ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಹುತಾರಾ ಚಿತ್ರಗಳಿಗೆ ಸಡ್ಡು ಹೊಡೆಯಲಿದ್ದಾರೆಯೇ 'ಹುಡುಗರು' ? (Hudugaru | Punithraj kumar | Shrinagara Kitty | Kannada Movies)
EVENT
ಜನಮೆಚ್ಚಿನ ಓರ್ವ ನಾಯಕ ಮತ್ತು ಅವನೊಂದಿಗೆ ಮರಸುತ್ತಲು ರೂಪವತಿಯಾದ ಓರ್ವ ನಾಯಕಿ, ಒಂದೆರಡು ಡ್ಯುಯೆಟ್ಟು, ಒಂದೆರಡು ಫೈಟು, ಒಂದಷ್ಟು ಕರುಳು ಕತ್ತರಿಸುವ ಸನ್ನಿವೇಶಗಳು, ಮಧ್ಯೆ ಮಧ್ಯೆ ಹಾಸ್ಯದ ಹೂರಣ, ತೀರಾ ಬೇಕೆಂದರೆ ಒಂದು ಕ್ಯಾಬರೆ ಹಾಡು (ಈಗ ಅದನ್ನು ನಾಯಕಿಯರೇ ಮಾಡಿಬಿಡುತ್ತಾರೆ ಬಿಡಿ..!!) ಇದು ಒಂದು ಕಾಲಕ್ಕೆ ಜನಪ್ರಿಯ ಚಿತ್ರಗಳ ಫಾರ್ಮುಲಾ ಆಗಿತ್ತು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಾಲಾನುಕಾಲಕ್ಕೆ ಸಿದ್ಧಸೂತ್ರಗಳೂ ಬದಲಾಗುತ್ತಿವೆ. 'ಹುಡುಗರು' ಚಿತ್ರದ ಯಶಸ್ಸಿನ ಪರಿಯನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ 'ಮಲ್ಟಿಸ್ಟಾರರ್‌' ಚಿತ್ರಗಳು ಬೆಳ್ಳಿತೆರೆಗೆ ಲಗ್ಗೆಹಾಕಲಿವೆ ಎನಿಸುತ್ತದೆ. ಹಿಂದಿ ಚಿತ್ರರಂಗದಲ್ಲಿ ಇಂಥದೊಂದು ಪರಿಪಾಠವನ್ನು ನೋಡಬಹುದು. ಅಲ್ಲಿ ಹೆಸರಾಂತ ತಾರೆಯರು ಯಾವುದೇ ಮುಜುಗರವಿಲ್ಲದೆ ಒಟ್ಟಿಗೇ ನಟಿಸುತ್ತಾರೆ. ಆದರೆ ಕನ್ನಡದಲ್ಲಿ ಈ ಪರಿಪಾಠ ಅಷ್ಟೊಂದಿಲ್ಲ ಎಂದೇ ಹೇಳಬೇಕು.

ಹಾಗಂತ ಇಂಥ ಚಿತ್ರಗಳು ಕನ್ನಡದಲ್ಲಿ ಬಂದೇ ಇಲ್ಲ ಅಂತೇನೂ ಅಲ್ಲ. 'ಕರುಳಿನ ಕುಡಿ', 'ದಿಗ್ಗಜರು' ಚಿತ್ರಗಳಲ್ಲಿ ವಿಷ್ಣುವರ್ಧನ್‌ ಮತ್ತು ಅಂಬರೀಷ್‌, 'ಅಪೂರ್ವ ಸಂಗಮ' ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಶಂಕರ್‌ನಾಗ್‌, 'ಕಾಮನಬಿಲ್ಲು' ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಶಂಕರ್‌ನಾಗ್‌, 'ಒಡಹುಟ್ಟಿದವರು' ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಅಂಬರೀಷ್‌, 'ಬೆಂಕಿ-ಬಿರುಗಾಳಿ’, 'ಕಾರ್ಮಿಕ ಕಳ್ಳನಲ್ಲ' ಚಿತ್ರಗಳಲ್ಲಿ ವಿಷ್ಣುವರ್ಧನ್‌ ಮತ್ತು ಶಂಕರ್‌ನಾಗ್‌, 'ಮತ್ತೆ ಹಾಡಿತು ಕೋಗಿಲೆ' ಚಿತ್ರದಲ್ಲಿ ವಿಷ್ಣುವರ್ಧನ್‌ ಮತ್ತು ಅನಂತ್‌ನಾಗ್‌ ಹೀಗೆ ಇಲ್ಲಿಯೂ ಹಲವಾರು ನಿದರ್ಶನಗಳಿವೆ; ಆದರೆ ಪ್ರಮಾಣ ಕಮ್ಮಿ.

ವಾಸ್ತವವಾಗಿ 'ಹುಡುಗರು' ಚಿತ್ರದಲ್ಲಿ 'ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ' ಖ್ಯಾತಿಯ ಅಜಯ್‌ರಾವ್‌ ನಟಿಸಬೇಕಿತ್ತಂತೆ. ಆದರೆ ಕಾಲ್‌ಶೀಟ್‌ ಹೊಂದಾಣಿಕೆಯಾಗದ ಕಾರಣದಿಂದ ಇದು ಸಾಧ್ಯವಾಗಲಿಲ್ಲ. ಆದರೆ ಶ್ರೀನಗರ ಕಿಟ್ಟಿ ಮತ್ತು ಯೋಗೀಶ್‌ರವರು ಪುನೀತ್‌ ರಾಜ್‌ಕುಮಾರ್ ಜೊತೆಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಇದು ವಜ್ರೇಶ್ವರಿ ಕಂಬೈನ್ಸ್‌ ನಿರ್ಮಾಣದ ಚಿತ್ರವಾದರೂ ಪುನೀತ್‌ರಿಗೆ ಮಾತ್ರವಲ್ಲದೇ ಇನ್ನಿಬ್ಬರು ನಾಯಕ ನಟರಿಗೂ ಸಮಾನ ಅವಕಾಶಗಳನ್ನು ನೀಡಿರುವುದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಹೀಗಾಗಿ ಮತ್ತಷ್ಟು ಮಲ್ಟಿಸ್ಟಾರರ್ ಚಿತ್ರಗಳನ್ನು ಲಾಂಚ್‌ ಮಾಡಿದರೆ ಹೇಗೆ ಎಂಬುದರ ಕುರಿತು ಗಾಂಧಿನಗರದಲ್ಲಿ ಚರ್ಚೆಗಳು ನಡೆಯುತ್ತಿವೆಯಂತೆ.

ಹಾಗಂತ ಸುಮ್ಮಸುಮ್ಮನೇ ಬಹುತಾರೆಯರನ್ನು ಹಾಕಿಕೊಂಡ ಮಾತ್ರಕ್ಕೆ ಚಿತ್ರಗಳು ಯಶಸ್ವಿಯಾಗಿಬಿಡುವುದಿಲ್ಲ ಅಥವಾ ಚಿತ್ರರಸಿಕರು ಅವನ್ನು ಮೆಚ್ಚಿಕೊಂಡುಬಿಡುವುದಿಲ್ಲ. ಗಟ್ಟಿಕತೆ, ಉತ್ತಮ ನಿರೂಪಣೆ, ಕಿವಿಗಿಂಪಾದ ಹಾಡುಗಳಿದ್ದರೆ ಮಾತ್ರ ಇವು ಗಿಟ್ಟುತ್ತವೆ. ಈ ಹಿಂದೆ ಬಂದ 'ತ್ರಿನೇತ್ರ' ಎಂಬ ಚಿತ್ರದಲ್ಲಿ ಟೈಗರ್ ಪ್ರಭಾಕರ್ ಮತ್ತು ಶಶಿಕುಮಾರ್ ನಾಯಕರಾಗಿದ್ದರು. ಆಗ 'ಸಾಂಗ್ಲಿಯಾನಾ' ಸರಣಿಯ ಚಿತ್ರಗಳು ಸೂಪರ್‌ಹಿಟ್‌ ಆಗಿದ್ದರಿಂದ ಚಿತ್ರಕ್ಕೆ ಖಂಡಿತಾ ಸಹಾಯವಾಗುತ್ತದೆ ಎಂಬ ಎಣಿಕೆಯಲ್ಲಿ ತಾರಾಬಳಗದಲ್ಲಿ ಶಂಕರ್‌ನಾಗ್‌ರವರಿಗೂ ಸ್ಥಾನವನ್ನು ಕಲ್ಪಿಸಲಾಯಿತು. ನಾಯಕಿಯರ ಪಾತ್ರದಲ್ಲಿ ಸುಧಾರಾಣಿ, ಚಂದ್ರಿಕಾ ಕಾಣಿಸಿಕೊಂಡರು. ಇಷ್ಟಾಗಿಯೂ 'ತ್ರಿನೇತ್ರ' ಚಿತ್ರ ಸೂಪರ್‌ಹಿಟ್‌ ಎನಿಸಿಕೊಳ್ಳಲಿಲ್ಲ.

ಆದ್ದರಿಂದ ಮಲ್ಟಿಸ್ಟಾರರ್ ಚಿತ್ರಗಳನ್ನು ಯೋಜಿಸುವಾಗ ಒಂದಷ್ಟು ಗಟ್ಟಿತನವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ನಮ್ಮ ಚಿತ್ರೋದ್ಯಮಿಗಳು ಗಮನದಲ್ಲಿಟ್ಟುಕೊಳ್ಳಬೇಕು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ