ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಸರ್ವಜ್ಞ » ಅಣ್ಣ-ತಂಬಿ ಭಾವ ಬೆಸೆದ ತ್ರಿಪದಿ ತ್ರಿವಿಕ್ರಮ (Sarvajna in Chennai | Aynavaram | Karunanidhi | Yaddyurappa)
 
ಅವಿನಾಶ್ ಬಿ.
ಚೆನ್ನೈ: ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಸಂದರ್ಭ ನಡೆದ 'ಅಣ್ಣ-ತಂಬಿ' (ತಮ್ಮ) ಬೆಸುಗೆ ಚೆನ್ನೈ ಕಾರ್ಯಕ್ರಮದಲ್ಲಿಯೂ ಮುಂದುವರಿಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿ, ಎರಡು ವರ್ಷಗಳ ಹಿಂದೆ ನಾನು ಅಣ್ಣನನ್ನು ಕಳೆದುಕೊಂಡ ನೋವನ್ನು ಆ ಸ್ಥಾನ ತುಂಬುವ ಮೂಲಕ ಕರುಣಾನಿಧಿ ನೀಗಿಸಿದ್ದಾರೆ. ಕರುಣಾನಿಧಿಯವರಲ್ಲಿ ನಾನು ನನ್ನ ಅಣ್ಣನನ್ನು ಕಂಡೆ. ಪ್ರೀತಿ ಪೂರ್ವಕ ಅಣ್ಣನಿಗೆ ವಂದನೆ, ಅಭಿವಂದನೆ ಎಂದಾಗ ಸಭೆಯಲ್ಲಿ ಕರತಾಡನ.

Sarvajna In Chennai
Avinash
WD
ಇದೇ ಎಳೆಯನ್ನು ತಮ್ಮ ಭಾಷಣದಲ್ಲಿ ಹಿಡಿದುಕೊಂಡು ಮುಂದುವರಿಸಿದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ನನಗೆ ಒಡಹುಟ್ಟಿದ ತಮ್ಮನೇ ಇಲ್ಲ. ಆ ಕೊರತೆ ನೀಗಿಸಿದ್ದಾರೆ ಯಡಿಯೂರಪ್ಪ ಎಂದು ನುಡಿದಾಗ ಸಭೆಯಲ್ಲಿ ಮತ್ತೆ ಕರತಾಡನ, ಶಿಳ್ಳೆ.

Yaddurappa, Karunanidhi
Avinash
WD
ಅದೇ ರೀತಿ ಉಭಯ ನಾಯಕರು ಕೂಡ ತಮ್ಮ ಭಾಷಣದಲ್ಲಿ, ಎರಡೂ ರಾಜ್ಯಗಳು ಸಹೋದರ ಭಾವದಿಂದ ಸಹಬಾಳ್ವೆ ನಡೆಸಬೇಕು, ಸೌಹಾರ್ದತೆ ಇದೇ ರೀತಿ ಮುಂದುವರಿಸಬೇಕು ಎಂದು ಕಳಕಳಿಯಿಂದ ವಿನಂತಿಸಿಕೊಂಡರು.

ಹೊಟ್ಟೆ ಕಿಚ್ಚು ಬೇಡ:
ಮಾತು ಮುಂದುವರಿಸಿದ ಕರುಣಾನಿಧಿ, ನಾನು ನನ್ನ ಪಕ್ಷದ ಕಾರ್ಯಕರ್ತರನ್ನೆಲ್ಲರನ್ನೂ ತಂಬೀ ಅಂತ ಕರೆಯುತ್ತೇನೆ. ಹೀಗಾಗಿ ಡಿಎಂಕೆಯ 'ಮಕ್ಕಳ್' (ಜನರು) ಏನೂ ಅಸೂಯೆ ಪಡಬೇಕಾಗಿಲ್ಲ ಎಂದು ಹೇಳಿದಾಗ, ಸಭೆಯಲ್ಲಿದ್ದ ಡಿಎಂಕೆ ಕಾರ್ಯಕರ್ತರು, ಅನುಯಾಯಿಗಳಿಂದ ಕರುಣಾನಿಧಿಗೆ ಜಯಘೋಷ.

'ಕೃಷ್ಣ'ನಿಗೆ ಚಿನ್ನದ ರಥ:
ಅಟ್ಟಾವರ್ ರಾಮದಾಸ್ ಅವರು ತಮ್ಮ ಆಶಯ ಭಾಷಣದಿಂದಲ್ಲಿ ಯಡಿಯೂರಪ್ಪ ಅವರನ್ನು ಹಾಡಿ ಹೊಗಳುತ್ತಾ, ಅವರನ್ನು ಆಧುನಿಕ ಶ್ರೀಕೃಷ್ಣ ಎಂದು ಸಂಬೋಧಿಸಿದರು. ಇತಿಹಾಸ ಸೃಷ್ಟಿಸಲು ಧರ್ಮರಾಯನಿಗೆ ಸಾಧ್ಯವಾಗಲಿಲ್ಲ, ಅದು ಸಾಧ್ಯವಾಗಿದ್ದು ಶ್ರೀಕೃಷ್ಣನಿಗೆ ಎನ್ನುತ್ತಾ, ಮುಖ್ಯಮಂತ್ರಿಯನ್ನು ಎರಡನೇ ಶ್ರೀಕೃಷ್ಣ ಎಂದು ಕರೆದರು.

ಬಳಿಕ ಸಮಾರಂಭದಲ್ಲಿ ಕರುಣಾನಿಧಿ ಅವರು ಯಡಿಯೂರಪ್ಪರಿಗೆ ಚಿನ್ನ ಲೇಪಿತ, ಬೆಳ್ಳಿಯಿಂದ ನಿರ್ಮಿಸಲಾದ, ತಮಿಳುನಾಡಿನ ಅತ್ಯಂತ ಪ್ರಖ್ಯಾತ ತಿರುವಾರೂರ್ ರಥದ ದೊಡ್ಡ ಪ್ರತಿಕೃತಿಯನ್ನು ನೀಡಿ ಸನ್ಮಾನಿಸಿದರು.

ಕರುಣಾನಿಧಿಗೆ 'ಮುತ್ತು' ಕೊಟ್ಟ ಯಡಿಯೂರಪ್ಪ:
ತಮಗೆ ರಥ ಕೊಟ್ಟ ಕರುಣಾನಿಧಿಗೆ ಯಡಿಯೂರಪ್ಪ ಅವರೂ ಸುಮ್ಮನೆ ಬಿಡಲಿಲ್ಲ. ಮುತ್ತು ಕೊಟ್ಟರು. ಅಂದರೆ, ಚಿನ್ನ ಸಹಿತ ಮುತ್ತಿನ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರಲ್ಲದೆ, ಪೂರ್ಣ ಚಿನ್ನದ ಫಲಕವೊಂದನ್ನೂ ಕೊಟ್ಟರು. ಇದರೊಂದಿಗೆ, ಸರ್ವಜ್ಞ ಮತ್ತು ಯಡಿಯೂರಪ್ಪ ಚಿತ್ರವಿರುವ ತೈಲವರ್ಣ ಚಿತ್ರವೊಂದನ್ನು ಕೂಡ ತಮ್ಮ ಹಸ್ತಾಕ್ಷರ ಹಾಕಿ ಕೊಟ್ಟರು ಕರುಣಾನಿಧಿ.

ಕರುಣಾನಿಧಿ 'ಕನ್ನಡಿಗರ ತಮಿಳು ಕಣ್ಮಣಿ':
ಕರುಣಾನಿಧಿಗೆ ಮೈಸೂರು ಪೇಟ ತೊಡಿಸಿ 'ಕನ್ನಡಿಗರ ತಮಿಳು ಕಣ್ಮಣಿ' ಎಂಬ ಬಿರುದು ಸಹಿತ ರಜತ ಪದಕವನ್ನು ನೀಡಿ ಅಟ್ಟಾವರ್ ರಾಮದಾಸ್ ಸನ್ಮಾನಿಸಿದರು.

ಸಮಾರಂಭಕ್ಕೆ ಕಳೆ ತುಂಬಿದ ಉಭಯ ಭಾಷಾ ಚಿತ್ರ ಕಲಾವಿದರು:
ಚಿತ್ರ ನಟರಾದ ರಜನೀಕಾಂತ್, ಕಮಲಹಾಸನ್, ಜಯಂತಿ, ಬಿ.ಸರೋಜಾದೇವಿ, ಮನೋರಮಾ, ಪ್ರಕಾಶ್ ರೈ, ಪೂಜಾ ಗಾಂಧಿ ಮುಂತಾಗಿ ಉಭಯ ಭಾಷೆಗಳಲ್ಲಿ ನಟಿಸಿರುವ ಚಿತ್ರ ತಾರೆಯರು ಕೂಡ ಸಮಾರಂಭದಲ್ಲಿ ಭಾಗವಹಿಸಿ ಭಾಷಾ ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದರು.

ಕನ್ನಡಿಗ ಮಂತ್ರಿ ಮಾಗಧರು: ಸಂಸದರಾದ ಅನಂತ್ ಕುಮಾರ್, ಡಿ.ಬಿ.ಚಂದ್ರೇಗೌಡ, ಕರ್ನಾಟಕ ಸಚಿವರಾದ ವಿ.ಎಸ್.ಆಚಾರ್ಯ, ರಾಮಚಂದ್ರೇಗೌಡ, ಕೆ.ಎನ್.ಬಚ್ಚೇಗೌಡ, ಕಾನೂನು ಸಚಿವ ಸುರೇಶ್, ಕರುಣಾಕರ ರೆಡ್ಡಿ ಮುಂತಾದವರು ಕೂಡ ವೇದಿಕೆಯಲ್ಲಿದ್ದರು.

ದಯವಿಟ್ಟು ಸುಮ್ಮನಿರಿ, ಪ್ಲೀಸ್ ಸೈಲೆಂಟ್ ಆಗಿ ಕೇಳಿ:
ಯಡಿಯೂರಪ್ಪ ಭಾಷಣಕ್ಕೆ ಮುನ್ನ ಕನ್ನಡಿಗರ ಜಯಘೋಷ, ಕೇಕೆ, ಬೊಬ್ಬೆ ಮುಗಿಲು ಮುಟ್ಟಿತ್ತು. ಮತ್ತೊಂದೆಡೆಯಿಂದ ಕರುಣಾನಿಧಿಗೆ ಕೂಡ ಜಯಕಾರಗಳು ಕೇಳಿಬರುತ್ತಿದ್ದವು. ಇದರಿಂದ ದಿಢೀರ್ ಆಗಿ ವೇದಿಕೆಯಲ್ಲಿ ಎದ್ದು ನಿಂತ ಮತ್ತೂರು ಕೃಷ್ಣಮೂರ್ತಿಯವರು, ನೀವೆಲ್ಲಾ ಹೀಗೆ ಮಾಡಬಹುದೇ? ದಯವಿಟ್ಟು ಎಲ್ಲರೂ ಮೌನವಾಗಿ ಸಭಾ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಿ ಎಂದು ಮನವಿ ಮಾಡಿಕೊಂಡರು.

ಬದುಕಿನ ಅತ್ಯಂತ ಸಂಭ್ರಮದ ಕ್ಷಣ:
ಇದು ನನ್ನ ಬದುಕಿನ ಅತ್ಯಂತ ಸಂಭ್ರಮದ ಸ್ಮರಣೀಯ ದಿನ. ಧನ್ಯತಾ ಭಾವ ಹೊಂದಿದ್ದೇನೆ. ಪ್ರಧಾನಿ-ರಾಷ್ಟ್ರಪತಿಯವರೆಗೂ ಹೋಗಿದ್ದ ಪ್ರತಿಮೆ ವಿವಾದಕ್ಕೆ ಕೇವಲ ನಾವಿಬ್ಬರು ಮಾತುಕತೆ ನಡೆಸುವ ಮೂಲಕ ಪರಿಹಾರ ಕಂಡುಕೊಂಡಿದ್ದೇವೆ. ಇದೇ ರೀತಿ ಎಲ್ಲ ವಿವಾದಗಳು ಕೂಡ ಮಾತುಕತೆಯ ಮೂಲಕವೇ ಬಗೆಹರಿಯುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು ಯಡಿಯೂರಪ್ಪ.

ಇಬ್ಬರು ಮುಖ್ಯಮಂತ್ರಿಗಳಿಗೆ ರೈಲು:
ಸಮಾರಂಭವು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮೈದಾನದಲ್ಲಿ ನಡೆದಿದ್ದು, ಐಸಿಎಫ್ ರೈಲ್ವೇ ಉದ್ಯೋಗಿಗಳ ಸಂಘವು ಎರಡೂ ಮುಖ್ಯಮಂತ್ರಿಗಳಿಗೆ ರೈಲಿನ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿತು.

ನಾಸ್ತಿಕತೆ ಪ್ರದರ್ಶಿಸಿದ ಕರುಣಾನಿಧಿ:
ಮಹಾಭಾರತದ ಶ್ರೀಕೃಷ್ಣನ ಮೇಲೆಲ್ಲಾ ನನಗೆ ನಂಬಿಕೆ ಇಲ್ಲ, ಆದರೆ ಈ ವೇದಿಕೆಯನ್ನು ಅತ್ಯಂತ ಸುಂದರವಾಗಿ, ಅಲಂಕಾರಗಳೊಂದಿಗೆ ರೂಪಿಸಿಕೊಟ್ಟ ಜೆ.ಟಿ.ಕೃಷ್ಣನ ಮೇಲೆ ನನಗೆ ನಂಬಿಕೆ ಇದೆ, ಹೆಮ್ಮೆ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ವೇದಿಕೆಯಲ್ಲಿ ಜೆ.ಟಿ.ಕೃಷ್ಣ ಅವರನ್ನು ಸನ್ಮಾನಿಸುತ್ತಾ ನುಡಿದರು.

ಇದೇ ಸಂದರ್ಭ ಗೀತೆಗಳ ಗಾಯನ ಮಾಡಿದ ಡಾ.ಶಿವಚಿದಂಬರಂ ಮತ್ತು ಕನ್ನಡ ಭಕ್ತಿಗೀತೆಗಳ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟ ಚೈತ್ರಾ ಸಾಯಿರಾಂ ಅವರನ್ನು ಕೂಡ ಸನ್ಮಾನಿಸಲಾಯಿತು.

ಬ್ರಹ್ಮ ಕಪಾಲ-ಸರ್ವಜ್ಞ
ಕರುಣಾನಿಧಿ ಅವರು ತಮ್ಮ ಭಾಷಣದಲ್ಲಿ ಬ್ರಹ್ಮ ಕಪಾಲ ಕಥೆಯನ್ನು ಕೂಡ ಉಲ್ಲೇಖಿಸಿ, ಬ್ರಹ್ಮ ಸೃಷ್ಟಿ ಕರ್ತ, ಶ್ರೇಷ್ಠ ಎಂದೆಲ್ಲಾ ಹೇಳುತ್ತಾರೆ, ಆದರೆ ಈಶ್ವರನು ಬ್ರಹ್ಮನಿಗಿದ್ದ ಐದರಲ್ಲಿ ಒಂದು ತಲೆಯನ್ನು ಚಿವುಟಿದಾಗ ಚತುರ್ಮುಖ ಬ್ರಹ್ಮನಾದ. ಆತ ಸೃಷ್ಟಿ ಕರ್ತನಾಗಿದ್ದಿದ್ದರೆ ಹೋದ ತಲೆಯನ್ನು ಸೃಷ್ಟಿ ಮಾಡಕೊಳ್ಳಬಹುದಿತ್ತಲ್ಲ ಎಂದು ಹೇಳಿ, ಇದಕ್ಕೆ ಸಂಬಂಧಿಸಿದ ಸರ್ವಜ್ಞನ ವಚನವನ್ನು ಉಲ್ಲೇಖಿಸಿದರು. ಈ ವಚನ ಕನ್ನಡದಲ್ಲಿ ಹೀಗಿದೆ:
ಹುಟ್ಟಿಸುವನಜನೆಂಬ | ಕಷ್ಟದ ನುಡಿ ಬೇಡ
ಹುಟ್ಟಿಪನು ತನ್ನ ಶಿರ ಹರಿಯೆ ಮತ್ತೊಂದ
ಹುಟ್ಟಿಸನದೇಕೆ | ಸರ್ವಜ್ಞ

Kannada Flags
Avinash
WD
ಕನ್ನಡವೆಲ್ಲಿತ್ತು?:
ಸಮಾರಂಭವು ಭಾಷಾ ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಅದ್ದೂರಿಯಾಗಿಯೇ ನಡೆಯಿತು ಮತ್ತು ಬೆಂಗಳೂರಿಗಿಂತಲೂ ಚೆನ್ನಾಗಿ, ಅಚ್ಚುಕಟ್ಟಾಗಿ ನಡೆಯಿತು ಎಂದು ಇಲ್ಲಿಗೆ ಬಂದ ಸಭಿಕರು ಉದ್ಗರಿಸುತ್ತಿದ್ದರು. ಅಯನಾವರಂ ಜೀವಾ ಪಾರ್ಕಿನ ಸುತ್ತೆಲ್ಲಾ ಕನ್ನಡ ಧ್ವಜಗಳು ಹಾರುತ್ತಿದ್ದವು. ಆದರೆ ಇದೇ ಸ್ಥಿತಿ ವೇದಿಕೆಯ ಸುತ್ತ ಮುತ್ತ ಇರಲಿಲ್ಲ. ಕರ್ನಾಟಕದಿಂದ ಬಂದ ಕನ್ನಡಿಗರು ಕನ್ನಡ ಧ್ವಜ ಹೊತ್ತು ಸಭಾಂಗಣದಲ್ಲಿ ಬೀಸುತ್ತಿದ್ದರು. ಹೊರಗೆ ಆಮಂತ್ರಣದ ಯಥಾಪ್ರತಿಯ ಹೊರತಾಗಿ, ಆಗಮಿಸುವ ಅತಿಥಿಗಳಿಗೆ ಅಥವಾ ಕನ್ನಡ ಮಹನೀಯರಿಗೆ, ಕನ್ನಡಿಗರಿಗೆ ಶುಭಾಶಯ ಕೋರುವ ಕನ್ನಡ ನುಡಿಗಳಿರಲಿಲ್ಲ. ಇದನ್ನು ನೋಡಿದರೆ ಚೆನ್ನೈಯಲ್ಲಿರುವ ಕನ್ನಡ ಸಂಘಗಳನ್ನು ದೂರವಿರಿಸಲಾಯಿತೇ ಎಂಬ ಸಂಶಯ ಮೂಡುವಂತೆ ಕಾಣಿಸಿತು. ಅಲ್ಲಿಗೆ ಬಂದ ಸಭಿಕರೊಬ್ಬರು ಪ್ರಶ್ನಿಸಿದ್ದು : "ಇಲ್ಲಿಯ ಕನ್ನಡ ಸಂಘಗಳು ಕನಿಷ್ಠ ಕನ್ನಡದಲ್ಲಿ ಶುಭಾಶಯ ಕೋರುವ ಫಲಕಗಳನ್ನೂ ಹಾಕಿಲ್ಲವಲ್ಲ ಏಕೆ?"

ಡಿಎಂಕೆ-ಬಿಜೆಪಿ ಮೈತ್ರಿ?:
DMK, BJP Banner
WD
ಕೇಂದ್ರದಲ್ಲಿ ವಾಸ್ತವವಾಗಿ ಡಿಎಂಕೆಯು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಪಾಲುದಾರನಾಗಿದ್ದರೂ, ಸಭಾಂಗಣದ ಸುತ್ತಮುತ್ತ ಡಿಎಂಕೆ ಧ್ವಜಗಳು, ಚಿಹ್ನೆಗಳು ಹಾಗೂ ಬಿಜೆಪಿಯ ಚಿಹ್ನೆಗಳು, ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ರಾಜನಾಥ್ ಸಿಂಗ್ ಅವರು ಕೂಡ ಯಡಿಯೂರಪ್ಪ-ಕರುಣಾನಿಧಿ ಮೈತ್ರಿಯ ಬ್ಯಾನರ್‌ಗಳಲ್ಲಿ ಬಿಜೆಪಿ ಚಿಹ್ನೆಯ ನಡುವೆ ರಾರಾಜಿಸುತ್ತಿದ್ದರು.

ಇದೇ ಮಾತನ್ನು ಕರುಣಾನಿಧಿ ಕೂಡ ತಮ್ಮ ಭಾಷಣದಲ್ಲಿ ಉಲ್ಲೇಖಿಸಿಯೇಬಿಟ್ಟರು. ಸಭಾಂಗಣಕ್ಕೆ ಬರುವಾಗ ಇಲ್ಲೇನು ಡಿಎಂಕೆ-ಬಿಜೆಪಿ ಮೈತ್ರಿ ನಡೆಯುತ್ತಿದೆಯೇ ಎಂಬ ಭಾವನೆಯೂ ಮೂಡಿತು ಎಂದು ಅವರು ಲಘು ಧಾಟಿಯಲ್ಲಿ ನುಡಿದರು.

ಸುಮಾರು ಹದಿನೈದು ಸಾವಿರದಷ್ಟು ಮಂದಿ ಕನ್ನಡಿಗರು ಮತ್ತು ತಮಿಳರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಆದರೆ ಒಂದು ಹಂತದಲ್ಲಿ ಸಭಾಂಗಣದ ಒಳಗೆ ಹೋಗುವ ಮತ್ತು ಹೊರಗೆ ಬರಲು ಸ್ವಲ್ಪ ತ್ರಾಸವಾಗಿತ್ತು. ಭದ್ರತಾ ಕಾರಣಗಳಿಂದ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿಯೇ ಒಳಬಿಡುತ್ತಿದ್ದರು. ಎಲ್ಲರಿಗೂ ಕನ್ನಡ ಮತ್ತು ತಮಿಳು ಎರಡರಲ್ಲಿಯೂ ಇರುವ ಸರ್ವಜ್ಞನ ವಚನಗಳ ಪುಸ್ತಕಗಳನ್ನು ಹಂಚಲಾಯಿತು. ಇದರಲ್ಲಿ ಬೆಂಗಳೂರಿನಲ್ಲಿ ಉಭಯ ಮುಖ್ಯಮಂತ್ರಿಗಳು ಮಾಡಿದ್ದ ಭಾಷಣದ ಸಾರಾಂಶವೂ ಇತ್ತು.

ಒಟ್ಟಿನಲ್ಲಿ, ಇಷ್ಟೊಂದು ಅದ್ದೂರಿಯಿಂದ ಉಭಯ ರಾಜ್ಯಗಳ ನಡುವಣ ಭಾಷಾ ಬಾಂಧವ್ಯ ಬೆಸೆಯುವ ಕಾರ್ಯಕ್ರಮವೊಂದು ನಡೆದಿರುವುದು ಐತಿಹಾಸಿಕ ಕ್ಷಣ. ಇಲ್ಲಿ ಯಾವುದೇ ವಿರೋಧವೂ ವ್ಯಕ್ತವಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಸೂಚನೆ: ಕಾರ್ಯಕ್ರಮದ ವಿಶೇಷ ವೀಡಿಯೋಗೆ ಕೆಳಗಿರುವ "ವೀಡಿಯೋ ವೀಕ್ಷಿಸಿ" ಕ್ಲಿಕ್ ಮಾಡಿ.

ಸಮಾರಂಭದ ವಿಶೇಷ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಕರುಣಾನಿಧಿ ರಾಜಕೀಯ ಚಾಟಿಯೇಟು: ಇಲ್ಲಿ ಕ್ಲಿಕ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ