ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬರೇ ಕೂದಲಿಗೆ ಲಕ್ಷಗಟ್ಟಲೆ ಖರ್ಚು ಮಾಡಿದ್ರೆ, ಸಿನಿಮಾ ಕಥೆ ? (Hare rama hare krishna | Murali | Kannada Movies | Chandra Chakori)
EVENT
ಚಿತ್ರಮಂದಿರದ ಮುಂದೆ ನಿಂತಿದ್ದ ಸಿನಿಮಾ ಕಟೌಟು ಅದೇಕೋ ಏನೋ ಎಂದಿಗಿಂತಲೂ ವ್ಯಗ್ರನಾಗಿತ್ತು. ಸುಡುಬಿಸಿಲಿರಲಿ, ಧೋ ಎಂದು ಸುರಿಯುವ ಮಳೆಯಿರಲಿ, ಅಥವಾ ರಕ್ತಹೆಪ್ಪುಗಟ್ಟಿಸುವ ಚಳಿಯಿರಲಿ ಎಂದೂ ಬೇಜಾರು ಮಾಡಿಕೊಳ್ಳದೆ 'ಬಕಪಕ್ಷಿ'ಯಂತೆ ಧ್ಯಾನಸ್ಥ ಸ್ಥಿತಿಯಲ್ಲಿ ಹವೆಗೆ ಮೈಯೊಡ್ಡಿ ನಿಂತಿರುತ್ತಿದ್ದ ಕಟೌಟು ಇಂದು ಧುಮುಧುಮು ಎಂದು ಧುಮುಗುಡುತ್ತಿರುವುದೇಕೆ ಎಂಬುದು ಅದನ್ನು ಅವಲೋಕಿಸುತ್ತಿದ್ದ ವಾಲ್‌ಪೋಸ್ಟರ್‌ಗೆ 'ಯಕ್ಷಪ್ರಶ್ನೆ'ಯಾಯಿತು...!!

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ಅಯ್ಯಾ ವತ್ಸಾ, ರಾಜ್ಯದ ರಾಜನ ಸಿಂಹಾಸನವು ಗಣ್ಣಿಯ ಮಣ್ಣಿನೊಳಗೆ ಉರುಳಿ ಬಿದ್ದುದಕ್ಕೆ ಅವರ ಪಾರ್ಟಿಯವರೇ ಮಂಕಾಗಿಲ್ಲ, ಬದಲಿಗೆ ಸಂಭ್ರಮಿಸುತ್ತಿದ್ದಾರೆ. ಅಂಥಾದ್ದರಲ್ಲಿ ಅವರು ನಿನಗೆ ಹೆಣ್ಣು ಕೊಟ್ಟ ಮಾವನೇನೋ ಎಂಬ ರೀತಿಯಲ್ಲಿ ಮಂಕಾಗಿರುವೆಯಲ್ಲಾ, ನಿನಗಿದು ತರವೇ? ಜೀವನವೆಂದರೆ ಸಿಹಿ-ಕಹಿಗಳ ಮಿಶ್ರಣ ಎಂಬುದಾಗಿ ನಾನು ನಿನಗೆ ಈ ಉಪದೇಶ ಮಾಡಿದ್ದು ಮರೆತುಬಿಟ್ಟೆಯಾ ಮಗೂ?' ಎಂದು ಸಿನಿಮಾ ವಾಲ್‌ಪೋಸ್ಟರ್ ಎಂಬ ಗುರುಸ್ವರೂಪಿಯು ಕಟೌಟಿಗೆ ಕೇಳಿಯೇಬಿಟ್ಟಿತು...!!

'ಅಯ್ಯೋ ಗುರುಗಳೇ ನನ್ನ ಕೋಪಕ್ಕೆ ಕಾರಣ ಅವರಲ್ಲ, ನಾಯಕ ನಟ ಮುರಳಿಯವರ ವರ್ತನೆ' ಎಂದು ಮೊಟ್ಟಮೊದಲಿಗೆಂಬಂತೆ ಕಟೌಟು ಗುರುಗಳ ಮೇಲೆ ರೇಗಿತು. ಅದು ತನ್ನ ಮಾತನ್ನು ಮುಂದುವರಿಸುತ್ತಾ, 'ಗುರುಗಳೇ, 'ಹರೇ ರಾಮ ಹರೇ ಕೃಷ್ಣ'ದ ನಾಯಕನಟ ಮುರಳಿಯವರು ಚಿತ್ರಗಳಲ್ಲಿನ ತಮ್ಮ ಕೇಶಶೃಂಗಾರ ಮತ್ತು ಅದರ ನಿರ್ವಹಣೆಗೆಂದೇ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ಕೇಳಿದೆ.

ಚಿತ್ರದ ಪಾತ್ರದ ಅಗತ್ಯಕ್ಕೆ ತಕ್ಕಂತೆ ಈ ಸಮರ್ಪಣಾ ಮನೋಭಾವವನ್ನು ಅವರು ಪ್ರಕಟಿಸುತ್ತಾರಂತೆ. ತಲೆಗೂದಲಿಗೆ 'ದುಡ್ಡು' ಖರ್ಚು ಮಾಡುವ ಬದಲು ಪಾತ್ರದ ಆಯ್ಕೆಗಾಗಿ ತಲೆಯೊಳಗಿನ ಒಂದಷ್ಟು 'ಬುದ್ಧಿ' ಖರ್ಚುಮಾಡಿದ್ದರೆ ಡಬ್ಬಾ ಪಾತ್ರಗಳಲ್ಲಿ ಅವರನ್ನು ನೋಡುವ ಮತ್ತು ಆ ಪಾತ್ರಗಳ ಕಟೌಟಿನ ಸ್ವರೂಪದಲ್ಲಿ ನಾನು ಕಾಣಿಸಿಕೊಳ್ಳುವ ಹಿಂಸೆಯಿಂದಲಾದರೂ ತಪ್ಪಿಸಿಕೊಳ್ಳಬಹುದಿತ್ತಲ್ಲವಾ ಎಂಬ ಕೋಪ ನನಗೆ' ಎಂದು ಬುಸುಬುಸು ಎಂದು ಉಸಿರುಬಿಟ್ಟಿತು.

ವಿನಾಕಾರಣ ಕೋಪಗೊಂಡಿರುವ ಕಟೌಟಿನ ಸ್ಥಿತಿಯನ್ನು ಕಂಡು ಗೋಡೆಯ ಮೇಲಿಂದಲೇ ನಕ್ಕ ವಾಲ್‌ಪೋಸ್ಟರು, 'ಅಯ್ಯಾ ವತ್ಸಾ, ಅದನ್ನೇ ಲೋಕಾರೂಢಿಯೆನ್ನುವುದು. '... ಜುಟ್ಟಿಗೆ ಮಲ್ಲಿಗೆ ಹೂವು ಕಟ್ಟಿಕೊಂಡರು' ಎಂಬ ಮಾತನ್ನು ನೀನು ಕೇಳಿಲ್ಲವೇ ಇದೂ ಹಾಗೇನೇ. ನಮ್ಮ ಜನಕ್ಕೆ ಕಲಾಕೃತಿಗಿಂತ ಅದಕ್ಕೆ ಲಗತ್ತಿಸಿರುವ ವೈಭವದ ಚೌಕಟ್ಟಿನ ಕಡೆಗೇ ಗಮನ.

ಗಮನ ಹರಿಸಬೇಕಿರುವುದು ಬಾಹ್ಯಾಡಂಬರದ ಕಡೆಗಲ್ಲ, ಅಂತಃಸತ್ವದ ಕಡೆಗೆ ಎಂಬ ನಿತ್ಯಸತ್ಯವನ್ನು ಅರಿತುಕೊಳ್ಳುವವರೆಗೂ ಇಂಥ ವಿಚಿತ್ರಗಳು ಘಟಿಸುತ್ತಲೇ ಇರುತ್ತವೆ. ಅದರಲ್ಲೂ ಚಿತ್ರರಂಗದಂಥ ಮಾಯಾಪ್ರಪಂಚದಲ್ಲಿ ಥಳುಕು-ಬಳುಕಿಗಷ್ಟೇ ಬೆಲೆ ಎಂಬುದನ್ನು ಅರಿಯದೆ ಹೀಗೆ ವೃಥಾ ವ್ಯಗ್ರನಾಗುವುದು ನಿನಗೆ ತರವೇ ಮಗೂ?' ಎಂದು ಕೇಳಿತು.

ತನಗೆ ಸಿನಿ-ಸಾಕ್ಷಾತ್ಕಾರ ಮಾಡಿಸುವುದರೊಂದಿಗೆ ತನ್ನನ್ನು ಪುನೀತನನ್ನಾಗಿಸಿದ ವಾಲ್‌ಪೋಸ್ಟರ್‌ಗೆ ನಮನಗಳನ್ನು ಸಲ್ಲಿಸಿದ ಕಟೌಟು 'ಇನ್ನೆಂದೂ ನನ್ನ ಕಾರ್ಡ್‌ಬೋರ್ಡ್‌ ಮನಸ್ಸನ್ನು ಮಲ್ಲಿಗೆಯಂತಾಗಿಸಿಕೊಳ್ಳುವುದಿಲ್ಲ' ಎಂಬ ಪ್ರತಿಜ್ಞೆಯನ್ನು ಕೈಗೊಂಡಿತು ಎಂಬಲ್ಲಿಗೆ 'ಗಾಂಧಿನಗರ' ಪುರಾಣದ 'ಕೇಶಶೈಲಿ' ಕಾಂಡವು ಸಮಾಪ್ತವಾಗುವುದು.....!!

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ