ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಮತ್ತು ಆಂಧ್ರಪ್ರದೇಶಕ್ಕೆ ಸಖತ್ ಲಾಭವಾಗಿರುವುದು ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿದ್ದರೂ, ಆಂಧ್ರದ ರಾಜಕೀಯ ನಾಯಕರು ಪೊಲಿಟಿಕಲ್ ಮೈಲೇಜ್ ಪಡೆದುಕೊಳ್ಳಲು ಟೊಂಕ ಕಟ್ಟಿ ನಿಂತಿದ್ದಾರೆ. ಅದರ ಮೊದಲ ಹೆಸರು ವೈ.ಎಸ್. ಜಗನ್ ಮೋಹನ್ ರೆಡ್ಡಿ.
ಕೃಷ್ಣಾ ಐತೀರ್ಪಿನಲ್ಲಿ ಆಂಧ್ರಪ್ರದೇಶಕ್ಕೆ ಅನ್ಯಾಯವಾಗಿದೆ ಎಂದು ಕ್ಯಾತೆ ತೆಗೆದಿರುವ ಜಗನ್, ನವದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದು ದಿನವಿಡೀ ಮುಂದುವರಿಯಲಿದೆ. ಜಗನ್ ಬೆಂಬಲಿಗರು ಕೂಡ ನೂರಾರು ಸಂಖ್ಯೆಯಲ್ಲಿ ಉಪವಾಸ ಮಾಡುತ್ತಿದ್ದಾರೆ.
2010ರ ಡಿಸೆಂಬರ್ 30ರಂದು ಹೊರಬಿದ್ದ ಕೃಷ್ಣಾ ಐತೀರ್ಪಿನಲ್ಲಿ ಕರ್ನಾಟಕಕ್ಕೆ 734+177=911 ಟಿಎಂಸಿ, ಮಹಾರಾಷ್ಟ್ರಕ್ಕೆ 585+081=666 ಟಿಎಂಸಿ, ಆಂಧ್ರಪ್ರದೇಶಕ್ಕೆ 811+190=1001 ಟಿಎಂಸಿ ನೀರನ್ನು ಕೃಷ್ಣಾ ಜಲ ಹಂಚಿಕೆ ನ್ಯಾಯಾಧಿಕರಣವು ಹಂಚಿಕೆ ಮಾಡಿತ್ತು. ಇದನ್ನು ಅಲ್ಪಸ್ವಲ್ಪ ಅಸಮಾಧಾನಗಳ ಹೊರತಾಗಿಯೂ ಆಂಧ್ರ ಸೇರಿದಂತೆ ಎಲ್ಲಾ ಸರಕಾರಗಳು ಒಪ್ಪಿಕೊಂಡಿದ್ದವು.
ಇಲ್ಲಿ ಸ್ಪಷ್ಟವಾಗಿ ಕಾಣುತ್ತಿರುವುದು ಜಗನ್ ರಾಜಕೀಯ. ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಹೊರ ಬಿದ್ದಿರುವ ಕಡಪಾ ಮಾಜಿ ಸಂಸದ ಹೊಸ ಪಕ್ಷ ಸ್ಥಾಪಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದ್ದಾರೆ. ಸಾಕಷ್ಟು ಮಂದಿಯನ್ನು ಈಗಾಗಲೇ ಬಗಲಿಗೆ ಹಾಕಿಕೊಂಡಿದ್ದಾರೆ. ಈಗ ಕೃಷ್ಣಾ ಐತೀರ್ಪು ಹೆಸರಿನಲ್ಲಿ ಆಂಧ್ರ ರೈತರನ್ನು ಕೂಡ ತನ್ನ ತೆಕ್ಕೆಗೆ ಎಳೆದುಕೊಳ್ಳುವುದು ಅವರ ತಂತ್ರ.
ಸಂಜೆಯವರೆಗೆ ಉಪವಾಸ ಸತ್ಯಾಗ್ರಹ ಮಾಡಲಿರುವ ಜಗನ್, ನಂತರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಕೃಷ್ಣಾ ಐತೀರ್ಪು ಸೇರಿದಂತೆ ಇತರ ಹಲವು ವಿಚಾರಗಳಲ್ಲಿ ಆಂಧ್ರ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ನಾಯ್ಡು ಕೂಡ ಪ್ರತಿಭಟನೆ? ಕೃಷ್ಣಾ ಐತೀರ್ಪಿನಿಂದ ಆಂಧ್ರಕ್ಕೆ ಅನ್ಯಾಯವಾಗಿದೆ ಎಂದು ಹೇಳಿಕೊಂಡಿರುವ ತೆಲುಗು ದೇಶಂ ಪಕ್ಷದ ವರಿಷ್ಠ ಚಂದ್ರಬಾಬು ನಾಯ್ಡು, ಇದರ ವಿರುದ್ಧ ಪ್ರತಿಭಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಆಂಧ್ರಕ್ಕೆ ಕೇವಲ ತೋರಿಕೆಗೆ ಮಾತ್ರ ನೀರು ಜಾಸ್ತಿ ಹಂಚಿಕೆಯಾಗುವಂತೆ ನೋಡಿಕೊಳ್ಳಲಾಗಿದೆ. ವಾಸ್ತವ ಸ್ಥಿತಿ ಬೇರೆಯೇ ಇದೆ. ಇದರ ವಿರುದ್ಧ ನಾವು ಶೀಘ್ರದಲ್ಲೇ ಪ್ರತಿಭಟನೆ ನಡೆಸುವುದಾಗಿ ಹೇಳಿದರು.