ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಸರ್ವಜ್ಞ » ಬಾಂಧವ್ಯದ ವೇದಿಕೆಯಲ್ಲಿ ಕರುಣಾ ರಾಜಕೀಯ ಚಾಟಿ (Karunanidhi | Sarvajna in Chennai | Yaddiyurappa | Thiruvalluvar)
Karunanidhi, Yaddyurappa
WD
ಯಾವುದೇ ಒಪ್ಪಂದ ಅಥವಾ ಷರತ್ತುಗಳನ್ನು ಮುಂದಿಟ್ಟು ತಿರುವಳ್ಳುವರ್-ಸರ್ವಜ್ಞ ಪ್ರತಿಮೆಗಳ ಅನಾವರಣ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ, ಉಭಯ ರಾಜ್ಯಗಳ ಮಧ್ಯೆ ಭಾಷಾ ಸಾಮರಸ್ಯ ಏರ್ಪಡುತ್ತಿದೆ. ತಮಿಳರು ಮತ್ತು ಕನ್ನಡಿಗರು ಸಹೋದರತೆಯ ಭಾವನೆ ಪ್ರದರ್ಶಿಸುತ್ತಿದ್ದಾರೆ. ಆದರೆ ಕೆಲವರಿಗೆ ಇದು ಸಹಿಸಲಾಗುತ್ತಿಲ್ಲ, ಈ ರೀತಿ ಸ್ನೇಹ-ಪ್ರೀತಿ ಮುಂದುವರಿಯುವುದು ಅವರಿಗೆ ಬೇಕಾಗಿಲ್ಲ ಎಂದು ಹೇಳಿದರು.

ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದ ಅವರು, ಇದೇ ರೀತಿಯಲ್ಲಿ ಶ್ರೀಲಂಕಾ ವಿವಾದವೂ ಬಗೆಹರಿಯುತ್ತಿದೆ. ಆದರೆ ಈ ವಿವಾದ ಅಂತ್ಯಗೊಳ್ಳುವುದು ಕೆಲವರಿಗೆ ಬೇಕಿಲ್ಲ, ಅವರು ಏನಾದರೂ ತಗಾದೆ ತೆಗೆದು ಅದನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕಿ ಜೆ.ಜಯಲಲಿತಾ ಅವರನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ನುಡಿದರು.

ದಾರಿಯುದ್ದಕ್ಕೂ ಡಿಎಂಕೆ-ಬಿಜೆಪಿ ಧ್ವಜಗಳನ್ನು ನೋಡಿದರೆ ನಮ್ಮದು ಕಾಂಗ್ರೆಸ್ ಮಿತ್ರಪಕ್ಷವಾದರೂ ಬಿಜೆಪಿಯತ್ತ ವಾಲುತ್ತಿದೆಯೇ ಎಂಬ ಭಾವನೆ ಮೂಡುವಂತಾಯಿತು ಎಂದೂ ಕರುಣಾನಿಧಿ ಹೇಳಿದರು.

ಭ್ರಾತೃತ್ವ: ಕನ್ಯಾಕುಮಾರಿಯಿಂದ ಚೆನ್ನೈಯವರೆಗೂ ಸಾಕಷ್ಟು ಪ್ರತಿಮೆಗಳನ್ನು ಉದ್ಘಾಟಿಸಿದ್ದೇನೆ, ಆದರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಉದ್ಘಾಟಿಸುವ ಮೂಲಕ, ನನ್ನ ಶಪಥ ಈಡೇರಲು ಅವಕಾಶ ಮಾಡಿಕೊಟ್ಟ 'ಚಿನ್ನ ತಂಬಿ' ಯಡಿಯೂರಪ್ಪರನ್ನು ಅಭಿನಂದಿಸಿದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ತಮಿಳುನಾಡಿನಲ್ಲಿ ಬೇರೆ ರಾಜ್ಯಗಳವರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದ್ದೇವೆ. ಕನ್ನಡ ಶಾಲೆಗಳಿಗೆ ಯುಗಾದಿಗೆ, ಮಲಯಾಳಿ ಶಾಲೆಗಳಿಗೆ ಓಣಂಗೆ ರಜೆ ನೀಡುತ್ತಿದ್ದೇವೆ. ಅದೇ ರೀತಿ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆಯನ್ನೂ ಮಾಡುತ್ತಿದ್ದೇವೆ, ಕನ್ನಡ ಕಲಿಕೆಗೆ ನೆರವು ನೀಡುತ್ತಿದ್ದೇವೆ ಎಂದು ವಿವರಿಸಿದರು ಕರುಣಾನಿಧಿ.

ಭಾವೈಕ್ಯತೆ ಸಂದೇಶ ಸಾರುವ ಈ ಪ್ರತಿಮೆಗಳು ಉಭಯ ರಾಜ್ಯಗಳ ನಡುವಣ ಸೌಹಾರ್ದತೆಗೆ ಪೂರಕವಾಗಲಿ. ಎರಡೂ ರಾಜ್ಯಗಳ ನಾಯಕರಾದ ನಾವಿಬ್ಬರು (ಚಿನ್ನ ತಂಬಿ, ಪೆರಿಯಣ್ಣ) ಸಹೋದರರಾಗಿದ್ದೇವೆ. ಅದೇ ರೀತಿ ರಾಜ್ಯದ ಜನರು ಕೂಡ ಸಹೋದರತೆ ಬೆಳೆಸಿಕೊಂಡರೆ ಯಾವುದೇ ಸಮಸ್ಯೆ ಉದ್ಭವವಾಗಲು ಅವಕಾಶ ದೊರೆಯದು ಎಂದು ಹೇಳಿದರು.

ಸಮಾರಂಭದ ಮತ್ತಷ್ಟು ವಿಶೇಷತೆಗಳು, ತುಣುಕುಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಸಮಾರಂಭದ ವಿಶೇಷ ಫೋಟೋ ಗ್ಯಾಲರಿ ಇಲ್ಲಿದೆ.
ಇದನ್ನು ಸಹ ಶೋಧಿಸು: ಕರುಣಾನಿಧಿ, ಸರ್ವಜ್ಞ, ಚೆನ್ನೈ, ಅಯವಾವರಂ ಜೀವಾ ಪಾರ್ಕ್, ಯಡಿಯೂರಪ್ಪ, ಕನ್ನಡ, ತಮಿಳು