ಕನ್ನಡ ಚಿತ್ರರಂಗದ ಅಗಲಿದ ಹಿರಿಯ ಚೇತನ, ಕಿರುತೆರೆ ಲೋಕಕ್ಕೆ 'ಮುತ್ತಿನ ತೋರಣ' ಕಟ್ಟಿದ ಪ್ರತಿಭಾವಂತೆ ವೈಶಾಲಿ ಕಾಸರವಳ್ಳಿ ಅವರ ಅಂತ್ಯಸಂಸ್ಕಾರ ಇಂದು (ಸೆ.28) ಸಂಜೆ ನಾಲ್ಕು ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ.
ರಂಗಭೂಮಿಯಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ವೈಶಾಲಿ ಕಾಸರವಳ್ಳಿ ಕನ್ನಡ ಅಪರೂಪದ ನಟಿ ಮಾತ್ರವಲ್ಲ, ನಿರ್ದೇಶಕಿ, ವಸ್ತ್ರವಿನ್ಯಾಸಕಿ ಕೂಡಾ. ಈ ನಟಿಯ ದಿಢೀರ್ ಅಗಲಿಕೆ ಕನ್ನಡ ಚಿತ್ರರಂಗದ ಗಣ್ಯರಿಗಷ್ಟೇ ಅಲ್ಲ, ಪ್ರತಿಯೊಬ್ಬ ಕನ್ನಡ ಚಿತ್ರರಸಿಕನಿಗೂ ಆದ ಆಘಾತವೇ ಸರಿ.
ಸದ್ಯ ವೈಶಾಲಿ ಕಾಸರವಳ್ಳಿ ಅವರ ಪಾರ್ಥಿವ ಶರೀರವನ್ನು ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಬಂಧು ಮಿತ್ರರು, ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಮಾಡುತ್ತಿದ್ದಾರೆ.
ದೇಸೀ ಸೊಗಡಿನ ಧಾರಾವಾಹಿಗಳನ್ನು ನಿರ್ದೇಶಿಸಿ ಧಾರಾವಾಹಿ ಲೋಕಕ್ಕೆ ಹೊಸ ಮೆರುಗನ್ನೂ ತಂದುಕೊಟ್ಟಿದ್ದ ವೈಶಾಲಿ ಕಾಸರವಳ್ಳಿ ಅವರಿಗೆ ತಾನು ಶೀಘ್ರ ಗುಣಮುಖ ಹೊಂದಿ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಬೇಕೆಂಬ ಕನಸು ಕಂಡಿದ್ದರು. ಜೊತೆಗೆ ತನ್ನ ಎರಡು ಕಣ್ಣುಗಳಂತೆ ಬೆಳೆಸಿದ್ದ ಮಕ್ಕಳಾದ ಅನನ್ಯಾ ಕಾಸರವಳ್ಳಿ ಹಾಗೂ ಅಪೂರ್ವ ಕಾಸರವಳ್ಳಿ ಅವರಿಗೆ ಮದುವೆ ಮಾಡಿಸಲು ಬಯಸಿದ್ದರು. ಅವರ ಈ ಎರಡು ಕನಸುಗಳೂ ನನಸಾಗುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದು ವಿಧಿ ವಿಪರ್ಯಾಸ.