ದ್ವಾರಕೀಶ್ ತಮ್ಮನ್ನು ತಾವೇ 'ಕರ್ನಾಟಕದ ಕುಳ್ಳ' ಎಂದು ಗೇಲಿಮಾಡಿಕೊಳ್ಳುತ್ತಾರೆ. ಹಾಗೆನ್ನುತ್ತಾ ಅನ್ನುತ್ತಲೇ ಕನ್ನಡದಲ್ಲಿ ಇಷ್ಟೊಂದು ಚಿತ್ರಗಳನ್ನು ಅವರು ನಿರ್ಮಿಸಿ ದುಡ್ಡು ಮಾಡಿಕೊಂಡುಬಿಟ್ಟರು ಎಂದು ಅವರನ್ನು ಗೇಲಿ ಮಾಡುವವರಿದ್ದಾರೆ. ಆದರೆ ಆ ಟೀಕೆಗಳಿಗೆಲ್ಲಾ ಇದು ಸಮಯವಲ್ಲ. ಏಕೆಂದರೆ ದ್ವಾರಕೀಶ್ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ದ್ವಾರಕೀಶ್‌ರವರ ಚಟುವಟಿಕೆ, ಉತ್ಸಾಹ, ಪಾದರಸದಂತೆ ಅಲ್ಲಿಲ್ಲಿ ಸುಳಿದಾಡುವ ವ್ಯಕ್ತಿತ್ವ ಇವೆಲ್ಲವನ್ನೂ ಕಂಡವರಿಗೆ ಅವರಿಗೆ 69 ವರ್ಷ ಎಂದರೆ ನಂಬಲು ಕಷ್ಟವಾಗಬಹುದು. ಆದರೆ ಇದು ಸತ್ಯ. ತಾಯಿ ಭುವನೇಶ್ವರಿ ಅವರಿಗೆ ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಿ ಇನ್ನಷ್ಟು ಮತ್ತಷ್ಟು ಚಿತ್ರಗಳನ್ನು ನಿರ್ಮಿಸುವ ಚೈತನ್ಯವನ್ನು ಅವರಿಗೆ ನೀಡಲಿ ಎಂದು ಹಾರೈಸೋಣ, ಶುಭಕೋರೋಣ.
ಚಿತ್ರರಂಗದಲ್ಲಿ ದ್ವಾರಕೀಶ್‌ರಷ್ಟು ಏಳುಬೀಳುಗಳನ್ನು ಕಂಡ ನಟ-ನಿರ್ಮಾಪಕ ಮತ್ತೊಬ್ಬನಿಲ್ಲ ಎಂದರೆ ಅದು ಅತಿಶಯೋಕ್ತಿ ಆಗಲಾರದು. ಈ ಚಿತ್ರ ಮಕಾಡೆ ಮಲಗಿತು, ಇನ್ನೇನು ದ್ವಾರಕೀಶ್ ಕಥೆ ಅಷ್ಟೇ ಎಂದುಕೊಂಡ ಸಮಯದಲ್ಲೆಲ್ಲಾ ಯಾವುದಾದರೊಂದು ಚಿತ್ರ ಅವರನ್ನು ಹಿಡಿದೆಬ್ಬಿಸುತ್ತಿತ್ತು. ಸುಮಾರು 5 ವರ್ಷಗಳ ಹಿಂದೆ ಬಿಡುಗಡೆಯಾಗಿ ಅವರ ಜೇಬು ತುಂಬಿದ 'ಆಪ್ತಮಿತ್ರ' ಚಿತ್ರ ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ ಎನ್ನಬಹುದು.
ದ್ವಾರಕೀಶ್ ಎಂದಕೂಡಲೇ ಅವರ ಮತ್ತು ಸಾಹಸಸಿಂಹ ವಿಷ್ಣುವರ್ಧನ್‌ರವರ ನಡುವಿದ್ದ ವಿರಸ, ಮುನಿಸುಗಳು ಗಮನ ಸೆಳೆಯುತ್ತವೆ. ಅದರ ಸತ್ಯಾಸತ್ಯತೆಗಳು ಏನೇ ಇರಲಿ ಇವರಿಬ್ಬರ ಜೋಡಿಯು ಕನ್ನಡ ಚಿತ್ರರಂಗಕ್ಕೆ ಹಲವಾರು ಯಶಸ್ವೀ ಚಿತ್ರಗಳನ್ನು ನೀಡಿದೆ ಎಂಬುದಂತೂ ಸುಳ್ಳಲ್ಲ. ಸದ್ಯಕ್ಕೆ ಸುದೀಪ್ ಅಭಿನಯದ 'ರಾಜಾ ವಿಷ್ಣುವರ್ಧನ' ಚಿತ್ರದ ನಿರ್ಮಾಣವನ್ನು ದ್ವಾರಕೀಶ್ ಸಂಪೂರ್ಣಗೊಳಿಸಿದ್ದಾರೆ. ಅದು ತಮ್ಮ ವೈಭವದ ದಿನಗಳನ್ನು ಮತ್ತೆ ತಮಗೆ ತಂದುಕೊಡಲಿದೆ ಎಂಬ ವಿಶ್ವಾಸ ಅವರದ್ದು. ಅವರ ವಿಶ್ವಾಸ ನಿಜವಾಗಲಿ.
ದ್ವಾರಕೀಶ್‌ರವರಿಗೆ ನಾವು ನೀವೆಲ್ಲರೂ ಹುಟ್ಟುಹಬ್ಬದ ಶುಭಾಶಯ ಕೋರೋಣ.