ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣದಲ್ಲಿ ಹಿಂಸಾಚಾರ ಆರಂಭ, ನಾಳೆ ಬಂದ್‌ಗೆ ಕರೆ (Osmania students | Srikrishna report | TRS | Telangana)
Bookmark and Share Feedback Print
 
ಶ್ರೀಕೃಷ್ಣ ಸಮಿತಿಯ ವರದಿ ಬಹಿರಂಗವಾಗುತ್ತಿದ್ದಂತೆ ಒಸ್ಮಾನಿಯಾ ಯುನಿವರ್ಸಿಟಿ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ಸುಗಳಲ್ಲೇ ಪ್ರತಿಭಟನೆ ಆರಂಭಿಸಿದ್ದು, ಕಲ್ಲು ತೂರಾಟ ನಡೆಸಿದ್ದಾರೆ. ಹಲವು ಪೊಲೀಸ್ ಸಿಬ್ಬಂದಿಗಳು ಘಟನೆಯಿಂದ ಗಾಯಗೊಂಡಿದ್ದಾರೆ. ಈ ನಡುವೆ ನಾಳೆ ತೆಲಂಗಾಣ ಬಂದ್‌ಗೆ ಕರೆ ನೀಡಲಾಗಿದೆ.

ಇದನ್ನೂ ಓದಿ: ತೆಲಂಗಾಣ ವರದಿ ಬಹಿರಂಗ; ಆಂಧ್ರವನ್ನು 3 ತುಂಡು ಮಾಡಿ

ಈ ನಡುವೆ ಪ್ರತಿಕ್ರಿಯೆ ನೀಡಿರುವ ಕೆ. ಚಂದ್ರಶೇಖರ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್), ಹೈದರಾಬಾದ್ ರಾಜಧಾನಿಯೊಂದಿಗೆ ತೆಲಂಗಾಣ ಪ್ರತ್ಯೇಕ ರಾಜ್ಯವೆಂಬುದನ್ನು ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಗಳನ್ನು ನಾವು ಒಪ್ಪುವುದಿಲ್ಲ ಎಂದು ಪ್ರಕಟಿಸಿದ್ದಾರೆ.
WD

ಶ್ರೀಕೃಷ್ಣ ಸಮಿತಿಯು ಕೆಲವು ಆಯ್ಕೆಗಳನ್ನು ಕೊಟ್ಟಿರುವುದನ್ನು ಕೇಳಿದ್ದೇವೆ. ವಿವೇಕಯುತ ಮತ್ತು ಸೂಕ್ತ ನಿರ್ಧಾರವೊಂದನ್ನು ಕೇಂದ್ರ ಸರಕಾರ ತೆಗೆದುಕೊಳ್ಳುತ್ತದೆ ಎಂಬ ಭರವಸೆ ನನ್ನದು. ಅದು 2009ರಲ್ಲಿ ತೆಲಂಗಾಣದ ಜನತೆಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದು ಚಂದ್ರಶೇಖರ ರಾವ್ ಪುತ್ರ, ಶಾಸಕ ಕೆ.ಟಿ. ರಾಮರಾವ್ ತಿಳಿಸಿದ್ದಾರೆ.

ಸಮಿತಿಯ ಶಿಫಾರಸು ಮತ್ತು ಕೇಂದ್ರದ ನಡೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿರುವ ಚಂದ್ರಶೇಖರ ರಾವ್, ಮತ್ತೊಂದು ಸುತ್ತಿನ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಕುರಿತು ಸಮಾಲೋಚನೆ ನಡೆಸಿದ ನಂತರ ನಿರ್ಧಾರಕ್ಕೆ ಬರಲಿದ್ದಾರೆ ಎಂದೂ ಮೂಲಗಳು ಹೇಳಿವೆ.

ತೆಲಂಗಾಣ ರಚನೆಗೆ ಆಗ್ರಹಿಸಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದ, ಭಾರೀ ಹಿಂಸಾಚಾರವನ್ನು ಕಂಡಿದ್ದ ಒಸ್ಮಾನಿಯಾ ಯುನಿವರ್ಸಿಟಿ ಮತ್ತೆ ಭುಗಿಲೇಳುವ ಲಕ್ಷಣಗಳು ಕಾಣಿಸುತ್ತಿವೆ.

ಸಮಿತಿಯು ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ಹೊರತುಪಡಿಸಿದ ಯಾವುದೇ ಶಿಫಾರಸುಗಳನ್ನು ನಾವು ಒಪ್ಪುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಒಸ್ಮಾನಿಯಾ ವಿದ್ಯಾರ್ಥಿಗಳು, ಇಂದು ಕೇಂದ್ರವು ವರದಿಯನ್ನು ಪ್ರಕಟಿಸುತ್ತಿದ್ದಂತೆ ಹಿಂಚಾಚಾರದಲ್ಲಿ ತೊಡಗಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡುವುದು, ಕಲ್ಲು ತೂರಾಟ ಮಾಡುವುದರಲ್ಲಿ ನಿರತರಾಗಿದ್ದಾರೆ.

ಅಲ್ಲದೆ ಶುಕ್ರವಾರ ತೆಲಂಗಾಣ ಬಂದ್ ಮಾಡುವಂತೆ ಕರೆ ನೀಡಿದ್ದಾರೆ. ಬಂದ್‌ಗೆ ಕರೆ ನೀಡಿರುವುದು ಒಸ್ಮಾನಿಯಾ ವಿದ್ಯಾರ್ಥಿಗಳಾಗಿರುವುದರಿಂದ ಬಹುತೇಕ ಯಶಸ್ವಿಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಎದುರಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಂಪೂರ್ಣ ಸಿದ್ಧತೆ ನಡೆಸಿವೆ. ಈಗಾಗಲೇ ಒಸ್ಮಾನಿಯಾ ಯುನಿವರ್ಸಿಟಿ ಸುತ್ತಮುತ್ತ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಡೆಗಳು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ