ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಜಯ ರಾಘವೇಂದ್ರ 'ಪರಮಶಿವ'ನಾದರೆ ಓಕೇನಾ...? (Parama Shiva | Vijaya raghavendra | Ravichandran | Sakshi Shivanand)
EVENT
ಅಣಜಿ ನಾಗರಾಜ್‌ ನಿರ್ಮಾಣದ ಮತ್ತು ಮಹೇಶ್‌ ಬಾಬು ನಿರ್ದೇಶನದ 'ಪರಮಶಿವ' ಚಿತ್ರಕ್ಕೆ ತಾರೆಯರು ಒಬ್ಬೊಬ್ಬರಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇದಕ್ಕೂ ಮುಂಚೆ ಲಭ್ಯವಾಗಿದ್ದ ಚಿತ್ರಸುದ್ದಿಯ ಅನುಸಾರ ನಟ ರವಿಚಂದ್ರನ್‌ರವರ ಸೋದರನ ಪಾತ್ರದಲ್ಲಿ ಯಶ್‌ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿತ್ತು. 'ರಾಜಧಾನಿ' ಮತ್ತು 'ಕಿರಾತಕ' ಚಿತ್ರಗಳು ಯಶಸ್ಸನ್ನು ಕಂಡಿದ್ದ ಆ ಸಂದರ್ಭದಲ್ಲಿ ಈ ಆಯ್ಕೆ ನಿರೀಕ್ಷಿತವಾಗಿತ್ತು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈಗ ಅಂಥದೇ ಮತ್ತೊಂದು ಸುದ್ದಿ ಬಂದಿದೆ. ಚಿತ್ರದ ಮತ್ತೊಂದು ಪಾತ್ರಕ್ಕೆ ವಿಜಯ ರಾಘವೇಂದ್ರ ಸೇರ್ಪಡೆಯಾಗಿದ್ದಾರೆ. ಕಾರಣವೇನಿರಬಹುದು ಊಹಿಸಿ? ಎಸ್‌, ನಿಮ್ಮ ಊಹೆ ನಿಜ. 'ವಿನಾಯಕ ಗೆಳೆಯರ ಬಳಗ' ಚಿತ್ರ ಮೆಚ್ಚುಗೆಗೆ ಪಾತ್ರವಾಗಿದೆಯಲ್ಲವೇ? ಅದರ ಯಶಸ್ಸನ್ನು ಎನ್‌ಕ್ಯಾಶ್‌ ಮಾಡಿಕೊಳ್ಳುವ ಪರಿ ಇದು. 'ಪರಮಶಿವ' ಚಿತ್ರದಲ್ಲಿ ಅವರು ರವಿಚಂದ್ರನ್‌ರವರ ಮತ್ತೋರ್ವ ಸೋದರನ ಪಾತ್ರವನ್ನು ವಹಿಸಲಿದ್ದಾರಂತೆ.

ನಿಮಗೆ ಸಾಕ್ಷಿ ಶಿವಾನಂದ್‌ ಎಂಬ ಬಿನ್ನಾಣಗಿತ್ತಿ ನೆನಪಿದೆಯಾ? 'ಗಲಾಟೆ ಅಳಿಯಂದ್ರು', 'ಸೈನಿಕ', 'ಕೋದಂಡರಾಮ' ಇವೇ ಮೊದಲಾದ ಚಿತ್ರಗಳಲ್ಲಿ ಈಕೆ ಅಭಿನಯಿಸಿದ್ದರು ಎಂಬುದು ನಿಮ್ಮ ನೆನಪಿನಲ್ಲಿರಬಹುದು. ಸಾಕಷ್ಟು ವರ್ಷಗಳ ಅಂತರದ ನಂತರ ಆಕೆಯೀಗ 'ಪರಮಶಿವ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇತ್ತೀಚಿನ ಸುದ್ದಿ.

ತಮಿಳಿನಲ್ಲಿ ಶರತ್‌ಕುಮಾರ್ ನಟಿಸಿದ್ದ 'ಸಮುದ್ರಂ' ಎಂಬ ಸೂಪರ್‌ಹಿಟ್‌ ಚಿತ್ರದ ರಿಮೇಕ್‌ ಇದಾಗಿದೆ. ತಮಿಳು ಆವೃತ್ತಿಯನ್ನು ಕೆ.ಎಸ್‌.ರವಿಕುಮಾರ್ ನಿರ್ದೇಶಿಸಿದ್ದರು. ತಮಿಳಿನ ಶರಣ್ಯ ಮೋಹನ್‌ ಈ ಚಿತ್ರದಲ್ಲಿ ರವಿಚಂದ್ರನ್‌ ಸೋದರಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ರಂಗಾಯಣ ರಘುರವರಿಗೆ ಒಂದು ಗಮನ ಸೆಳೆಯುವ ಪಾತ್ರವಿದೆ ಎಂದು ಹೇಳಲಾಗುತ್ತಿದೆ.

ತಮಿಳಿನಲ್ಲಿ ಸೂಪರ್‌ಹಿಟ್‌ ಆಗಿದೆಯೆಂದರೆ ಸಹಜವಾಗಿ ನಿರೀಕ್ಷೆಗಳು ಹೆಚ್ಚುತ್ತವೆ. 'ಪರಮಶಿವ'ನಿಗೂ ಯಶಸ್ಸಿನ ಸವಿ ದೊರೆಯಲಿ ಎಂದು ಆಶಿಸೋಣ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ