದರೆ ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚಗಳನ್ನು ಮಾಡಬೇಕಾಗಿ ಬರುತ್ತದೆ.
 
ಸಿಂಹ: ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡುವಿರಿ. ಪ್ರೇಮಿಗಳು ಮನೆಯವರ ಒಪ್ಪಿಗೆ ಪಡೆಯುವರು. ವಾಹನ ಚಲಾಯಿಸುವಾಗ ಎಚ್ಚರವಿರಲಿ, ಅಪಘಾತ ಭಯವಿದೆ. ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸಲು ಮುಂದಾಗುವಿರಿ.
 
ಕನ್ಯಾ: ಆಸ್ತಿ ವಿಚಾರವಾಗಿ ದಾಯಾದಿಗಳೊಂದಿಗೆ ಕಲಹವಾಗುವುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸುವುದು ಸೂಕ್ತ. ಹಣ ಸಂಪಾದನೆಗೆ ನಾನಾ ಮಾರ್ಗ ಹುಡುಕುವಿರಿ. ದೈವಾನುಗ್ರಹದಿಂದ ಅಂದುಕೊಂಡ ಕಾರ್ಯಗಳು ನೆರವೇರುವುದು.
 
ತುಲಾ: ನೂತನ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ದೇವರ ದರ್ಶನ ಪಡೆಯುವರು. ಮನೆಯಲ್ಲಿ ನೆಮ್ಮದಿಯ ವಾತಾವರಣವಿರುವುದು. ಆದರೆ ಸಂಗಾತಿಯ ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಹಣ ಖರ್ಚಾಗುವುದು. ವಿದ್ಯಾರ್ಥಿಗಳಿಗೆ ಶುಭ ದಿನ.
 
ವೃಶ್ಚಿಕ: ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದರಿಂದ ವೆಚ್ಚಗಳ ಬಗ್ಗೆ ಹಿಡಿತವಿರಲಿ. ಸರ್ಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಹೆಚ್ಚಲಿದೆ. ನಿರುದ್ಯೋಗಿಗಳು ಪಾಲಿಗೆ ಬಂದಿದ್ದೇ ಪಂಚಾಮೃತ ಎಂದುಕೊಳ್ಳಬೇಕಾಗುತ್ತದೆ.
 
ಧನು: ಕೌಟುಂಬಿಕ ವಿಚಾರದಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಂಗಾತಿಯ ಸಲಹೆಗೆ ಕಿವಿಗೊಡಿ. ಮಕ್ಕಳ ಆರೋಗ್ಯ ಚಿಂತೆಗೆ ಕಾರಣವಾಗುವುದು. ವಿದ್ಯಾರ್ಥಿಗಳು ಪ್ರಯತ್ನ ಬಲ ಮುಂದುವರಿಸಬೇಕು.
 
ಮಕರ: ಆರ್ಥಿಕವಾಗಿ ಚೇತರಿಕೆ ಕಂಡುಬಂದು, ಆಸ್ತಿ, ಮನೆ, ಇತ್ಯಾದಿ ಖರೀದಿಗೆ ಮುಂದಾಗುವಿರಿ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ವಿದೇಶ ಯಾನದ ಭಾಗ್ಯವಿದೆ. ಹೆಚ್ಚಿನ ಶುಭ ಫಲಗಳಿಗಾಗಿ ಕುಲದೇವರ ಪ್ರಾರ್ಥಿಸಿ.
 
ಕುಂಭ:  ಅಪರಿಚಿತರೊಂದಿಗೆ ಹೆಚ್ಚಿನ ವ್ಯವಹಾರ ಬೇಡ. ವ್ಯಾಪಾರಿಗಳಿಗೆ ವಂಚನೆ ಭೀತಿಯಿದೆ. ಸಂಕಷ್ಟದ ಸಮಯದಲ್ಲಿ ಅನಿರೀಕ್ಷಿತವಾಗಿ ಸಿಗುವ ಮಿತ್ರನಿಂದ ಸಹಾಯ ಸಿಗುವುದು. ಉದ್ಯೋಗ ಕ್ಷೇತ್ರದಲ್ಲಿ ಮೆಚ್ಚುಗೆಗೆ ಪಾತ್ರವಾಗಲಿದ್ದೀರಿ.
 
ಮೀನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸುತ್ತೀರಿ. ಮಿತ್ರರೊಂದಿಗೆ ಪ್ರವಾಸ ತೆರಳುವಿರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಕಾಣಿಸಿಕೊಳ್ಳಬಹುದು. ದೈವಾನುಗ್ರಹ ನಿಮ್ಮ ಮೇಲಿದ್ದು, ಎಲ್ಲವೂ ಒಳ್ಳೆಯದಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ಇದರಲ್ಲಿ ಇನ್ನಷ್ಟು ಓದಿ :