ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾಯಕಿಯ ತುಟಿ ಕಚ್ಚಿದ ಪ್ರೇಮ್‌ಗೆ ಈಗ ನೈತಿಕತೆ ಕಾಟ! (Karishma Tanna | Prem | I Am Sorry Banni Matte Preetisona | Ravindra)
WD
ಮೊದಲು ಲವ್ಲೀ ಸ್ಟಾರ್ ಪ್ರೇಮ್‌ಗೆ ಉಬ್ಬು ಹಲ್ಲಿನ ಸೆಟ್ ಹಾಕಿಸಿದರು. ನಂತರ ಪ್ರೇಮ್ ಬೆತ್ತಲೆಯಾಗಿದ್ದಾರೆ ಎಂದು ಗುಲ್ಲೆಬ್ಬಿಸಿದರು. ಈಗ ಮುತ್ತಿನ ಸರದಿ. ಕರೀಷ್ಮಾ ತನ್ನಾ ತುಟಿಗಳಿಗೆ ಪ್ರೇಮ್ ತುಟಿ ಸೇರಿಸಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಏನಾದರೂ ಮಾಡಿ ಪ್ರೇಕ್ಷಕರನ್ನು ಸೆಳೆಯಬೇಕೆಂದು ಇಂತಹ ಗಿಮಿಕ್ ಮಾಡಲಾಗುತ್ತಿದೆಯೇ?

ಇದು 'ಐ ಯಾಮ್ ಸಾರಿ ಬನ್ನಿ ಮತ್ತೆ ಪ್ರೀತ್ಸೋಣ' ಚಿತ್ರದ ಮತ್ತೊಂದು 'ವಿವಾದ'. ನಟಿಸಿದ ನಂತರ ನಾಯಕ ಪ್ರೇಮ್‌ಗೆ ನೈತಿಕತೆ ನೆನಪಾದ ಪ್ರಸಂಗ. ಕಿಸ್ಸಿಂಗ್ ಸೀನುಗಳನ್ನು ಚಿತ್ರದಿಂದ ತೆಗೆಯಬೇಕು ಎಂದು ಪ್ರೇಮ್ ಹೇಳುತ್ತಿದ್ದರೆ, ನಿರ್ದೇಶಕ ರವೀಂದ್ರ 'ಅದು ಸಾಧ್ಯವೇ ಇಲ್ಲ' ಎನ್ನುತ್ತಿದ್ದಾರೆ.

'ಐ ಯಾಮ್ ಸಾರಿ ಬನ್ನಿ ಮತ್ತೆ ಪ್ರೀತ್ಸೋಣ' ಚಿತ್ರದಲ್ಲಿ ಪ್ರೇಮ್‌ಗೆ ಇಬ್ಬರು ನಾಯಕಿಯರು. ಒಬ್ಬಾಕೆ 'ಗಂಡ-ಹೆಂಡತಿ' ಖ್ಯಾತಿ 'ಮುತ್ತಮ್ಮ' ಸಂಜನಾ. ಮತ್ತೊಬ್ಬಳು 'ಕ್ಯೂಂಕಿ ಸಾಸ್ ಬೀ ಕಭೀ ಬಹು ಥೀ'ಯ ಕರೀಷ್ಮಾ ತನ್ನಾ. ಇವರಲ್ಲಿ ಪ್ರೇಮ್ ತುಟಿ ಸೇರಿಸಿ ಗಡದ್ದಾಗಿ ಮುತ್ತಿಕ್ಕಿರುವುದು ಕರೀಷ್ಮಾಗೆ.

ಅದು ಸುಳ್ಳೆಂದು ಹೇಳುವುದು ಸಾಧ್ಯವೇ ಇಲ್ಲ ಎಂಬಷ್ಟು ಸ್ಪಷ್ಟವಾಗಿ ಫೋಟೋಗಳು ಸತ್ಯವನ್ನು ಹೇಳುತ್ತಿವೆ. ಪ್ರೇಮ್ ಈ ರೀತಿಯಾಗಿ ಈ ಚಿತ್ರದಲ್ಲಿ ಮುತ್ತಪ್ಪನಾಗಿದ್ದಾರೆ ಎನ್ನುವುದು ಬಹಿರಂಗವಾಗುತ್ತಿದ್ದಂತೆ ಪೇಚಿಗೆ ಸಿಲುಕಿರುವ ಪತ್ನಿಯಿಂದಲೂ ಆಕ್ಷೇಪ ಬಂದಿದೆ. ತಾನು ಕಿಸ್ ಮಾಡಿರುವ ದೃಶ್ಯಗಳು ಚಿತ್ರದಲ್ಲಿ ಇರಬಾರದು ಎಂದು ಪ್ರೇಮ್ ನಿರ್ದೇಶಕರ ಮೇಲೂ ಒತ್ತಡ ಹೇರಿದ್ದಾರೆ.

ಈ ಬಗ್ಗೆ ಸ್ವತಃ ಪ್ರೇಮ್ ಅವರಲ್ಲಿ ವಿಚಾರಿಸಿದರೆ ಅಂತದ್ದೇನೂ ಇಲ್ಲ. ನಾನು ಅಂತಹ ಯಾವುದೇ ದೃಶ್ಯದಲ್ಲಿ ನಟಿಸಿಲ್ಲ ಎಂದಿದ್ದಾರೆ.

ಕಿಸ್ಸಿಂಗ್ ದೃಶ್ಯವೊಂದರ ಕುರಿತು ಯೋಜನೆಗಳಿದ್ದವು. ಆದರೆ ಅಂತಹ ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯೆದುರು ಸಾಕಷ್ಟು ಸಮರ್ಥನೆಗಳನ್ನು ನೀಡಬೇಕಾಗುತ್ತದೆ. ಅದಕ್ಕಿಂತಲೂ ಹೆಚ್ಚಿನದೆಂದರೆ, ಈ ಚಿತ್ರದ ವಸ್ತು ಕೌಟುಂಬಿಕವಾದದ್ದು. ಹಾಗಾಗಿ ಇಲ್ಲಿ ಕಿಸ್ಸಿಂಗ್ ದೃಶ್ಯಗಳ ಅಗತ್ಯ ಇರುವುದಿಲ್ಲ. ನನ್ನ ಚಿತ್ರಗಳನ್ನು ನೋಡಲು ಬರುವ ಪ್ರೇಕ್ಷಕರಿಗೂ ಅಂತಹ ದೃಶ್ಯಗಳಿಂದ ಅಸಮಾಧಾನವಾಗಬಹುದು. ಇದಕ್ಕೂ ನನ್ನ ಕುಟುಂಬಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಹಾಗೆಲ್ಲ ಸಂಬಂಧ ಇರುತ್ತಿದ್ದರೆ, ನಾನು ಯಾವುದೇ ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ. ಹುಡುಗಿಯರೊಂದಿಗೆ ನರ್ತಿಸುವುದಾಗಲಿ ಅಥವಾ ಅವರನ್ನು ಅಪ್ಪಿಕೊಳ್ಳುವುದಾಗಲಿ ಮಾಡುವುದು ಅಸಾಧ್ಯವಾಗುತ್ತಿತ್ತು ಎಂದು ಪ್ರೇಮ್ ವಿವರಣೆ ನೀಡುತ್ತಾರೆ.

ಅತ್ತ ನಿರ್ದೇಶಕ ರವೀಂದ್ರ ಬೇರೆಯದೇ ಕಥೆ ಹೇಳುತ್ತಾರೆ. ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಇರುವುದು ಹೌದು. ಅದನ್ನು ಆರು ತಿಂಗಳ ಹಿಂದೆಯೇ ಚಿತ್ರೀಕರಿಸಲಾಗಿತ್ತು. ಅದು ಚಿತ್ರಕ್ಕೆ ಅಗತ್ಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಇಲ್ಲಿ ಪ್ರೇಮ್ ತಕರಾರು ಆರಂಭಿಸಿದ್ದು, ಈ ವಿಚಾರ ಬಹಿರಂಗವಾದ ನಂತರ. ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಅವರು ಬೇಡಿಕೆ ಮುಂದಿಟ್ಟರು. ಆದರೆ ಕಲಾವಿದನಾದವನು ತನ್ನ ಕುಟುಂಬವನ್ನು ವೃತ್ತಿ ಜೀವನದಿಂದ ದೂರ ಇಡಬೇಕು. ನಾನು ಅವರ ಮನೆಯವರಿಗಾಗಿ ಚಿತ್ರವೊಂದನ್ನು ಮಾಡುವುದು ಸಾಧ್ಯವಿಲ್ಲ. ಸಿನಿಮಾಗಳು ಏನಿದ್ದರೂ ಪ್ರೇಕ್ಷಕರಿಗಾಗಿ ಎಂದು ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ 'ಮುಂಬೈ ಮಿರರ್' ಟ್ಯಾಬ್ಲಾಯ್ಡ್ ಪ್ರಕಟಿಸಿರುವ 'ಮುತ್ತಿನ ಹಾರ'ದ ಚಿತ್ರಗಳು ಒರಿಜಿನಲ್. ಅದರಲ್ಲಿರುವುದು ನಾಯಕ ಪ್ರೇಮ್ ಖಚಿತ ಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.

ಆದರೂ ಇದನ್ನು ಒಪ್ಪಿಕೊಳ್ಳಲು ಪ್ರೇಮ್ ತಯಾರಿಲ್ಲ. ಈಗ ನಕಲಿಯಾದ ವೀಡಿಯೋಗಳೇ ನಮ್ಮಲ್ಲಿವೆ. ಫೋಟೋಗಳನ್ನು ಅದಕ್ಕಿಂತಲೂ ಸುಲಭವಾಗಿ ನಕಲು ಮಾಡಬಹುದು ಎಂದು ಜಾರಿಕೊಳ್ಳಲು ಯತ್ನಿಸಿದ್ದಾರೆ.

'ಐ ಯಾಮ್ ಸಾರಿ ಬನ್ನಿ ಮತ್ತೆ ಪ್ರೀತ್ಸೋಣ' ಚಿತ್ರದಲ್ಲಿ ಇದುವರೆಗೆ ನಡೆದಿರುವ ನಾಟಕಗಳಿವು. ಇನ್ನೂ ಸಣ್ಣ-ಪುಟ್ಟದ್ದು ಎಂದು ಹೇಳಬಹುದಾಗಿದ್ದು ಹಲವು ಇವೆ. ಅದರಲ್ಲಿ ಪ್ರಮುಖವಾದದ್ದು ನಾಯಕಿ ಯಾರೆಂಬುದನ್ನು ಇನ್ನೂ ಹೇಳದೇ ಇರುವುದು. ಇಬ್ಬರೂ ನಾಯಕಿಯರು ಎಂದು ಇಬ್ಬರ ಕಿವಿಗೂ ನಿರ್ದೇಶಕರು ಹೂ ಇಟ್ಟಿದ್ದಾರೆ.

ಆದರೆ ಅದು ನಿಜವಂತೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ರವೀಂದ್ರ, ನಿಮ್ಮಿಬ್ಬರ ಪಾತ್ರಗಳೂ ಪ್ರಮುಖವಾದುವೆಂದು ನಾನು ಇಬ್ಬರಿಗೂ ಹೇಳಿದ್ದೇನೆ. ಅದು ನಿಜ. ಚಿತ್ರದಲ್ಲಿ ನಿಜವಾದ ಹೀರೋಯಿನ್ ಯಾರು ಎಂಬುದನ್ನು ಪ್ರೇಕ್ಷಕರು ನಿರ್ಧರಿಸಲಿ ಎಂದಿದ್ದಾರೆ.

ಈ ನಡುವೆ ಚಿತ್ರ ಹಿಂದಿಗೂ ಹೋಗಲಿದೆಯಂತೆ. ಮಾಧವನ್ ಮತ್ತು ವಿದ್ಯಾ ಬಾಲನ್ ಜತೆ ಮಾತುಕತೆ ನಡೆಯುತ್ತಿದೆ. ಏಪ್ರಿಲ್ ಹೊತ್ತಿಗೆಲ್ಲ ಹಿಂದಿಯಲ್ಲಿ ಆರಂಭವಾಗಲಿದೆ. ಕೆ.ಸಿ. ಬೊಕಾಡಿಯಾ ಅವರು ಬೆಂಗಾಲಿ ಮತ್ತು ಪಂಜಾಬಿ ಆವೃತ್ತಿಗಳಿಗೆ ನಿರ್ಮಾಪಕರಾಗಲಿದ್ದಾರೆ ಎಂದು ರವೀಂದ್ರ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನೆಟ್ಟಲ್ಲಿ 'ನೆನಪಿರಲಿ' ಪ್ರೇಮ್ ಬೆತ್ತಲೆ ಚಿತ್ರಗಳ ಕಾರುಬಾರು!